Girmit.Movie Teaser.

Friday, May 10, 2019

43

ಮಕ್ಕಳು  ನಟಿಸಿರುವ ದೊಡ್ಡವರ  ಚಿತ್ರ

        ಚಂದನವನದಲ್ಲಿ ಹೊಸ ಬಗೆಯ ಚಿತ್ರಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗುತ್ತಿದೆ. ಇದರಿಂದ ನೆರೆಯ ರಾಜ್ಯದವರು ನಮ್ಮ ಕಡೆ ತಿರುಗಿ ನೋಡುವಂತಾಗಿದೆ. ಅದರ ಸಾಲಿಗೆ ‘ಗಿರ್ಮಿಟ್’ ಚಿತ್ರವು ಸೇರ್ಪಡೆಯಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಮಂಡಕ್ಕಿಗೆ ಮೆಣಸಿನಕಾಯಿ, ಈರುಳ್ಳಿ, ಟಮೊಟೋ ಇನ್ನಿತರೆಗಳನ್ನು ಮಿಶ್ರಣ ಮಾಡಿ ತಿನ್ನುವುದನ್ನು ಇದೇ  ಹೆಸರಿನಿಂದ ಕರೆಯುವುದುಂಟು.  ಸಿಲಿಕಾನ್ ಸಿಟಿಯಲ್ಲಿ  ಒಣಗಿದ ಬೇಲ್‌ಪುರಿ ಎನ್ನಬಹುದು.  ಸ್ಟಾರ್ ನಟರ ಚಿತ್ರಗಳು ಎಂದರೆ ಕಮರ್ಷಿಯಲ್, ಆಕ್ಷನ್, ಪವರ್‌ಫುಲ್ ಡೈಲಾಗಗಳು,  ಕಾಮಿಡಿ ಎಲ್ಲವು ಸೇರಿರುತ್ತದೆ.  ಇಂತಹುದೆ ಪಾತ್ರಗಳನ್ನು ಮಕ್ಕಳು ಮಾಡಿದರೆ ಹೇಗಿರುತ್ತದೆ ಎಂಬ ಪ್ರಯತ್ನವನ್ನು ನಿರ್ದೇಶನ,ಸಂಗೀತ, ಸಂಕಲನ ಮತ್ತು ಹಾಡಿಗೆ ಸಾಹಿತ್ಯ ಒದಗಿಸಿರುವ ಕೆಜಿಎಫ್ ಖ್ಯಾತಿಯ ರವಿಬಸ್ರೂರು  ತಂಡದೊಂದಿಗೆ  ಸಾಹಸವನ್ನು  ಮಾಡಿ ಮುಗಿಸಿದ್ದಾರೆ.

ಇವರು ಹೇಳುವಂತೆ  ಮಾದ್ಯಮದವರು,  ಕಾಮಿಡಿ ಕಿಲಾಡಿಗಳು, ಜಾಹಿರಾತು  ಇವೆಲ್ಲವು ಕತೆ ಬರೆಯಲು  ಸ್ಪೂರ್ತಿಯಾಗಿತ್ತು.  ಆಂಗ್ಲ ಚಾಲನ್‌ಗಳಲ್ಲಿ ಕಾರ್ಟೂನ್, ಧಾರವಾಹಿಗಳಿಗೆ ಹೆಸರಾಂತ ಕಲಾವಿದರು ಕಂಠದಾನ ಮಾಡುತ್ತಾರೆ.  ಅದರಂತೆ ನಾಯಕ ಮಾಸ್ಟರ್ ರಾಜ್‌ಗೆ  ಯಶ್, ನಾಯಕಿ ಪುಟಾಣಿ ರಶ್ಮಿಗೆ ರಾಧಿಕಾಪಂಡಿತ್  ಡಬ್ಬಿಂಗ್ ಮಾಡಿರುವುದು ವಿಶೇಷ. ಉಳಿದಂತೆ ಪೋಷಕ ಪಾತ್ರಗಳಿಗೆ ರಂಗಾಯಣರಘು, ಸಾಧುಕೋಕಿಲ, ತಾರ, ಅಚ್ಯುತಕುಮಾರ್, ಕಾಮಿಡಿ ಕಿಲಾಡಿಗಳು ಕಲಾವಿದರು  ಧ್ವನಿ ಒದಗಿಸಿರುವುದು ಮತ್ತೋಂದು ಹಿರಿಮೆಯಾಗಿದೆ.  ಚಿಣ್ಣರುಗಳನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಇದನ್ನು ಸಿದ್ದಪಡಿಸಲಾಗಿದೆ ಎನ್ನುತ್ತಾರೆ.

       ಐದು ಭಾಷೆಯಲ್ಲಿ ಸಿದ್ದಗೊಂಡಿರುವ ಟೀಸರ್‌ಗೆ ಚಾಲನೆ ನೀಡಿದ ಪುನೀತ್‌ರಾಜ್‌ಕುಮಾರ್ ಮಾತನಾಡಿ  ಪುಣಾಣಿಗಳು ನಾಯಕ, ನಾಯಕಿಯಾಗಿ ನಟಿಸಿರುವುದು ಸಂತಸ ತಂದಿದೆ. ಇಂತಹ ಪ್ರಯತ್ನವನ್ನು ನಿರ್ದೇಶಕರು  ವಹಿಸಿಕೊಂಡಿರುವುದಕ್ಕೆ, ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು.  ಸಾಮಾನ್ಯವಾಗಿ ಕಾರ್ಟೂನ್, ಸಾಕ್ಷಚಿತ್ರಗಳಿಗೆ ಪ್ರಸಿದ್ದ ಕಲಾವಿದರು ಹಿನ್ನಲೆಧ್ವನಿ ನೀಡುತ್ತಾರೆ. ಹೊಸ ಪ್ರಯೋಗ ಎನ್ನುವಂತೆ ಈ ರೀತಿ ಮಾಡಿರುವುದು  ಇತರರಿಗೆ ನಾಂದಿಯಾಗಿದೆ. ಯಶ್-ರಾಧಿಕಾಪಂಡಿತ್‌ಗೆ ಥ್ಯಾಂಕ್ಸ್ ಹೇಳಬೇಕು.  ನೋಡುಗರಿಗೆ ಮನರಂಜನೆ ನೀಡಲಿ, ಇದರಿಂದ ಮಕ್ಕಳಿಗೆ ಅಭಿಮಾನಿಗಳು ಹುಟ್ಟಿಕೊಳ್ಳಲಿ. ಒಳ್ಳೆ ಕಾರಣಕ್ಕೆ ನಾವುಗಳು ಸಹಕಾರ ನೀಡಬೇಕೆಂದು ತಂಡಕ್ಕೆ ಶುಭ ಹಾರೈಸಿದರು.

       ಒಟ್ಟಾರೆ  ಇಡೀ ಚಿತ್ರದಲ್ಲಿ ೨೮೦ ಮಕ್ಕಳು ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ಸಚಿನ್‌ಬಸ್ರೂರ್, ಚಿತ್ರಕತೆ-ಸಂಭಾಷಣೆ ಪ್ರಮೋದ್‌ಮರವಂತೆ,ಕಿನ್ನಾಳ್ ರಾಜ್, ಸಂದೀಪ್‌ಸಿರ್ಸಿ, ಬಿ.ಮಂಜುನಾಥ್ ಮತ್ತು ಸೂಚನ್‌ಶೆಟ್ಟಿ.  ನಾಲ್ಕು ಗೀತೆಗಳಿಗೆ  ನವೀನ್‌ಸಜ್ಜು, ಪುನೀತ್‌ರಾಜ್‌ಕುಮಾರ್, ಸಂತೋಷ್‌ವೆಂಕಿ, ಆರುಂಧತಿ ಹಾಡಿದ್ದಾರೆ. ಕುಂದಾಪುರ, ಬಸ್ರೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  ಎನ್.ಎಸ್.ರಾಜಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಎನ್.ಸೂರಜ್‌ಚೌದರಿ, ಎನ್,ನರೇನ್‌ಚಂದ್ರಚೌಧರಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಕೆಆರ್‌ಜಿ ಹಂಚಿಕೆ ಮುಖಾಂತರ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂದಲ್ಲಿ ಸದ್ಯದಲ್ಲೆ ಬಿಡುಗಡೆಯಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,