ಪಾರು ಪಾರ್ವತಿಯ ಜೀವನ ಪ್ರಯಾಣ
ಚಿತ್ರ: ಪಾರು ಪಾರ್ವತಿ
ನಿರ್ಮಾಣ: ಪಿ ಬಿ ಪ್ರೇಮನಾಥ್ ನಿರ್ಮಾಣ ನಿರ್ದೇಶನ: ರೋಹಿತ್ ಕೀರ್ತಿ ನಟನೆ: ದೀಪಿಕಾ ದಾಸ್, ಪೂನಂ ಸರ್ ನಾಯಕ್
ಪಾರುಪಾರ್ವತಿ ಎನ್ನುವ ಈ ಸಿನಿಮಾದ ಟೈಟಲ್ ರೋಲ್ ನಲ್ಲಿ 60ವರ್ಷದ ಮಹಿಳೆ ಕಾಣಿಸಿದ್ದಾರೆ. ಇದೇ ಈ ಚಿತ್ರದ ಮೊದಲ ವಿಶೇಷತೆ ಎನ್ನಬಹುದು.
ಪಾರ್ವತಿ 62 ವರ್ಷದ ಮಹಿಳೆ. ಈಕೆಗೆ ಪತಿ, ಮಕ್ಕಳು ಇದ್ದರೂ ಮನೆಯಲ್ಲಿ ಒಂಟಿ. ಪತಿ ಮಿಲಿಟರಿ ಉದ್ಯೋಗದಲ್ಲಿ ಉತ್ತ ಭಾರತ ಸೇರಿಕೊಂಡಾತ ದೂರವಾಗಿಯೇ ಇದ್ದಾನೆ. ಮಕ್ಕಳು ಫೋನ್ ಮೂಲಕ ಯೋಗಕ್ಷೇಮ ವಿಚಾರಿಸುವುದಷ್ಟೇ. ಹೀಗೆ ಮನೆಯಲ್ಲಿ ಒಂಟಿಯಾಗಿ ಕುಳಿತು ಬೇಸರ ಮೂಡಿಸಿಕೊಂಡ ಪಾರ್ವತಿ ಗಂಡನಿರುವ ಜಾಗಕ್ಕೆ ಖುದ್ದಾಗಿ ಹೊರಡಲು ಬಯಸುತ್ತಾಳೆ. ಈ ಪ್ರಯಾಣಕ್ಕೆ ಕಾರಣ ತನ್ನ ಐವತ್ತನೇ ವರ್ಷದ ಮ್ಯಾರೇಜ್ ಅನಿವರ್ಸರಿಯನ್ನು ಪತಿಯ ಜತೆ ಕಳೆಯಬೇಕು ಎನ್ನುವ ಆಕಾಂಕ್ಷೆ. ಹೀಗೆ ಹೊರಡುವಾಕೆಗೆ ಸಾಥ್ ನೀಡುವ ಸುಂದರಿಯೇ ಪಾಯಲ್.
ದಕ್ಷಿಣದಿಂದ ಉತ್ತರದೆಡೆಗಿನ ಪಯಣದಲ್ಲಿ ರಸ್ತೆ ತಿರುವುಗಳ ಹಾಗೆಯೇ ಕತೆಯಲ್ಲೂ ಒಂದಷ್ಟು ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಇವೆ. ಅವೆಲ್ಲಗಳನ್ನು ದಾಟಿ ಈ ಜೋಡಿ ಗಮ್ಯ ಸೇರ್ತಾರ ಎನ್ನುವುದೇ ಕತೆ.
ಪಾರು ಪಾತ್ರದಲ್ಲಿ ಹಿರಿಯ ನಟಿ ಪೂನಂ ನಟಿಸಿದ್ದಾರೆ. ಕನ್ನಡತಿ ಅಲ್ಲದಿದ್ದರೂ ಕನ್ನಡಿಗರ ಮನ ಸೆಳೆಯುವ ನಟನೆಗೆ ಪ್ರಯತ್ನಿಸಿದ್ದಾರೆ. ಪಾಯಲ್ ಪಾತ್ರದಲ್ಲಿ ದೀಪಿಕಾ ದಾಸ್ ಜೀವಿಸಿದ್ದಾರೆ. ಕಾರು, ಬೈಕ್ ಚಲಾಯಿಸುವ ದೃಶ್ಯಗಳಿಗೆ ದೀಪಿಕಾ ಸಹಜವಾಗಿಯೇ ಹೊಂದಿಕೊಳ್ಳುತ್ತಾರೆ.
ಇಬ್ಬರು ಮಹಿಳೆಯರನ್ನೇ ಪ್ರಧಾನವಾಗಿಟ್ಟುಕೊಂಡಿರುವ ಚಿತ್ರ ಕೌಟುಂಬಿಕ ಪ್ರೇಕ್ಷಕರ ಜತೆಗೆ ಯುವ ಸಮೂಹವನ್ನು ಸೆಳೆಯುವಂಥ ಸಾಹಸ ದೃಶ್ಯಗಳನ್ನು ಹೊಂದಿವೆ. ವಾಹನ, ಪ್ರಯಾಣದ ಕ್ರೇಜ್ ಇರುವವರಿಗೆ ಈ ಸಿನಿಮಾ ಖಂಡಿತವಾಗಿ ಇಷ್ಟವಾಗುತ್ತದೆ.