*ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮಗಿಲ್ಲ "ಬ್ರಾಹ್ಮಿನ್ಸ್ ಕೆಫೆ" ಧಾರಾವಾಹಿ ತಂಡದ ಸ್ಪಷ್ಟನೆ*
ಕಳೆದ ಜೂನ್ 5 ರಿಂದ ರಾತ್ರಿ 9.30ಕ್ಕೆ ಸಿರಿಕನ್ನಡ ವಾಹಿನಿಯಲ್ಲಿ ಸಂಜೀವ್ ತಗಡೂರು ನಿರ್ದೇಶನದ "ಬ್ರಾಹ್ಮಿನ್ಸ್ ಕೆಫೆ" ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಆದರೆ ಸಾಮಾಜಿಕ ಜಾಲಾತಾಣಗಳಲ್ಲಿ, ಇಮೇಲ್ ಹಾಗೂ ಫೋನ್ ಕಾಲ್ ಗಳ ಮೂಲಕ ಕೆಲವರು ನಮ್ಮ ಜನಾಂಗವನ್ನು ನಿಂದಿಸುವ ಕೆಲವು ಸನ್ನಿವೇಶಗಳು ಧಾರಾವಾಹಿಯಲ್ಲಿದೆ. ಹಾಗಾಗಿ ನಮ್ಮ ಮನಸ್ಸಿಗೆ ನೋವುಂಟಾಗಿದೆ ಎಂದು ಹೇಳುತ್ತಿದ್ದಾರಂತೆ. ಈ ಕುರಿತು ಸ್ಪಷ್ಟನೆ ನೀಡಲು ಧಾರಾವಾಹಿ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
"ನಾನು ಸುಮಾರು 25 ವರ್ಷಗಳಿಂದ ಕಿರುತೆರೆಯಲ್ಲಿದ್ದೇನೆ. ಧಾರಾವಾಹಿ ನೋಡುಗರ ಮನಸ್ಸನ್ನು ಅರಿತಿದ್ದೇನೆ. "ಬ್ರಾಹ್ಮಿನ್ಸ್ ಕೆಫೆ" ಧಾರಾವಾಹಿಯಲ್ಲಿ ಬ್ರಾಹ್ಮಣರನ್ನು ಅವಮಾನಿಸುವ ಯಾವುದೇ ಸನ್ನಿವೇಶಗಳಿಲ್ಲ. ಕೆಲವರು ಪೂರ್ತಿ ಧಾರಾವಾಹಿ ನೋಡದೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ತುಣುಕುಗಳನ್ನು ನೋಡಿ, ನಮ್ಮ ಜನಾಂಗಕ್ಕೆ ಅವಮಾನ ಮಾಡುತ್ತಿದ್ದೀರ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕರೆ ಮಾಡಿ, ನೀವು ಈ ರೀತಿ ಮಾಡುತ್ತಿರುವುದು ತಪ್ಪು. ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದೂ ಹೇಳುತ್ತಿದ್ದಾರೆ. ಆದರೆ ಖಂಡಿತವಾಗಿಯೂ ಯಾರ ಮನಸ್ಸಿಗೂ ನೋವುಂಟು ಮಾಡುವುದಾಗಲಿ, ಯಾರದೇ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಾಗಲಿ ನಮಗಿಲ್ಲ. ಪೂರ್ತಿ ಧಾರಾವಾಹಿ ನೋಡದೆ ಕೆಲವರು ಮಾಡುತ್ತಿರುವ ಆರೋಪವಷ್ಟೇ ಇದು. ಈವರೆಗಿನ ಸಂಚಿಕೆಯಲ್ಲೂ ಯಾವ ಜನಾಂಗವನ್ನೂ ನಿಂದಿಸುವ ಸನ್ನಿವೇಶಗಳು ಇರಲಿಲ್ಲ. ಮುಂದಿನ ಸಂಚೆಕೆಗಳಲ್ಲೂ ಇರುವುದಿಲ್ಲ" ಎಂದು ನಿರ್ದೇಶಕ ಸಂಜೀವ್ ತಗಡೂರು ಸ್ಪಷ್ಟನೆ ನೀಡಿದ್ದಾರೆ. .
"ಸಿರಿಕನ್ನಡ" ವಾಹಿನಿ ಪರವಾಗಿ ರಾಜೇಶ್ ರಾಜಘಟ್ಟ, ಸಂಭಾಷಣೆ ಬರೆದಿರುವ ಎಂ ಎಲ್ ಪ್ರಸನ್ನ ಹಾಗೂ ಧಾರಾವಾಹಿಯಲ್ಲಿ ನಟಿಸಿರುವ ಶ್ರೀನಾಥ್ ವಸಿಷ್ಠ ಸೇರಿದಂತೆ ಅನೇಕ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ತಮ್ಮ ಅಭಿಪ್ರಾಯ ತಿಳಿಸಿದರು.