ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲೆ ನಾಗಿಣಿಗೆ ಮೊದಲ ಸ್ಥಾನ. ನಾಗಿಣಿಯಲ್ಲಿ ಕಲಾವಿದರು ಬಳಸುವ ಕಾಸ್ಟೂಮ್, ನಿರ್ದೇಶಕರು ಆಯ್ಕೆ ಮಾಡಿಕೊಳ್ಳುವ ಲೊಕೇಷನ್, ಮೇಕಿಂಗ್, ಗ್ರಾಫಿಕ್ಸ್ ಎಲ್ಲವೂ ಕೂಡ ನಾಗಿಣಿಯನ್ನ ಕನ್ನಡದ ಅತ್ಯುತ್ತಮ ಧಾರಾವಾಹಿಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ, ಪ್ರತಿವಾರ ಕಥೆಯಲ್ಲಿ ತೆಗೆದುಕೊಳ್ಳುವ ಅದ್ಭುತ ತಿರುವಗಳಿಂದ ದಿನದಿಂದ ದಿನಕ್ಕೆ ನಾಗಿಣಿಯ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ, ಈಗಷ್ಟೇ ೫೦೦ ಸಂಚಿಕೆಗಳನ್ನ ಮುಗಿಸಿರುವ ನಾಗಿಣಿ ತಂಡ ಸಾವಿರದ ಸಂಚಿಕೆಯತ್ತ ಮುಖ ಮಾಡಿ ನಿಂತಿದೆ, ನಾಗಿಣಿಯಾಗಿದ್ದುಕೊಂಡು ಮನುಷ್ಯನ ಜೊತೆಗೆ ಪ್ರೀತಿಯಲ್ಲಿ ಬೀಳುವ ಅಮೃತಾಗೆ , ಪ್ರೀತಿ ಮುಖ್ಯಾನೋ ಅಥವ ನಾಗಮಣಿ ವಶಪಡಿಸಿಕೊಂಡು ವಂಶನಾಶ ಮಾಡೋದು ಮುಖ್ಯಾನೋ ಅನ್ನುವ ತೀರ್ಮಾನ ತೆಗೆದುಕೊಳ್ಳೋ ಸಂಧಿಗ್ಧ ಪರಿಸ್ತಿತಿ ಎದುರಾಗಿದೆ. ಸಂಬಂಧ ಹಾಗು ಕರ್ತವ್ಯದಲ್ಲಿ ಅಮೃತಾಳ ಆಯ್ಕೆ ಯಾವುದು ಅನ್ನೋದೆ ಮುಂದಿನ ಕತೆಯ ಜೀವಾಳವಾಗಿದೆ.
ನಾಗಿಣಿಯ ನಾಗಮನಿ ಮೇಲೆ ದುಷ್ಟರ ಕಣ್ಣು ಈಗ ದುಪ್ಪಟ್ಟಾಗಿದೆ. ನಾಗಿಣಿಯನ್ನೆ ಅಪಹರಣ ಮಾಡಿ ನಾಗಮಣಿಯನ್ನ ತೆಗೆದುಕೊಳ್ಳುವ ಹಂತಕ್ಕು ದುಷ್ಟರು ತಲುಪಿದ್ದಾರೆ, ವಿಶೇಷ ಶಕ್ತಿಗಳನ್ನ ಬಳಸಿ ನಾಗಿಣಿಯನ್ನ ಅಪಹರಣ ಮಾಡಿ ಅಂಡಮಾನ್ ಕಾಡಿನಲ್ಲಿಟ್ಟಿದ್ದಾರೆ, ಕಥಾನಾಯಕ ಅರ್ಜುನ್ ತನ್ನ ಹೆಂಡತಿಯನ್ನು ಪಹರಣಕಾರರಿಂದ ಬಿಡಿಸಿಕೊಂಡು ಬರೋದಕ್ಕೆ ಅಂಡಮಾನ್‌ನತ್ತ ಪ್ರಯಾಣಿಸುತ್ತಾನೆ. ಹಲವು ಹಂತಗಳ ದುಷ್ಟರ ಕೋಟೆಯನ್ನು ಬೇಧಿಸಿ ಅಮೃತಾಳನ್ನ ಕಾಪಾಡಿಕೊಂಡು ದುಷ್ಟರ ನೆಲಗಳನ್ನೆಲ್ಲ ದ್ವಂಸ ಮಾಡಿ ಬರುವ ನಾಗಿಣಿಯ ಸಂಚಿಕೆಗಳು ಅದ್ಭುತವಾಗಿ ಮೂಡಿಬಂದಿವೆ. ಅಂಡಮಾನ್ ನಿಕೋಬಾರ್ ನ ಸುತ್ತಮುತ್ತಲಿನ ಬೀಚುಗಳಾದ ರಾಧಾ ನಗರ್ , ಹ್ಯಾವ್ ಲಾಕ್, ಬ್ರದರ್ , ಹಾಗು ಅವೇಸ್ ಐಲ್ಯಾಂಡ್‌ಗಳ ಮನಮೋಹಕ ಲೊಕೇಷನ್ನುಗಳಲ್ಲಿ ನಾಗಿಣಿಯ ಕ್ಯಾಮರ ಓಡಾಡಿ ಬಂದಿರೋದು ನಾಗಿಣಿಯನ್ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಪೂರಕವಾಗಿದೆ.
ಅದೂ ಅಲ್ಲದೇ ಅಂಡಮಾನ್ ನಿಕೋಬಾರ್ ಸಂಚಿಕೆಗಳು ಇದೇ ತಿಂಗಳ ೧೬ನೇ ತಾರೀಖು ಸೋಮವಾರದಿಂದ ಮುಂದಿನ ಮೂರು ವಾರಗಳು ಪ್ರಸಾರವಾಗಲಿದೆ. ಇಡೀ ಸಂಚಿಕೆಯಲ್ಲಿ ಅಂಡಮಾನ್ ಸೌಂದರ್ಯದ ಜೊತೆಗೆ ಗ್ರಾಫಿಕ್ಸ್ ಕೂಡ ಹೈಲೇಟ್ ಆಗುವ ಲಕ್ಷಣಗಳಿವೆ. ಹುಲಿ ಸಿಂಹ ಹೆಬ್ಬಾವು ಎಲ್ಲವೂ ಗ್ರಾಫಿಕ್ಸಲ್ಲಿ ಕ್ರಿಯೇಟ್ ಆಗಿ ಪ್ರೇಕ್ಷಕರಿಗೆ ನಾಗಿಣಿಯನ್ನ ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನವನ್ನ ಜೀ ಕನ್ನಡ ಮಾಡಿದೆ. ನಿರ್ಮಾಣ ಮತ್ತು ನಿರ್ದೇಶನದ ಜವಬ್ದಾರಿಯನ್ನ ಹೆಸರಾಂತ ನಿರ್ದೇಶಕ ಹಯವದನ ಹೊತ್ತಿದ್ದಾರೆ.
ಜೀ ಕನ್ನಡದ ಎಲ್ಲಾ ಧಾರಾವಾಹಿಗಳನ್ನೂ ಕೂಡ ಮುಂದಿನ ಹಂತಕ್ಕೆ ತೆಗೆದುಕೊಂಡೂ ಹೋಗುವ ನಿರ್ಧಾರ ಮಾಡಿದ್ದೇವೆ, ಕಥೆ ಏನೂ ಕೇಳುತ್ತದೇಯೋ ಅದನ್ನ ಪರಿಣಾಮಕಾರಿಯಾಗಿ ತೆರೆಗೆ ತರುವಲ್ಲಿ ನಮ್ಮ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಲಿದ್ದೇವೆ ಅನ್ನೋದು ಜೀ ಕನ್ನಡ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ಅಭಿಪ್ರಾಯ.