ಜೀ ಕನ್ನಡ ವಾಹಿನಿಯ ಸರೆಗಮಪ ಸಂಗೀತ ಕಾರ್ಯಕ್ರಮ ೧೪ ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈಗ ೧೫ನೇ ಸೀಜನ್ ಆರಂಭಕ್ಕೆ ವೇದಿಕೆಯನ್ನು ಸಿದ್ದಪಡಿಸಿದೆ. ಈ ಸೀಜನ್‌ನಲ್ಲಿ ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ ಪ್ರಕಾಶ್ ಅಲ್ಲದೆ ರಾಜೇಶ್ ಕೃಷ್ಣನ್ ಕೂಡ ಕಾರ್ಯಕ್ರಮದ ನಿರ್ಣಾಯಕರ ಸ್ಥಾನದಲ್ಲಿರುತ್ತಾರೆ. ಕಳೆದ ವರ್ಷ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದ ಗಾಯಕ ರಾಜೇಶ್ ಕೃಷ್ಣನ್ ಅವರು ಈಬಾರಿ ತನ್ನ ಗುರುಗಳಾದ ಹಂಸಲೇಖ ಅವರ ಕರೆಗೆ ಓಗೊಟ್ಟು ಮತ್ತೆ ಎಂಟ್ರಿಯಾಗಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಸೀಜನ್ ೧೫ಗಾಗಿ ಈ ಬಾರಿ ರಾಜ್ಯದ ೩೦ ಜಿಲ್ಲೆಗಳಲ್ಲೂ ಸಂಚರಿಸಿ ೩೦ ಜನರನ್ನು ಫೈನಲಿಸ್ಟ್‌ಗೆ ತಂದಿದೇವೆ. ಇದರಲ್ಲಿ ಕೊಡಗು ಜಿಲ್ಲೆಯನ್ನು ಬಿಟ್ಟು ಉಳಿದೆಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಡಿಷನ್ ಮಾಡಿದ್ದೇವೆ, ಸುಮಾರು ೪ರಿಂದ ೫ ಲಕ್ಷ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ರಾಜ್ಯದ ಯಾವುದೇ ಪ್ರತಿಭಾವಂತರೂ ಮಿಸ್ ಆಗಬಾರದು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು. ಎಂದಿನಂತೆ ಈ ಸಲವೂ ನಾಡಿನುದ್ದಗಲಕ್ಕೂ ಸಂಚರಿಸಿ ಹಲವಾರು ಪ್ರತಿಭೆಗಳನ್ನು ಗುರ್ತಿಸಿ ಅವರಲ್ಲಿ ಉತ್ತಮರೆನಿಸಿದ ೩೫ ಜನರನ್ನು ಆಯ್ಕೆ ಮಡಿ ಸರಿಗಮಪ ವೇದಿಕೆಗೆ ಕರೆತರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ ನಾವಾಡುವ ಎಲ್ಲ ಮಾತುಗಳಿಗೂ ಜೀ ವಾಹಿನಿ ವೇದಿಕೆಯನ್ನು ಕಲ್ಪಿಸಿದೆ. ಈ ೫ ತಿಂಗಳಲ್ಲಿ ನಾನು ಬಹಳಷ್ಟು ಕಡೆ ಅಭಿಮಾನಿಗಳನ್ನು ಸಂಪರ್ಕಿಸಿದ್ದೇನೆ. ನನ್ನ ಹಾಗೂ ರಾಜೇಶ್ ಕೃಷ್ಣನ್ ಅವರದು ಬರೀ ಸ್ನೇಹ ಅಲ್ಲ, ಬಾಂಧವ್ಯ. ನಮಗೆ ಗೊತ್ತಿಲ್ಲದ ಹಾಗೆ ಒಂದು ಗುರು ಶಿಶ್ಯರ ಪರಂಪರೆ ಬೆಳೆದು ಬಂದಿದೆ. ಇಲ್ಲಿ ಇಬ್ಬರು ಟ್ರೂ ಸಿಂಗರ‍್ಸ್ ಇದ್ದಾರೆ, ಅಲ್ಲದೆ ಮತ್ತಿಬ್ಬರು ಟ್ರೂ ಮ್ಯೂಸಿಕ್ ಕಂಪೋಜರ‍್ಸ್ ಕೂಡ ಇದ್ದಾರೆ. ಈ ಬಾರಿ ಪ್ರತಿ ಕಂಟೆಸ್ಟೆಂಟ್ ಮಾಸ್ಟರ್ ಕ್ಲಾಸ್‌ನಲ್ಲಿ ಬರಬೇಕಿದೆ ಎಂದು ಹೇಳಿದರು. ನಂತರ ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿ ಕಳೆದ ವರ್ಷ ನಮ್ಮ ತಂದೆಯ ಅಗಲಿಕೆ ಬೇಸರ ತಂದಿತ್ತು. ಈಗ ಮತ್ತೆ ನಾನು ಇಲ್ಲಿಗೆ ಬರಲು ಕಾರಣ ನನ್ನ ಗುರುಗಳು. ಮತ್ತೊಮ್ಮೆ ಗೆಳೆಯರೆಲ್ಲರ ಜೊತೆ ಬೆರೆಯುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು. ಶನಿವಾರ ಹಾಗೂ ಭಾನುವಾರ ರಾತ್ರಿ ೭.೩೦ಕ್ಕೆ ಪ್ರಸಾರವಾಗಲಿದೆ.