Suryamsha.Press Meet

Wednesday, March 06, 2024

90

 

ಕಿರುತೆರೆಯಲ್ಲಿ ಸೂರ್ಯವಂಶ

 

      ಡಾ.ವಿಷ್ಣುವರ್ಧನ್ ಅಭಿನಯದ ’ಸೂರ್ಯವಂಶ’ ಚಿತ್ರವು ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಕಟ್  ಮಾಡಿದರೆ ಈಗ ಅದೇ ಹೆಸರಿನಲ್ಲಿ ಧಾರವಾಹಿಯೊಂದು  ’ಉದಯ ವಾಹಿನಿ’ಯಲ್ಲಿ ವೀಕ್ಷಕರಿಗೆ ತೋರಿಸಲು ಸಿದ್ದವಾಗಿದೆ. ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಪಕ ಎಲ್.ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ.

 

      ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ’ಸೂರ್ಯವಂಶ’ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಯಕೆ. ವಂಶದ ಕುಡಿ ಇಪ್ಪತ್ತು ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದೆ ಚಿಂತೆಗೆ ಕಾರಣವಾಗಿರುತ್ತದೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಆ ಹುಡುಗ ಸಿಗುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವುದರಿಂದ ಆತನು ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ.  ಅವನೇ ಕಥಾನಾಯಕ ಕರ್ಣ.

      ನಂತರ ಕರ್ಣನು ಸೂರ್ಯವಂಶಕ್ಕೆ ಕಾಲಿಟ್ಟ ನಂತರ ಎಲ್ಲಾ ಕಡೆಗಳಿಂದಲೂ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅದೇ ಊರಿನ ಕಾಳಿಂಗ ಆಟಾಟೋಪವನ್ನು ಬಗ್ಗು ಬಡಿಯಲು ಕರ್ಣನಿಂದ ಮಾತ್ರ ಸಾಧ್ಯ ಎಂದು ಊರ ಜನರು ನಂಬಿರುತ್ತಾರೆ. ಇದರ ಮಧ್ಯೆ ನಾಯಕಿ ಸುರಭಿ ಆಗಮನವಾಗುತ್ತದೆ. ಇದರಿಂದ ಕಥೆ ಹೊಸ ರೂಪ ಪಡೆದುಕೊಳ್ಳುತ್ತದೆ. ಮುಂದೆ ಕರ್ಣನೇ ಸೂರ್ಯವರ್ಧನ ಎನ್ನುವ ವಿಷಯ ತಿಳಿಯುತ್ತದೆ. ಅದು ಹೇಗೆ, ಯಾರಿಂದ, ಯಾವಾಗ ಎಂಬ ಸನ್ನಿವೇಶಗಳೊಂದಿಗೆ ರೋಚಕ ತಿರುವುಗಳು ಬರುತ್ತದೆ. ಪ್ರತಿ ಕಂತುಗಳು ಶ್ರೀಮಂತವಾಗಿ ಮೂಡಿಬಂದಿರುವುದು ವಿಶೇಷ.

 

     ನಾಯಕನಾಗಿ ಅನಿರುದ್ದ್‌ಜಟ್ಕರ್, ನಾಯಕಿಯಾಗಿ ಸುರಭಿ. ತಾತನಾಗಿ ಸುಂದರರಾಜ್, ಖಳನಾಗಿ ದಿ.ಉದಯ್‌ಕುಮಾರ್ ಪುತ್ರ ವಿಕ್ರಂಉದಯಕುಮಾರ್. ಉಳಿದಂತೆ ರವಿಭಟ್, ಸುಂದರಶ್ರೀ, ಲೋಕೇಶ್‌ಬಸವಟ್ಟಿ, ಪುಷ್ಪಾಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರು ನಟಿಸುತ್ತಿದ್ದಾರೆ.

 

     ಮಾರ್ಚ್,11  ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,