Shivarjuna.Film News

Monday, October 12, 2020

264

 

*ಇದೇ ಶುಕ್ರವಾರ ಚಿತ್ರಮಂದಿರದಲ್ಲಿ ಚಿರು ’ಶಿವಾರ್ಜುನ’*

 

ಲಾಕ್​ಡೌನ್​ಗೆ ಕೆಲವೇ ದಿನಗಳ ಮುನ್ನ ಬಿಡುಗಡೆ ಆಗಿದ್ದ ಚಿರಂಜೀವಿ ಸರ್ಜಾ ನಾಯಕತ್ವದ ಶಿವಾರ್ಜುನ ಸಿನಿಮಾ ಇದೀಗ ಮರು ಬಿಡುಗಡೆಗೆ ಸಿದ್ಧವಾಗಿದೆ. ಅ.16ರರ ಶುಕ್ರವಾರ ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿರಂಜೀವಿಯನ್ನು ಮತ್ತೆ ಕಣ್ತುಂಬಿಕೊಳ್ಳಬಹುದು.

‘ಶಿವಾರ್ಜುನ’ ಸಿನಿಮಾ ಮರು ಬಿಡುಗಡೆ ನಿಮಿತ್ತ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ಕರೆದ ಇಡೀ ತಂಡ, ಮರುಬಿಡುಗಡೆಯ ರೂಪರೇಷೆ ಬಗ್ಗೆ ಮಾಹಿತಿ ನೀಡಿತು. ಮೊದಲಿಗೆ ಚಿತ್ರದ ನಿರ್ಮಾಪಕ ಶಿವಾರ್ಜುನ ಮಾತನಾಡಿ, ‘ಇದು ನಾನು ನಿರ್ಮಾಣ ಮಾಡಿದ ಮೊದಲ ಸಿನಿಮಾ. ಮಾ. 12ಕ್ಕೆ ಅದ್ಧೂರಿಯಾಗಿ ಬಿಡುಗಡೆ ಮಾಡಿ ಒಳ್ಳೇಯ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುತ್ತಿರುವಾಗಲೇ ಲಾಕ್​ಡೌನ್​ ಆಯಿತು. ಇದೀಗ ಮತ್ತೆ ಅದೇ ಸಿನಿಮಾವನ್ನು ಅ. 16ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈಗಲೂ ಅದೇ ಅದ್ದೂರಿತನದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದರು.

ನಿರ್ದೇಶಕ ಶಿವತೇಜಸ್​, ಚಿರು ಸರ್ಜಾ ಅವರ ಅನುಪಸ್ಥಿತಿಯಲ್ಲಿ ಈ ಸುದ್ದಿಗೋಷ್ಟಿ ನಡೆಯುತ್ತಿರಬಹುದು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ. ಬದಲಿಗೆ ಸ್ಪೂರ್ತಿಯಾಗಿ ನಮ್ಮೆಲ್ಲರ ಜತೆ ಅವರು ಸದಾ ಇರಲಿದ್ದಾರೆ. ಸಿನಿಮಾ ಮೂಲಕ ಇಂದಿಗೂ ಅವರು ಜೀವಂತವಾಗಿದ್ದಾರೆ. ಇಂಥ ಸಮಯದಲ್ಲಿ ನಾವು ಚಿತ್ರರಸಿಕರಿಗೆ ಕೇಳಿಕೊಳ್ಳುವುದೊಂದೆ. ಚಿತ್ರಮಂದಿರಗಳು ತೆರೆಯುತ್ತಿವೆ. ಮತ್ತೆ ಬನ್ನಿ ಸಿನಿಮಾ ನೋಡಿ ಎಂದರು.

ಹಿರಿಯ ನಟಿ ತಾರಾ ಸಹ ಬೇಸರದಲ್ಲಿಯೇ ಮಾತಿಗಿಳಿದರು. ‘ಈಗ ಸಿನಿಮಾಮಂದಿರ ತೆರೆಯುತ್ತಿದೆ ಎಂದು ಖುಷಿಯಲ್ಲಿ ಮಾತನಾಡಬೇಕೋ ಅಥವಾ ಚಿರು ಇಲ್ಲದೇ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿರುವುದಕ್ಕೆ ಬೇಸರಿದಿಂದ ಮಾತನಾಡಬೇಕೋ ಎಂಬುದು ಗೊತ್ತಾಗುತ್ತಿಲ್ಲ. ನಿಜಕ್ಕೂ 2020 ವರ್ಷ ಚಿತ್ರರಂಗದ ಮಟ್ಟಿಗೆ ಕರಾಳ ವರ್ಷವಾಗಿದೆ. ಸಾವು ನೋವು ಒಂದೆಡೆಯಾದರೆ, ಕರೊನಾ ಆಘಾತ ಮತ್ತೊಂದು ಕಡೆ. ಇದೆಲ್ಲವನ್ನು ದಾಟಿಕೊಂಡು ಇದೀಗ ನಮ್ಮ ಚಿರಂಜೀವಿ ಶಿವಾರ್ಜುನನಾಗಿ ಮತ್ತೆ ಬಂದಿದ್ದಾನೆ. ಚಿತ್ರಮಂದಿರಕ್ಕೆ ಬನ್ನಿ’ ಎಂದು ಪ್ರೇಕ್ಷಕರನ್ನು ಆಹ್ವಾನಿಸಿದರು.

ಇನ್ನುಳಿದಂತೆ ಚಿತ್ರದ ನಾಯಕಿ ಅಮೃತಾ ಅಯ್ಯಂಗಾರ್​, ಸಂಗೀತ ನಿರ್ದೇಶಕ ಸುರಾಗ್​, ನಿರ್ಮಾಪರಾದ ಉದಯ್​ ಮೆಹ್ತಾ ಮರು ಬಿಡುಗಡೆ ಬಗ್ಗೆ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.

ಶಿವ ತೇಜಸ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಿವಾರ್ಜುನ ಚಿತ್ರವನ್ನು ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಕವಿರಾಜ್, ಯೋಗರಾಜ್ ಭಟ್ ಮತ್ತು ವಿ ನಾಗೇಂದ್ರ ಪ್ರಸಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಸುರಾಗ್ ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲಾ ಹಿನ್ನಲೆ ಸಂಗೀತ, ಹೆಚ್.ಸಿ. ವೇಣು ಛಾಯಾಗ್ರಹಣ ಮತ್ತು ಕೆ.ಎಂ ಪ್ರಕಾಶ್ ಸಂಕಲನವಿದೆ. ತಾರಾ, ಅವಿನಾಶ್, ಕುರಿ ಪ್ರತಾಪ್, ರವಿ ಕಿಶನ್, ಶಿವರಾಜ್ ಕೆ.ಆರ್.ಪೇಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,