Sirikannada.News

Monday, December 07, 2020

579

ಸಿರಿ ಕನ್ನಡದ ಸ್ವಂತಿಕೆಯ ಸಂಭ್ರಮಕ್ಕೆ ಎರಡನೇ ವಾರ್ಷಿಕೋತ್ಸವದ ಗರಿ

 

         ಕನ್ನಡಿಗರ ಹೆಮ್ಮೆಯ ವಾಹಿನಿ ಸಿರಿ ಕನ್ನಡಕ್ಕೆ, ಈಗ ಎರಡನೇ ವಾರ್ಷಿಕೋತ್ಸವದ ಸಂಭ್ರಮ. ಈ ಸಂತಸದ ಕ್ಷಣದಲ್ಲಿರುವ ಸಿರಿ ಕನ್ನಡದ ಆರಂಭಿಕ ಹೆಜ್ಜೆಗಳೇನೂ ಅಷ್ಟು ಸುಲಭದ್ದಾಗಿರಲಿಲ್ಲ. ಸಿನಿಮಾ ಮತ್ತು ಮನರಂಜನಾ ವಾಹಿನಿಯಾಗಿ ಕನ್ನಡದ ನೆಲದಲ್ಲಿ ಚಿಗುರೊಡೆದ, ಸಿರಿ ಕನ್ನಡದ ಮುಂದೆ ಅಗಾಧ ಸವಾಲುಗಳೇ ಇದ್ದವು, ಅದಾಗಲೇ ಭದ್ರವಾಗಿ ತಳವೂರಿದ್ದ ದೊಡ್ಡ ದೊಡ್ಡ ಮಾಧ್ಯಮಗಳ ನಡುವೆ, ಕನ್ನಡಿಗರ ಮನರಂಜನೆಯನ್ನೇ ಗುರಿಯಾಗಿಟ್ಟುಕೊಂಡು ಬಂದ ವಾಹಿನಿ ಈ ರೀತಿ ಹಂತ ಹಂತವಾಗಿ ಬೆಳೆದು ನಿಲ್ಲಲು ಕಾರಣವಾಗಿದ್ದು, ಅದೇ ಕನ್ನಡಿಗರ ನಂಬಿಕೆ ಮತ್ತು ಆಶೀರ್ವಾದ.

        ಹೊಸದಾಗಿ ಆರಂಭವಾದರೂ ಎವರ್‌ಗ್ರೀನ್, ಕ್ಲಾಸಿಕ್ ಸಿನಿಮಾಗಳು ಮತ್ತು ಸಿನಿಮಾ ಆಧಾರಿತ ಸ್ಪೆಷಲ್ ಕಾರ್ಯಕ್ರಮಗಳೊಂದಿಗೆ ಜನರ ಮನಸ್ಸಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತಾ ಬಂದ ಸಿರಿ ಕನ್ನಡ, ಇಂದು ಸಂಪೂರ್ಣ ಮನರಂಜನಾ ವಾಹಿನಿಯಾಗಿ ಕರ್ನಾಟಕದಲ್ಲಿ ಕಂಗೊಳಿಸುತ್ತಿದೆ. ಸಿರಿಕನ್ನಡದ ದಾರಿಯಲ್ಲಿ ಎದುರಿಸಿದ ಮತ್ತೊಂದು ಸವಾಲು ಎಂದರೆ ಅದು ಕೋವಿಡ್‌ನ ದಿನಗಳದ್ದು. ಏಕೆಂದರೆ ಈ ಕ್ಷಣ ಎಂತಹವರನ್ನೂ ಒಮ್ಮೆ ಅಲುಗಾಡಿಸೋ ಸೂಚನೆ ನೀಡಿದ ಕ್ಷಣ. ಅಂತಹಾ ಸಮಯದಲ್ಲೂ ಸಿರಿ ಕನ್ನಡವನ್ನು ಕೈ ಹಿಡಿದದ್ದು ಕನ್ನಡಿಗರ ಅಭಿಮಾನ ಮತ್ತು ಪ್ರೀತಿ. ಅದರ ಫಲವಾಗಿ ಹೊಮ್ಮಿದ ವಿಭಿನ್ನ ಕಥೆಯ ಹೊಚ್ಚ ಹೊಸ ಧಾರಾವಾಹಿಗಳು, ವೆರೈಟಿ ಗೇಮ್ ಶೋಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಹೊಸ ರೂಪದ ಡಿವೋಷನಲ್ ಶೋಗಳು. ಎಲ್ಲದಕ್ಕೂ ಜನರ ಮನ್ನಣೆ ಸಿಕ್ಕಿದ್ದು, ಇದು ಸಿರಿ ಕನ್ನಡದ ಎರಡನೆಯ ವಾರ್ಷಿಕೋತ್ಸವದ ಸಂಭ್ರಮಕ್ಕೆ ಕಾರಣವಾಗಿದೆ.

        ಈ ಹಂತದಲ್ಲಿ ಸಿರಿ ಕನ್ನಡವು ಹೊಸ ಮಾರ್ಗವನ್ನು ರೂಪಿಸಿಕೊಳ್ಳುತ್ತಾ ತನ್ನ ವ್ಯಾಪ್ತಿಯನ್ನು ದ್ವಿಗುಣಗೊಳಿಸುತ್ತಾ ಹೆಜ್ಜೆ ಹಾಕುತ್ತಿದೆ. ಅದಕ್ಕಾಗಿ ಹೊಸ ಹೊಸ ಯೋಜನೆಯೊಂದಿಗೆ, ಕಿರುತೆರೆಯಲ್ಲಿ ಕಿಚ್ಚು ಹಚ್ಚಲು ಸಿದ್ಧವಾಗುತ್ತಿದೆ. ಎಂದಿನಂತೆ ನಿಮ್ಮ ಮನಸೆಳೆದ ಮೆಗಾ ಧಾರವಾಹಿಗಳೊಂದಿಗೆ ಸಿರಿಕನ್ನಡದ ಜನಪ್ರಿಯ ಶೋಗಳು ಹೊಸ ರೂಪದಲ್ಲಿ ನಿಮ್ಮನ್ನು ರಂಜಿಸಲಿವೆ. ಅದರಲ್ಲೂ ಅಪಾರ ಜನಪ್ರಿಯತೆ ಪಡೆದ "ಕ್ಯಾಶ್ ಬಾಕ್ಸ್" ಕಾರ್ಯಕ್ರಮ ಇನ್ನುಮುಂದೆ ರಾತ್ರಿ ೮ ಗಂಟೆಗೆ ಪ್ರಸಾರವಾಗಲಿದ್ದು, ವಿಜೇತ ಸ್ಪರ್ಧಿಗಳಿಗೆ ಸಾವಿರ ರೂಪಾಯಿ ಬಹುಮಾನ ಮತ್ತು "ಸ್ಟಾರ್ ಆಫ್ ದಿ ವೀಕ್" ವಿಜೇತರಿಗೆ ೨೫ ಸಾವಿರ ಬಹುಮಾನ ಸಿಗಲಿದೆ. ನಿಮ್ಮ ನೆಚ್ಚಿನ "ನಾರಿಗೊಂದು ಸೀರೆ" ಕಾರ್ಯಕ್ರಮ ೧೨೦ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ, ೫೦೦ಕ್ಕೂ ಹೆಚ್ಚು ಸೀರೆಗಳನ್ನು ನೀಡಿದ್ದು, ಮತ್ತಷ್ಟು ಅತ್ಯುತ್ತಮ ಮತ್ತು ಗರಿಷ್ಠ ಬೆಲೆಯ ಸೀರೆಗಳನ್ನು ನಿಮ್ಮ ಬಳಿಗೆ ತರುತ್ತಿದೆ. ಕನ್ನಡದ ಜನಪ್ರಿಯ ನಟಿ, ನಿರೂಪಕಿ ಸುಜಾತ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರೋ "ಸಿನಿಪಾಕ"ದಲ್ಲಿ ವೀಕ್ಷಕರಿಗೂ ಭಾಗವಹಿಸುವ ಅವಕಾಶ ಸಿಗಲಿದೆ. ರೀಲ್ ಹಿಂದಿನ ರಿಯಲ್ ಕಥೆಯನ್ನು ಸಾದರ ಪಡಿಸುತ್ತಿರೊ "ಟೂರಿಂಗ್ ಟಾಕೀಸ್" ಮತ್ತಷ್ಟು ವಿಭಿನ್ನವಾಗಿ ಮೂಡಿಬರುತ್ತದೆ ಎಂದು ವಾಹಿನಿಯ ಮುಖ್ಯಸ್ಥರಾದ ಸಂಜಯ್ ಶಿಂಧೆಯವರು ತಮ್ಮ ಅನಿಸಿಕೆ ಮತ್ತು ಸಂತಸವನ್ನು ಹಂಚಿಕೊಂಡರು.

 

ಕನ್ನಡದ ನೆಲದಲ್ಲಿ, ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ ರೂಪುಗೊಂಡ ಸಿರಿ ಕನ್ನಡ ನಾಡು ನುಡಿ ಸಂಸ್ಕೃತಿ ಬಿಂಬಿಸೋ, ಸ್ವಂತಿಕೆಯ ಸಂಭ್ರಮದ ಹೆಜ್ಜೆ ಇಡುತ್ತಿದೆ. ಕನ್ನಡದ ಅತ್ಯುತ್ತಮ ಕಥೆಗಳು, ಕಾದಂಬರಿಗಳು, ಧಾರಾವಾಹಿಗಳಾಗಿ ಕನ್ನಡದ ಕಂಪನ್ನು ಬೀರಿದರೆ, ವಿನೂತನ ವೆರೈಟಿ ಗೇಮ್ ಶೋಗಳು, ರಿಯಾಲಿಟಿ ಶೋಗಳು ವೀಕ್ಷಕರನ್ನು ಮನರಂಜಿಸಲಿವೆ. ಇದಷ್ಟೇ ಅಲ್ಲದೇ ಹಲವಾರು ಉತ್ಕೃಷ್ಟ ಅತ್ಯುತ್ತಮ ಕಾರ್ಯಕ್ರಮಗಳ ಯೋಜನೆಗಳು ಸಿದ್ಧವಾಗಿದ್ದು ಇವುಗಳೊಟ್ಟಿಗೆ ಎಂದಿನಂತೆ ಎವರ್‌ಗ್ರೀನ್ ಸಿನಿಮಾಗಳು ಮತ್ತು ಹೊಚ್ಚ ಹೊಸ ಸಿನಿಮಾಗಳು ಸಿರಿ ಕನ್ನಡದ ಕಿರುತೆರೆಯನ್ನು ಅಲಂಕರಿಸಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಕನ್ನಡಿಗರ ಬೆಂಬಲ ಅತ್ಯವಶ್ಯ. ಇದುವೇ ನಿಮ್ಮ ಸಿರಿಕನ್ನಡದ ಬಲವಾಗಲಿದೆ. ಆದ್ದರಿಂದ ಇನ್ಮುಂದೆ ಕರುನಾಡಲ್ಲಿ "ನುಡಿ ಕನ್ನಡ ನಡೆ ಕನ್ನಡ ನೋಡ್ತಾ ಇರಿ ಸಿರಿ ಕನ್ನಡ" ಎನ್ನುವಂತಾಗಬೇಕು ಎಂಬುದೇ ಸಿರಿ ಕನ್ನಡ ಬಳಗದ ಆಶಯ.

 

 

 

 

 

Copyright@2018 Chitralahari | All Rights Reserved. Photo Journalist K.S. Mokshendra,