Godhraa.Film News.

Saturday, October 17, 2020

282

 

ನಮ್ಮ ‘ಗೋಧ್ರಾ’  ಚಲನಚಿತ್ರಕ್ಕೆ ಮಾಧ್ಯಮದ ಪ್ರತಿಯೊಬ್ಬರೂ ನೀಡಿದ ಬೆಂಬಲ ಮತ್ತು ಸಹಕಾರವನ್ನು ನಮ್ಮ ತಂಡವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತದೆ. ಈಗಿನ ಕೊರೊನಾ ಸಮಯದಲ್ಲಂತೂ, ನೀವು ನಮ್ಮ ಬೆಂಬಲದ ಬೆನ್ನೆಲುಬಾಗಿರುತ್ತೀರಿ ಎಂಬ ನಂಬಿಕೆ ಕೂಡ ನಮ್ಮದು. ಈಗ ಕೋವಿಡ್ ಅನ್ಲಾಕ್ ಪ್ರಕ್ರಿಯೆಯು ಜಾರಿಯಲ್ಲಿರುವುದರಿಂದ ಮತ್ತು ಥಿಯೇಟರ್ ಪ್ರಾರಂಭಿಸಲು ಅನುಮತಿ ನೀಡಿರುವುದರಿಂದ ನಮ್ಮ ಚಲನಚಿತ್ರದ ಚಟುವಟಿಕೆಗಳನ್ನು ಪುನರಾರಂಭಿಸಲು ನಾವು ನಿರ್ಧರಿಸಿದ್ದೇವೆ.

 

ನಾವು ಇತ್ತೀಚೆಗೆ ನಮ್ಮ ಸಿನಿಮಾವನ್ನು ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ) ಯಿಂದ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಮಂಡಳಿಯ ಸದಸ್ಯರು ನಮ್ಮ ಚಲನಚಿತ್ರವನ್ನು ವೀಕ್ಷಿಸಿದರು ಮತ್ತು ನಮ್ಮ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ. ಮಂಡಳಿಯ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ಚಿತ್ರದ ನಿಲುವು, ಕಥಾವಸ್ತು ಮತ್ತು ನೇರವಂತಿಕೆಯ ಕೆಲವು ವಿಷಯಗಳ ಕುರಿತಾದ ಆಕ್ಷೇಪಣೆ ಮತ್ತು ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆ ಬಂದವು. ನೇರ ನಿಷ್ಠುರ ವಿಷಯಗಳು ಕೆಲವೊಮ್ಮೆ ಕಹಿಯಾಗಿರುತ್ತವೆ.  ಗೋಧ್ರಾದಲ್ಲಿ ನಡೆದ ಘಟನೆಗೂ ಮತ್ತು ನಮ್ಮ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎಂದು ಮನವಿ ಮಾಡಿದರೂ, ಆ ಕುರಿತು ಅವರಿಗೆ ತಿಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದೆವು. ಆದರೆ, ನಮ್ಮ ಮನವಿಯನ್ನು ಅವರು ಪುರಸ್ಕರಿಸಲಿಲ್ಲ. ಹಾಗಾಗಿ ಸೆನ್ಸಾರ್ ಸಿಬಿಎಫ್ ಸಿ ಅಧಿಕಾರಿಗಳ ಜತೆ ಚರ್ಚಿಸಿ ನಮ್ಮ ಚಿತ್ರದ ಶೀರ್ಷಿಕೆಯನ್ನು ಗೋಧ್ರಾನ್‍ ಎಂದು ಬದಲಾಯಿಸಲು ತೀರ್ಮಾನ ತಗೆದುಕೊಂಡಿದ್ದೇವೆ.

ಆದರೆ, ನಮ್ಮ ಚಿತ್ರತಂಡಕ್ಕೊಂದು ಅನುಮಾನ ಎದುರಾಗಿದೆ. ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯಲ್ಲಿ ‘ಗೋಧ್ರಾ’ ಎಂದು ನಮ್ಮ ಚಿತ್ರಕ್ಕೆ ಹೆಸರಿಡಲು ಅನುಮತಿ ಪಡೆದಿದ್ದೇವೆ. ಈ ಅನುಮೋದಿತ ಮತ್ತು ನೋಂದಾಯಿಸಿದ ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸಿಬಿಎಫ್‌ಸಿಯಿಂದ ಈಗ ನಮಗೆ ತಿಳಿದು ಆಘಾತವಾಯಿತು. ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡಲು ಅಂತಹ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ ಸಿ ಒಪ್ಪಬೇಕಿಲ್ಲ ಎಂದು ಮಂಡಳಿಯು ಹೇಳಿದಾಗ ಆಶ್ಚರ್ಯವಾಯಿತು.

 

ಗೋಧ್ರಾ ಎಂಬ ಶೀರ್ಷೀಕೆಯು ಆ ಸ್ಥಳದಲ್ಲಿ ನಡೆದ ಘಟನೆಗೆ ಸಂಬಂಧಿಸಿಲ್ಲ ಎಂಬ ಭರವಸೆಯನ್ನು ನಾವು ಕೆಎಫ್‌ಸಿಸಿಗೆ ನೀಡಿದ್ದೆವು. ಸಿನಿಮಾವನ್ನು ಅದೇ ರೀತಿಯಲ್ಲೇ ಮಾಡಿದ್ದೇವೆ. ಚಿತ್ರದ ಚಿತ್ರೀಕರಣಕ್ಕೆ ಶೀರ್ಷಿಕೆಯನ್ನು ನೋಂದಾಯಿಸಲು ಕೆಎಫ್‌ಸಿಸಿಯಿಂದ ಅನುಮತಿ ಪಡೆಯುವಾಗ ಪ್ರತಿಯೊಬ್ಬ ನಿರ್ಮಾಪಕರು ಅನುಸರಿಸಬೇಕಾದ ಎಲ್ಲ ಕಾರ್ಯವಿಧಾನಗಳನ್ನು ನಾವು ಅನುಸರಿಸಿದ್ದೇವೆ.  ಚಿತ್ರೀಕರಣದ ಸಮಯದಲ್ಲಿ ತನ್ನದೇ ಅಂಗಸಂಸ್ಥೆಗಳ ಸದಸ್ಯರನ್ನು ಎಲ್ಲಿ, ಎಷ್ಟು ಬಳಸಿಕೊಳ್ಳಬೇಕು, ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು ಎಂದೆಲ್ಲ ಹೇಳುತ್ತದೆ. ಅದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಅವುಗಳ ಬೆನ್ನಿಗೆ ನಿಲ್ಲುತ್ತದೆ. ಆದರೆ, ಕೋಟಿ ಕೋಟಿ ಹಣ ಹಾಕಿ ಸಿನಿಮಾ ಮಾಡುವ ಚಿತ್ರತಂಡವನ್ನು ರಕ್ಷಿಸಲು ಸಾಧ್ಯವಾಗದಂತಹ ಶೀರ್ಷಿಕೆಗಳನ್ನು ನೀಡುತ್ತದೆ? ಈ ಸೋಜಿಗವನ್ನು ಹೊರತುಪಡಿಸಿ, ಗೋಧ್ರಾ ಶೀರ್ಷಿಕೆಯನ್ನು ಬಳಸಿಕೊಂಡು ನಾವು ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಕಳೆದ ಎರಡು ವರ್ಷಗಳಿಂದ ಈ ಹೆಸರಿನಿಂದಲೇ ಸಿನಿಮಾ ಪ್ರಚಾರ ಮಾಡಿದ್ದೇವೆ. ಅದಕ್ಕಾಗಿ ಹಣವನ್ನೂ ವ್ಯಯಿಸಿದ್ದೇವೆ.

 

ಈಗಾಗಲೇ ನಾವು ನಮ್ಮ ಸಿನಿಮಾದ ಹೆಸರನ್ನು ಬದಲಾಯಿಸುವುದಾಗಿ ಸಿಬಿಎಫ್‌ಸಿಗೆ ಭರವಸೆ ನೀಡಿದ್ದೇವೆ. ಆದರೆ ಈ ಹೆಸರನ್ನು ಬದಲಾಯಿಸುವ ಮೂಲಕ ನಾವು ಈಗ ಅನುಭವಿಸಬೇಕಾದ ಎಲ್ಲಾ ನಷ್ಟಗಳನ್ನು ಯಾರು ಸರಿದೂಗಿಸಲಿದ್ದಾರೆ? ಕಳೆದ ಎರಡು ವರ್ಷಗಳಲ್ಲಿ ನಾವು ಕೈಗೊಂಡ ಎಲ್ಲ ಪ್ರಚಾರದ ಗತಿ?

 

ಕೆಎಫ್‌ಸಿಸಿಯು ಈ ವಿಷಯದಲ್ಲಿ ನಮಗೆ ಧೈರ್ಯ ತುಂಬಬೇಕಿದೆ. ಆಗಿರುವ ಈ ಗೊಂದಲವನ್ನು ತಿಳಿಗೊಳಿಸಬೇಕಿದೆ. ಜವಾಬ್ದಾರಿಯುತ ಚಲನಚಿತ್ರ ನಿರ್ಮಾಪಕರಾಗಿ, ನಾವು ಉತ್ತರಗಳನ್ನು ಕೋರುತ್ತೇವೆ. ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಕೆಎಫ್‌ಸಿಸಿಯು ಒಳಗೊಳ್ಳುವುದರಿಂದ, ನೀವು ಕೊಟ್ಟ ಶೀರ್ಷಿಕೆಗಳನ್ನೇ ನಂಬಿಕೊಂಡು ಶ್ರಮ ಪಡುವುದರಿಂದ, ಕೊನೆಗೆ ನೀವು ಕೊಡುವ ಶೀರ್ಷಿಕೆಗೆ ಯಾವುದೇ ಬೆಲೆ ಇಲ್ಲ ಅಂದಾಗ ನಾವು ಯಾರನ್ನು ನಂಬಬೇಕು?

 

ನಾವು ಸಿಬಿಎಫ್‌ಸಿಗೆ ಬದ್ಧರಾಗಿದ್ದೇವೆ. ಮತ್ತು ಚಿತ್ರದ ಶೀರ್ಷಿಕೆಯನ್ನು ಗೋಧ್ರಾದಿಂದ ಗೋಧ್ರಾನ್‌ಗೆ ಬದಲಾಯಿಸುತ್ತೇವೆ ಎಂದು ನಾವು ಪುನರುಚ್ಚರಿಸುತ್ತೇವೆ.

 

ಈ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕರಾದರೆ, ಶ್ರದ್ಧಾ ಶ್ರೀನಾಥ್ ನಾಯಕಿ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷ ಸೋಮಶೇಖರ್ ಮತ್ತು ಸೋನು ಗೌಡ ಮುಂತಾದವರ ತಾರಾ ಬಳಗವಿದೆ. ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಕೆ.ಪಿ. ಇನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕೆ.ಎಸ್.ನಂದೀಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಕೂಡ ನಡೆಸಲಾಗಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,