Roberrt.Film Review.

Thursday, March 11, 2021

ಚಿತ್ರ: ರಾಬರ್ಟ್

ತಾರಾಗಣ: ದರ್ಶನ್, ಆಶಾ ಭಟ್

ನಿರ್ದೇಶನ: ತರುಣ್ ಸುಧೀರ್

ನಿರ್ಮಾಣ: ಉಮಾಪತಿ

 

 

ಆತ ಲಖ್ನೋದಲ್ಲಿ ಅಡುಗೆ ಭಟ್ಟ. ಹೆಸರು ರಾಘವ. ಆತನಿಗೊಬ್ಬ ಪುತ್ರ; ಅರ್ಜುನ. ಬಾಯ್ತೆರೆದರೆ ಇಬ್ಬರಿಗೂ ಮಾತು ತೊದಲು. ಆದರೆ ಮಧ್ಯಂತರದ ವೇಳೆಗೆ ಎಲ್ಲವೂ ಅದಲು ಬದಲು! ಅಡುಗೆಯವನಾಗಿ ಕಂಡ ರಾಘವನೇ ಮಂಗಳೂರಿನ ರೌಡಿ ರಾಬರ್ಟ್! ಹಾಗಾದರೆ ರಾಬರ್ಟ್ ರೌಡಿಸಂ ತೊರೆದಿದ್ದೇಕೆ? ರಾಘವನಿಗೂ ರಾಬರ್ಟ್ ಗೂ ಇರುವ ಸಂಬಂಧವೇನು ಎನ್ನುವುದನ್ನು ಸಿನಿಮಾ ಆಸಕ್ತಿಯುತವಾಗಿ ಅನಾವರಣಗೊಳಿಸುತ್ತದೆ.

 

 

ಮೊದಲ ದೃಶ್ಯದಲ್ಲೇ ರಾಜಕಾರಣಿಯೊಬ್ಬರನ್ನು ಅಪಾಯದಿಂದ ರಕ್ಷಿಸುವ ರಾಘವನಾಗಿ ದರ್ಶನ್ ಇಂಟ್ರಡಕ್ಷನ್ ಆಗುತ್ತದೆ. ಎದುರಾಳಿಯನ್ನು ರಕ್ಷಿಸಿದವನೆನ್ನುವ ಕಾರಣಕ್ಕೆ ಅಪಾಯ ನೀಡಬಯಸುವ ವ್ಯಕ್ತಿಗೆ ವಿರೋಧಿಯಾಗುತ್ತಾನೆ ರಾಘವ್. ಹಾಗೆ ರಾಘವನ ಹಿನ್ನೆಲೆ ಹುಡುಕಿದಾಗ ಬಿಚ್ಚಿಕೊಳ್ಳುವ ಹೊಸ ಕತೆ ರೋಚಕವಾಗಿರುತ್ತದೆ.

 

ರಾಘವನಾಗಿ ಕಾಣಿಸಿಕೊಳ್ಳುವ ದರ್ಶನ್, ರಾಬರ್ಟ್ ಆಗಿ ಬದಲಾಗುವಾಗ ಅಚ್ಚರಿ ಮೂಡಿಸುತ್ತಾರೆ.‌ ಅದು ಬರೀ ಲುಕ್ ನಲ್ಲಿ ಮಾತ್ರವಲ್ಲ, ನಡೆ ನುಡಿ ಎಲ್ಲದರಲ್ಲೂ ಬದಲಾವಣೆ ಎದ್ದು ಕಾಣುತ್ತದೆ. ಜೊತೆಗೆ ಕ್ಲೈಮ್ಯಾಕ್ಸ್ ದೃಶ್ಯದಲ್ಲಂತೂ ಎರಡೆರಡು ಪಾತ್ರದ ಭಾವವನ್ನು ಸೆಕೆಂಡುಗಳ ಅಂತರದಲ್ಲಿ ಮುಖದಲ್ಲಿ ಪ್ರದರ್ಶಿಸುವ ರೀತಿ ಅವರೊಳಗಿನ ನಟನನ್ನು ಒರೆಗೆ ಹಚ್ಚುವಂತಿದೆ.

ಚಿತ್ರದಲ್ಲಿ ದರ್ಶನ್ ಸ್ನೇಹಿತನಾಗಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ ವಿನೋದ್ ಪ್ರಭಾಕರ್. ಅವರ ಸ್ನೇಹದ ದೃಶ್ಯಗಳಿಗೆ ಪ್ರೇಕ್ಷಕರ ಅಭೂತಪೂರ್ವ ಚಪ್ಪಾಳೆಯ ಸ್ವಾಗತ ದೊರಕುತ್ತದೆ. ನಾಯಕಿಯಾಗಿ ಆಶಾ ಭಟ್ ಮೊದಲ ಚಿತ್ರದಲ್ಲೇ ಭರವಸೆಯ ನಟನೆ ನೀಡಿದ್ದಾರೆ. ವಿನೋದ್ ಪ್ರಭಾಕರ್ ಜೋಡಿಯಾಗಿ ಸೊನಾಲ್ ಮೊಂಟೆರೊ ಅವರಿಗೂ ನಟನೆಗೆ ಅವಕಾಶವಿದೆ.

 

ಪಾತ್ರ ಮತ್ತು ಪಾತ್ರಗಳಿಗೆ ಆಯ್ಕೆ ಮಾಡಿರುವ ಪ್ರತಿಯೊಬ್ಬ ಕಲಾವಿದರು ಕೂಡ ಒಪ್ಪುವಂತಿರುವುದು ವಿಶೇಷ. ಅಡುಗೆ ಭಟ್ಟನಾಗಿ ಅಶೋಕ್ ಅಭಿನಯಿಸಿದ್ದರೆ, ಭೂಗತ ಪಾತಕಿ ಸಹೋದರರಾಗಿ ರವಿಶಂಕರ್ ಮತ್ತು ಜಗಪತಿ ಬಾಬು ಜೋಡಿ ಇದೆ. ನಾಯಕನ‌ ಸ್ನೇಹಿತನಾಗಿ ಶಿವರಾಜ್ ಕೆ.ಆರ್ ಪೇಟೆ ನಟನೆ ಅದ್ಭುತ. ಸದಾ ಹಾಸ್ಯದಲ್ಲೇ ಗಮನ ಸೆಳೆಯುವ ಶಿವರಾಜ್ ಕೆ.ಆರ್ ಪೇಟೆ ಈ ಬಾರಿ ಸೆಂಟಿಮೆಂಟ್ ಮೂಲಕ ಗಮನ ಸೆಳೆಯುವುದು ವಿಶೇಷ. ಭೋಜ್ ಪುರಿ ನಟ ರವಿಕಿಶನ್, ಆತನ ಪುತ್ರನಾಗಿ ನಟಿಸಿರುವ ಚಂದು ಗೌಡ ಮೊದಲಾದವರು ಒಂದೆರಡು ದೃಶ್ಯಗಳಲ್ಲಿ ಬಂದು ಹೋದರೂ ಗುರುತಿಸಲ್ಪಡುತ್ತಾರೆ. ದೇವರಾಜ್ ಅವರ ರಾಜಗಾಂಭೀರ್ಯವಿದೆ.

 

 

ಹಾಡುಗಳ ವಿಚಾರಕ್ಕೆ ಬಂದರೆ ಚಿತ್ರೀಕರಿಸಿದ ರೀತಿ ವಿಭಿನ್ನವಾಗಿದ್ದು, ಗಮನ ಸೆಳೆಯುವಂತಿದೆ. ಸಂಭಾಷಣೆಗಳ ಮೂಲಕ ಮಜಾ ಟಾಕೀಸ್ ಫೇಮ್ ರಾಜಶೇಖರ್ ಮನಸೂರೆಗೈದಿದ್ದಾರೆ. ಹಿನ್ನೆಲೆ ಸಂಗೀತವಂತೂ ಚಿತ್ರದ ಜೊತೆಯಲ್ಲೇ ಸಾಗುತ್ತದೆ. ಲಖ್ನೋ ಮತ್ತು ವಾರಣಸಿಯ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ಕಲಾ ನಿರ್ದೇಶಕರ ಪರಿಶ್ರಮವೂ ಮೆಚ್ಚಬೇಕಾಗಿರುವಂಥದ್ದೇ. ಆಕ್ಷನ್ ಸನ್ನಿವೇಶಗಳು ದರ್ಶನ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಿವೆ. ಹಾಗಾಗಿ ರಾಬರ್ಟ್ ದರ್ಶನ್ ಅಭಿಮಾನಿಗಳಿಗಂತೂ ರಸದೌತಣ ಎನ್ನಲು ಅಡ್ಡಿ ಇಲ್ಲ.

 

 

 

Copyright@2018 Chitralahari | All Rights Reserved. Photo Journalist K.S. Mokshendra,