ಸತ್ಯ ಘಟನೆಗಳ ಆಧಾರಿತ ಹೇ ರಾಮ್ ಚಿತ್ರಕ್ಕೆ ಚಾಲನೆ
ಪೋಲೀಸ್ ಇಲಾಖೆಯಲ್ಲಿ ಅಪರಾಧಗಳನ್ನು ತನಿಖೆ ಮಾಡಿರುವ ಸಾಕಷ್ಟು ಘಟನೆಗಳು ಸಿನಿಮಾದಲ್ಲಿ ಮೂಡಿಬಂದಿದೆ. ಆ ಸಾಲಿಗೆ ‘ಹೇ ರಾಮ್’ ಚಿತ್ರವು ಸೇರ್ಪಡೆಯಾಗುತ್ತದೆ.
ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಡಾಲಿ ಧನಂಜಯ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಆರಂಭಫಲಕ ತೋರಿ ಶುಭ ಕೋರಿದರು.
ಡಯಲ್ ೧ ಕ್ರಿಯೇಟಿವ್ ಸ್ಟುಡಿಯೋ ಮಾಲೀಕರಾದ ಪ್ರವೀಣ್ ಬೇಲೂರು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಕಾವೇರಿ ತೀರದ ಚರಿತ್ರೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಇವರಿಗೆ ಇದು ಎರಡನೇ ಚಿತ್ರ. ನಿರ್ದೇಶನವಷ್ಟೇ ಅಲ್ಲದೆ, ಪ್ರವೀಣ್ ಬೇಲೂರು ಅವರು ಈ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ. ವಿಎಫ್‌ಎಕ್ಸ್ ನಲ್ಲೂ ಪರಿಣಿತಿ ಹೊಂದಿರುವ ಪ್ರವೀಣ್ ಅವರು ಹೇ ರಾಮ್ ಚಿತ್ರಕ್ಕಾಗಿ ವಿಎಫ್‌ಎಕ್ಸ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಎಸ್.ಕೆ.ಉಮೇಶ್, ಹಿರಿಯ ಪೋಲೀಸ್ ಅಧಿಕಾರಿ. ಕಳೆದವಾರವಷ್ಟೇ ಎಸ್‌ಪಿ ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ. ಇವರು ಸೇವೆಯಲ್ಲಿದ್ದಾಗ ದಕ್ಷತೆಗೆ ಹೆಸರಾದವರು. ತಮ್ಮ ಅಧಿಕಾರಾವಧಿಯಲ್ಲಿ ನಡೆದ ಒಂದಷ್ಟು ಘಟನೆಗಳನ್ನು ಪುಸ್ತಕರೂಪದಲ್ಲಿ ದಾಖಲು ಮಾಡಿಕೊಂಡಿದ್ದರು. ಅದರ ಒಂದು ಭಾಗವನ್ನು ಸಿನಿಮಾ ಮೂಲಕ ಹೊರತರುತ್ತಿದ್ದಾರೆ. ಅದಕ್ಕಾಗಿ ಚಿತ್ರಕ್ಕೆ ಎ ಗೇಮ್ ಆಫ್ ಲೈಫ್ ಎಂದು ಅಡಿಬರಹ ಇಟ್ಟಿರುವುದಾಗಿ ಹೇಳಿರುವ ಎಸ್.ಕೆ.ಉಮೇಶ್ ಅವರು ೨೦೦೨ ರಿಂದ ೨೦೧೩ರ ವರೆಗೆ ನಡೆದಂತ ಅಂಶಗಳು, ಅಪರಾಧಗಳಿಂದ ಆಗುವ ತೊಂದರೆಗಳು ಏನೆಂದು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.
ಕತೆಯು ಕುರಿತು ಹೇಳುವುದಾದರೆ ಜೀವನದಲ್ಲಿ ಒಬ್ಬ ನಿಶಿತಮತಿ ಮನುಷ್ಯ ತನ್ನ ತಾಯಿ,ಅಕ್ಕ, ತಂಗಿ ಸಲುವಾಗಿ ಪಾತಕ ಲೋಕಕ್ಕೆ ಇಳಿದಾಗ ಯಾವ ಮಟ್ಟಕ್ಕೆ ಹೋಗ್ತಾನೆ. ಬದುಕು ಹೇಗೆ ಸಾಗುತ್ತೆ. ಆತನ ಘಟನಾವಳಿಗಳು ಹೇಗೆ ಸುತ್ತಿಕೊಳ್ಳುತ್ತದೆ. ಇದರಿಂದ ಬೇರೆ ಪ್ರಪಂಚವು ಆತನನ್ನು ಕಾಣುವ ರೀತಿ. ಈತನ ಹಿಂದೆ ಪೋಲೀಸ್ ವ್ಯವಸ್ಥೆ ಕೆಲಸ ಮಾಡುವ ಪರಿ. ಅಂತಿಮವಾಗಿ ಅದರಿಂದ ತಪ್ಪಿಸಿಕೊಂಡು ಬರುತ್ತಾನಾ? ಪಾತಕ ಲೋಕದ ಸುಳಿಗೆ ಸಿಕ್ಕಿ ಕೊಳ್ತಾನಾ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕಂತೆ. ಬೆಂಗಳೂರು, ಕರ್ನಾಟಕ ಸುಂದರ ತಾಣಗಳಲ್ಲಿ ಕ್ರಮಬದ್ದವಾಗಿ ಚಿತ್ರೀಕರಣ ನಡೆಸಲು ಏರ್ಪಾಟು ಮಾಡಿಕೊಂಡಿದ್ದಾರೆ.
ತುಂಬಾ ದಿನಗಳ ನಂತರ ನಟ ಧರ್ಮ ತನಿಖಾಧಿಕಾರಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತಕಲೋಕದ ಪಾತ್ರಧಾರಿ ಆಯ್ಕೆ ಹಂತದಲ್ಲಿದೆ. ಉಳಿದಂತೆ ಪಾಪ್‌ಕಾರ್ನ್ ಮಂಕಿ ಟೈಗರ್ ಖ್ಯಾತಿಯ ಸಪ್ತಮಿ ಗೌಡ, ಬಿಗ್‌ಬಾಸ್ ಮೂಲಕ ಜನಪ್ರಿಯರಾಗಿರುವ ಚೈತ್ರಕೊಟ್ಟೂರು, ಸಚ್ಚಿನ್‌ಪುರೋಹಿತ್, ನವೀನ್‌ರಾಜ್, ಮಂಜುನಾಥ್, ಪೂರ್ಣ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ರಚನೆ, ಚಿತ್ರಕತೆ ಎಸ್.ಕೆ.ಉಮೇಶ್ ಅವರದು, ಸಾಹಿತ್ಯ ಮತ್ತು ಸಂಗೀತದ ಜವಬ್ದಾರಿಯನ್ನು ಡಾ.ವಿ.ನಾಗೇಂದ್ರಪ್ರಸಾದ್ ಹೊತ್ತುಕೊಂಡಿದ್ದಾರೆ. ಛಾಯಾಗ್ರಹಣ ಪ್ರದೀಪ್.ವಿ.ಬಂಗಾರಪೇಟೆ ಅವರದಾಗಿದೆ. ಡಾಲಿ ಧನಂಜಯ್ ಕತೆಯಲ್ಲಿ ಸಲಹೆ ನೀಡಿದ್ದಾರೆ.