ಹಿರಿಯ ಕಲಾವಿದರನ್ನು ಗೌರವಿಸಿದ ಇಂದ್ರಜಿತ್ ಲಂಕೇಶ್
ನಟ,ನಿರ್ದೇಶಕ,ಪತ್ರಕರ್ತ ಇಂದ್ರಜಿತ್‌ಲಂಕೇಶ್ ಪ್ರತಿ ಬಾರಿ ತಮ್ಮ ಹುಟ್ಟುಹಬ್ಬವನ್ನು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸರಳವಾಗಿ ಆಚರಿಸಿಕೊಳ್ಳುತ್ತಿದ್ದರು. ಈ ಬಾರಿ ಹಿರಿಯ ಕಲಾವಿದರಿಗೆ ಆರ್ಥಿಕ ನೆರವು ನೀಡುವುದರೊಂದಿಗೆ ಸಾರ್ಥಕ ಬರ್ತ್‌ಡೇಯಿಂದ ಖುಷಿಗೊಂಡಿದ್ದಾರೆ. ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಶೈಲಶ್ರೀ, ಜಯಲಕ್ಷೀಪಾಟೀಲ್ ಮತ್ತು ಆರ್.ಟಿ.ರಮಾ ಗೌರವಕ್ಕೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಹಿರಿಯರೊಂದಿಗೆ ಜನ್ಮದಿನವನ್ನು ಸಂಭ್ರಮ ಮಾಡಿಕೊಳ್ಳುತ್ತಿರುವುದು ದೊಡ್ಡ ವಿಷಯವೇನಲ್ಲ. ಕೊರೋನಾ ಸಂಕಷ್ಟದಲ್ಲಿ ಇಂತಹ ನುರಿತ ಕಲಾವಿದರಿಗೆ ಕೆಲಸವಿಲ್ಲ. ಯಾರೂ ಅವಕಾಶ ನೀಡುತ್ತಿಲ್ಲ. ಇಂಥವರ ಜೊತೆಗೆ ನಮ್ಮಂತವರು ನಿಲ್ಲಬೇಕಿದೆ.
ಬೇರೆಯವರು ಇದೇ ರೀತಿ ಸಹಾಯ ಮಾಡಲಿ ಎನ್ನುವ ಉದ್ದೇಶದಿಂದ ಮಾಡಲಾಗುತ್ತಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಡ್ರಗ್ಸ್‌ಗೆ ಸಂಬಂದಪಟ್ಟಂತೆ ಸಿಸಿಬಿ ಕಛೇರಿಗೆ ನೀಡಿರುವ ಹೆಸರುಗಳಲ್ಲಿ ಯಾರನ್ನು ವಿಚಾರಣೆ ನಡೆಸಿಲ್ಲ. ಬಹುಶ: ರಾಜಕಾರಣಿಗಳು, ಹಿರಿಯ ಅಧಿಕಾರಿಗಳ ಶಿಪಾರಸ್ಸು ಇರಬಹುದು. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ನಿರ್ದೇಶಕರ ಮಗ ಕೂಡ ಕೇಸ್‌ದಲ್ಲಿ ಇದ್ದಾರೆ. ಡ್ರಗ್ಸ್ ಮಾಫಿಯಾ ಸಣ್ಣ ವಿಷಯವಲ್ಲ. ಇದನ್ನು ಇಲ್ಲಿಗೆ ಬಿಡದೆ ಸಿಬಿಐ ತನಿಖೆಗೆ ನೀಡಬೇಕು. ಆಗ ಮಾತ್ರ ಶವಗಳು ಕೂಡ ಎದ್ದು ಕೂರಲಿವೆ ಎಂದು ಮಾದ್ಯಮದ ಪ್ರಶ್ನೆಗಳಿಗೆ ಇಂದ್ರಜಿತ್ ಲಂಕೇಶ್ ಉತ್ತರವಾದರು.