Sri Guru Raghavendra Swamy.News

Wednesday, January 01, 2025

37

 

*ಜನವರಿ 5 ರ ಭಾನುವಾರ ಬೆಂಗಳೂರಿನ ಶಾಲಿನಿ ಮೈದಾನದಲ್ಲಿ ಇದೇ ಮೊದಲ ಬಾರಿಗೆ "ಶ್ರೀ ಗುರು ರಾಘವೇಂದ್ರ ಉತ್ಸವ"* .

 

 *ಸಿರಿ ಕನ್ನಡ ವಾಹಿನಿ ಆಯೋಜಿಸುತ್ತಿರುವ ಈ ಸಮಾರಂಭದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗಿ* .

 

ಇದೇ ಮೊಟ್ಟ ಮೊದಲ ಬಾರಿಗೆ ಸಿರಿ ಕನ್ನಡ ವಾಹಿನಿಯ ವತಿಯಿಂದ ಜನವರಿ 5 – 2025ರ ಭಾನುವಾರದಂದು - ಬೆಂಗಳೂರಿನ ಶಾಲಿನಿ ಮೈದಾನದಲ್ಲಿ “ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಉತ್ಸವ”ವು 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಘನ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ.

ಈ ಉತ್ಸವದಲ್ಲಿ ರಾಯರ ದೇಗುಲ ಮತ್ತು ಬೃಂದಾವನವನ್ನು ಮರು ಸೃಷ್ಟಿಸಲಾಗುತ್ತದೆ.  1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರಿಂದ ಬೃಂದಾವನಕ್ಕೆ ಪೂಜೆ ಮತ್ತು ಸೇವೆಗಳು ನಡೆಯಲಿದೆ. ಈ ಉತ್ಸವದಲ್ಲಿ 30 ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.  ಈ ಕಾರ್ಯಕ್ರಮವನ್ನು ಡಾ. ಮಧುಸೂದನ್ ಮತ್ತು ಸಿ.ಆರ್ ಮುರಳಿ ಅವರ ಸಹಯೋಗದಲ್ಲಿ ಮಾಡಲಾಗುತ್ತಿದೆ.

 ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ನಿರಂತರವಾಗಿ ರಾಯರ ಭಜನೆ, ರಾಯರ ಬಗ್ಗೆ ಪ್ರವಚನ, ರಾಯರ ಭಕ್ತಿ ಗೀತೆಗಳು, ಹರಿಕಥೆ, ಪ್ರಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಮಂಜುಳಾ ಗುರುರಾಜ್, ಅರ್ಚನಾ ಉಡುಪ ಮತ್ತು ಮುಂತಾದವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಕರ್ನಾಟಕದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ಧರಾಮಯ್ಯನವರು ಸೇರಿದಂತೆ ಮಂತ್ರಿಗಳು, ಲೋಕಸಭಾ ಸದಸ್ಯರು, ಶಾಸಕರು, ಸಿನೆಮಾ ತಾರೆಯರು ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಕನ್ನಡದ ಖ್ಯಾತ ನಟ ಡಾಲಿ ಧನಂಜಯ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಸುಮಾರು 25 ಸಾಧಕರಿಗೆ “ಶ್ರೀ ಗುರು ರಾಘವೇಂದ್ರ” ಪ್ರಶಸ್ತಿಯನ್ನು ನೀಡಿ ವೇದಿಕೆಯಲ್ಲಿ ಸನ್ಮಾನಿಸುತ್ತಾರೆ.

ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಮಂತ್ರಾಲದಿಂದಲೇ ತಂದ ಪರಿಮಳ ಪ್ರಸಾದ ಮತ್ತು ಮಂತ್ರಾಕ್ಷತೆಯನ್ನು ವಿತರಣೆ ಮಾಡಲಾಗುವುದು.

 

 ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮತ್ತು 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಜೀವನ ಚರಿತ್ರೆ ಮತ್ತು ಮಹಿಮೆಯನ್ನು ಆಕರ್ಷಕ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು. 30*40 ಅಡಿಯ ಬೃಹತ್ ಅತ್ಯಾಕರ್ಷಕ ರಂಗೋಲಿ ಕೂಡ ಕಾರ್ಯಕ್ರಮದ ವಿಶೇಷತೆಗಳಲ್ಲೊಂದು.

 

ಭಕ್ತಾದಿಗಳು ತಮ್ಮ ಸಂಕಲ್ಪದೊಂದಿಗೆ 108 ಬಾರಿ “ಶ್ರೀ ಗುರು ರಾಘವೇಂದ್ರಾಯ ನಮಃ” ಎಂದು ಬರೆದು ತಂದರೆ ಬೃಂದಾವನದಲ್ಲಿಟ್ಟು ಪೂಜಿಸಲಾಗುತ್ತದೆ. 

 

ಈ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಫೆಬ್ರವರಿ 3 ರಿಂದ, ಸೋಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಸಿರಿ ಕನ್ನಡ ವಾಹಿನಿಯಲ್ಲಿ “ರಾಯರಿದ್ದಾರೆ” ಎಂಬ ಹೊಚ್ಚ ಹೊಸ ಕಾರ್ಯಕ್ರಮ ಪ್ರಸಾರವಾಗಲಿದೆ.

 

ಪ್ರತಿದಿನ 30 ನಿಮಿಷ ಪ್ರಸಾರವಾಗುವ “ರಾಯರಿದ್ದಾರೆ” ಕಾರ್ಯಕ್ರಮದಲ್ಲಿ ಮಂತ್ರಾಲಯದ ನಿತ್ಯ ಪೂಜೆ, 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಚನ, ರಾಯರ ಪವಾಡಗಳು, ರಾಯರ ಕೃಪೆಗೆ ಒಳಗಾದ  ಭಕ್ತಾದಿಗಳ ಸಂದರ್ಶನ ಮತ್ತು ರಾಯರ ಜೀವನ ಚರಿತ್ರೆಯನ್ನು ಮರು ಸೃಷ್ಟಿಸಿ ಪ್ರಸಾರ ಮಾಡಲಾಗುವುದು.

Copyright@2018 Chitralahari | All Rights Reserved. Photo Journalist K.S. Mokshendra,