Champion.Film Event News

Monday, September 12, 2022

137

ಚಾಂಪಿಯನ್ ಟ್ರೇಲರ್ ಬಿಡುಗಡೆ

       ಅದ್ದೂರಿ ಚಿತ್ರ ‘ಚಾಂಪಿಯನ್’ ಟ್ರೇಲರ್ ಪಂಚತಾರ ಹೋಟೆಲ್‌ದಲ್ಲಿ ಅನಾವರಣಗೊಂಡಿತು. ಸಿನಿಮಾವು ಅಕ್ಟೋಬರ್ ೧೪ರಂದು ತೆರೆಗೆ ಬರುತ್ತಿದೆ. ಅದಕ್ಕೂ ಮುನ್ನ ಪ್ರಚಾರದ ಸಲುವಾಗಿ ಸಮಾರಂಭವನ್ನು ಏರ್ಪಾಟು ಮಾಡಲಾಗಿತ್ತು. ನಿರ್ಮಾಪಕ ಶಿವಾನಂದ.ಎಸ್.ನೀಲಣ್ಣನವರ್ ಮಾತನಾಡಿ ಹದಿನಾಲ್ಕು ವರ್ಷಗಳ ಹಿಂದೆ ಸ್ನೇಹಿತ ಸಚಿನ್ ಧನಪಾಲ್‌ಗೆ ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾದಲ್ಲಿ ನಾಯಕ ಮಾಡುತ್ತೇನೆ ಎಂದು ಹೇಳಿದ್ದೆ. ಈ ಮಾತು ನಿಜವಾಗಿದ್ದು, ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ೨೦೧೯ರಲ್ಲಿಯೇ ಶುರು ಮಾಡಿದ್ದೇವು. ದುರದೃಷ್ಟವಶಾತ್ ನಿರ್ದೇಶಕ ಶಾಹುರಾಜ್‌ಶಿಂದೆ ಅಕಾಲಿಕ ಮರಣ ದೊಡ್ಡ ಅಘಾತವನ್ನೆ ನೀಡಿತು. ಹೀಗೆ ಹಲವಾರು ಅಡೆತಡೆಗಳನ್ನು ದಾಟಿ ಸಿನಿಮಾವು ಬಿಡುಗಡೆ ಹಂತಕ್ಕೆ ಬಂದಿದೆ. ಉತ್ತರ ಕರ್ನಾಟಕದ ಸ್ನೇಹಿತರು ಭರ್ಜರಿ ಪಬ್ಲಿಸಿಟಿ ಮಾಡುತ್ತಿದ್ದಾರೆ. ನನ್ನ ಹಾಗೂ ಸಚಿನ್‌ಧನ್‌ಪಾಲ್ ಕುಟುಂಬದ ಸಾಕಷ್ಟು ಜನರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರ ಬೆಂಬಲ ನಮಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದೇವರಾಜ್ ಅವರಿಗೆ ಧನ್ಯವಾದಗಳನ್ನು ಹೇಳಿದರು.

      ನಾಯಕನಾಗಿ ನಟಿಸುತ್ತೇನೆ ಅಂದುಕೊಂಡಿರಲಿಲ್ಲ. ಅಪ್ಪ, ತಮ್ಮ ಎಲ್ಲರೂ ಸೇನೆಯಲ್ಲಿದ್ದಾರೆ. ನಾನು ಸಹ ಆರ್ಮಿ ಸೇರಲು ಪರೀಕ್ಷೆ ಬರೆದಿದ್ದೆ. ಆದರೆ ಆಯ್ಕೆ ಆಗಲಿಲ್ಲ. ಶಿವಾನಂದ ಕೊಟ್ಟ ಭರವಸೆಯಂತೆ ನನ್ನನ್ನು ಹೀರೋ ಮಾಡಿದ್ದಾರೆ. ಪಾತ್ರಕ್ಕಾಗಿ ಅಭಿನಯ, ಸಾಹಸ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ತಯಾರಿ ಮಾಡಿಕೊಂಡಿದ್ದೆ. ಸನ್ನಿಲಿಯೋನ್ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ ಅಂತ ಸಚಿನ್‌ಧನ್‌ಪಾಲ್ ಖುಷಿಯನ್ನು ಹಂಚಿಕೊಂಡರು.

       ಸಚಿನ್‌ಧನ್‌ಪಾಲ್ ಮೊದಲ ಚಿತ್ರವಾಗಿದ್ದರೂ ನುರಿತ ನಟನಂತೆ ಚೆನ್ನಾಗಿ ಅಭಿನಯಿಸಿದ್ದಾರೆ. ನಿರ್ದೇಶಕರು ಇಂದು ಇಲ್ಲದೆ ಇರುವುದು ಬೇಸರದ ವಿಷಯ. ಸ್ನೇಹಿತನಿಗಾಗಿ ಬಂಡವಾಳ ಹೂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯವೆಂದು ನಾಯಕಿ ಅದಿತಿಪ್ರಭುದೇವ ಮಾತಾಗಿತ್ತು.

      ಮನೆಗೆ ಇವರಿಬ್ಬರು ಬಂದಾಗ ನಿರ್ಮಾಪಕ, ನಾಯಕ ಬಂದಿದ್ದಾರೆ ಅಂದುಕೊಂಡಿದ್ದೆ. ಆನಂತರ ಇವರ ಸ್ನೇಹದ ಬಗ್ಗೆ ತಿಳಿದು ಆನಂದವಾಯಿತು. ನಾನು ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆಂದು ದೇವರಾಜ್ ಕಡಿಮೆ ಸಮಯ ತೆಗೆದುಕೊಂಡರು. ಛಾಯಾಗ್ರಾಹಕ ಸರವಣನ್‌ನಟರಾಜನ್, ನೃತ್ಯ ಸಂಯೋಜಕ ಧನುಮಾಸ್ಟರ್ ಮುಂತಾದವರು ಅನುಭವಗಳನ್ನು ಹೇಳಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,