Bombhat Bhojana.850 Episode

Wednesday, July 26, 2023

223

 

*"ಬೊಂಬಾಟ್ ಭೋಜನ"ಕ್ಕೆ 850* .

 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಹಿಕಹಿ ಚಂದ್ರು ಸಾರಥ್ಯದ " ಬೊಂಬಾಟ್  ಭೊಜನ" ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ಈ ವಿಷಯದ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

 

"ಬೊಂಬಾಟ್ ಭೋಜನ"ವನ್ನು ಜನಪ್ರಿಯಗೊಳಿಸುತ್ತಿರುವ ಸಮಸ್ತ ಜನತೆಗೆ ಧನ್ಯವಾದ ಹೇಳುತ್ತಾ ಮಾತು ಆರಂಭಿಸಿದ ಸಿಹಿಕಹಿ ಚಂದ್ರು, ನಮ್ಮ " ಬೊಂಬಾಟ್ ಭೋಜನ " ಕಾರ್ಯಕ್ರಮ ಯಶಸ್ವಿ 850 ಕಂತುಗಳನ್ನು ಪೂರೈಸಿ ಸಾವಿರದತ್ತ ಹೆಜ್ಜೆ ಹಾಕುತ್ತಿದೆ. ನಮ್ಮ ಕಾರ್ಯಕ್ರಮದಲ್ಲಿ "ಬಯಲೂಟ",

"ಮನೆಯೂಟ", " ಸವಿಯೂಟ", "ನಮ್ಮೂರ ಊಟ", " ಅತಿಥಿ ದೇವೋ ಭವ" ಎಂಬ ವಿಭಾಗಗಳಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ "ಆರೋಗ್ಯ ಆಹಾರ" ಹಾಗೂ "ಅಂಗೈಯಲ್ಲಿ ಆರೋಗ್ಯ" ಎಂಬ ಹೆಸರಿನಲ್ಲಿ ಮನೆಮದ್ದುಗಳ ಕುರಿತಾಗಿ ಡಾ||ಗೌರಿ ಸುಬ್ರಹ್ಮಣ್ಯ ಅವರು ಮಾಹಿತಿ ನೀಡುತ್ತಾರೆ. "ಬೊಂಬಾಟ್ ಭೊಜನ"ದಲ್ಲಿ ಎಂ.ಎನ್ ನರಸಿಂಹಮೂರ್ತಿ ಅವರು ಹೇಳುವ  "ಟೈಮ್ ಪಾಸ್ ಜೋಕ್ಸ್" ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಖುಷಿ ಚಂದ್ರಶೇಖರ್ ಅವರು ನೀಡುವ "ಬ್ಯೂಟಿ ಟಿಪ್ಸ್" ಮಹಿಳೆಯರ ಮನ ಗಿದ್ದಿದೆ. ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ "ಬೊಂಬಾಟ್ ಭೋಜನ" ಮೂರನೇ ವರ್ಷದಲ್ಲಿ ಮೂರನೇ ಸೀಸನ್ ನಲ್ಲಿ ಮುಂದುವರೆಯುತ್ತಿದೆ.‌ ನಾನು ಈ ಸೀಸನ್ ನಲ್ಲಿ ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಆಯಾ ಊರಿನ ಕೆಲವು ಮನೆಗಳಿಗೆ ಹಾಗೂ ಹೋಟಿಲ್ ಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ಖಾದ್ಯ ತಿಂದಿದ್ದೇನೆ. ಹೋದ ಕಡೆಯಲ್ಲಾ ಸಿಗುತ್ತಿರುವ ಜನಮನ್ನಣೆಗೆ ಮನಸ್ಸು ತುಂಬಿ ಬಂದಿದೆ. ಸಾವಿರ ಕಂತಿಗೆ ದೊಡ್ಡ ಸಮಾರಂಭ ಆಯೋಜಿಸುವ ಯೋಚನೆಯಿದೆ ಎಂದು ಮಾಹಿತಿ ನೀಡಿದರು.‌‌ ಸ್ಟಾರ್ ಸುವರ್ಣ ವಾಹಿನಿಗೆ ಚಂದ್ರು ವಿಶೇಷ ಧನ್ಯವಾದ ತಿಳಿಸಿದರು.

 2014ರಲ್ಲಿ  ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, "ತಥಾಸ್ತು" ಕಾರ್ಯಕ್ರಮ ನನ್ನ ಮೊದಲ ಕಾರ್ಯಕ್ರಮ. ಆನಂತರ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಕೆಲವು ಮನೆಮದ್ದುಗಳನ್ನು ಪೇಪರ್ ನಲ್ಲಿ ಬರೆದುಕೊಂಡು ಹೋಗಿ  ಕಾರ್ಯಕ್ರಮದಲ್ಲಿ ಹೇಳುತ್ತಿದ್ದೆ. ಆ ಕಾಗದ ಎಷ್ಟೋ ಬಾರಿ ಕಳೆದು ಹೋಗುತ್ತಿತ್ತು. ನನ್ನ ಯಜಮಾನರ ಸಲಹೆ ಮೇರೆಗೆ ಆ ಮನೆಮದ್ದುಗಳನ್ನು ಡೈರಿಯಲ್ಲಿ ಬರೆಯುತ್ತಾ ಬಂದೆ. ಅದು ನಂತರ ಪುಸ್ತಕ ರೂಪದಲ್ಲಿ ಹೊರ ಬಂತು. "ಬೊಂಬಾಟ್ ಭೋಜನ" ದಲ್ಲೂ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಹೇಳುತ್ತಾ ಬರುತ್ತಿದ್ದೇನೆ. ಅದರಿಂದ ಸಾಕಷ್ಟು ಜನರಿಗೆ ಉಪಯೋಗವಾಗುತ್ತಿದೆ ಎಂದರು ಗೌರಿ ಸುಬ್ರಹ್ಮಣ್ಯ .

 

ನಾನು ಸುವರ್ಣ ವಾಹಿನಿ ಸೇರಿ ಮೂರು ವರ್ಷಗಳಾಯಿತು. ಈ ವಾಹಿನಿ ಸೇರಿದ ಕೆಲವೇ ತಿಂಗಳಲ್ಲಿ ಈ ಕಾರ್ಯಕ್ರಮ ಆರಂಭಿಸಿದ್ದೆವು. ಕಾರ್ಯಕ್ರಮದ ಬಗ್ಗೆ ಚಂದ್ರು ಅವರ ಬಳಿ ಹೇಳಿದಾಗ ಕೇವಲ ನಲವತ್ತೆಂಟು ಗಂಟೆಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಿದರು. ಈಗ "ಬೊಂಬಾಟ್ ಭೋಜನ" ಯಶಸ್ವಿ 850 ಕಂತುಗಳನ್ನು ಪೂರೈಸಿದೆ. ಮಧ್ಯಾಹ್ಯ 12 ಗಂಟೆ ಸಮಯದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ "ಬೊಂಬಾಟ್ ಭೋಜನ" ನಂಬರ್ ಒಂದು ಅಂತ ಹೇಳಬಹುದು.‌ ಈ ಸೀಸನ್ ನ ವಿಶೇಷವೆಂದರೆ ಚಂದ್ರು ಅವರು ವಿಶೇಷವಾದ "ಬೊಂಬಾಟ್ ಹಲ್ವ" ಎಂಬ ಸಿಹಿತಿಂಡಿಯನ್ನು ಹಾಗೂ "ಬೊಂಬಾಟ್ ಕಾಫಿ" ಎಂಬ ಫಿಲ್ಟರ್ ಕಾಫಿಯನ್ನು ಕಂಡಿ ಹಿಡಿದಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು ಸ್ಟಾರ್ ಸುವರ್ಣ ವಾಹಿನಿ ಮುಖ್ಯಸ್ಥರಾದ ವರ್ಷ.

 

ಸಾಹಿತಿ ಎಂ.ಎಸ್ ನರಸಿಂಹಮೂರ್ತಿ, ಸಿಹಿಕಹಿ ಗೀತಾ ಹಾಗೂ ಖುಷಿ ಚಂದ್ರಶೇಖರ್ "ಬೊಂಬಾಟ್ ಭೋಜನ"ದ ಕುರಿತು ಮಾತನಾಡಿದರು.

 

ಇದೇ ಸಂದರ್ಭದಲ್ಲಿ "ಬೊಂಬಾಟ್ ಭೋಜನ 2" ಹಾಗೂ "ಆರೋಗ್ಯ ಆಹಾರ" ಎಂಬ ಎರಡು ಪುಸ್ತಕಗಳು ಬಿಡುಗಡೆಯಾಯಿತು.

Copyright@2018 Chitralahari | All Rights Reserved. Photo Journalist K.S. Mokshendra,