Corona Songs Rel.Press Meet

Thursday, August 13, 2020

317

ಮಹೇಂದ್ರ ಮನೂತ್  ನಿರ್ಮಾಣದಲ್ಲಿ ’ನಮಗಾಗಿ ಜೀವ ಕೊಟ್ಟವರು’ ಕೊರೋನ ವಾರಿಯರ್ಸ್‌ ಕುರಿತ ವಿಡಿಯೋ ಸಾಂಗ್ ಬಿಡುಗಡೆ.

....

ಬೆಂಗಳೂರು ನಗರದ ಮಟ್ಟಿಗೆ ಸಾಮಾಜಿಕ ಮತ್ತು‌ಸಿನಿಮಾ ರಂಗ ಎರಡರಲ್ಲೂ ಜನಪ್ರಿಯವಾದ ಹಸರು ಮಹೇಂದ್ರ ಮನೂತ್.  ಹಾಗೆ ನೋಡಿದರೆ ಅವರು‌ ಮಾರುತಿ ಮೆಡಿಕಲ್ಸ್ ಮನೂತ್ ಅಂತಲೇ ಹೆಚ್ಚು ಚಿರಪರಿಚಿತ. ಅವರೀಗ ಕೊರೋನಾ ಕುರಿತ ವಿಡಿಯೋ ಸಾಂಗ್ ಮೂಲಕ ಸುದ್ದಿಯಲ್ಲಿದ್ದಾರೆ. ಕೊರೋನಾ ಎಲ್ಲರೂ ಜೀವ ಭಯದಲ್ಲಿ ಶೂಟಿಂಗ್- ಗಿಟಿಂಗ್ ಅಂತ ಸಿನಿಮಾ ಸಂಬಂಧಿತ ಚಟುವಟಿಕೆಗಳಿಂದಲೇ ದೂರವಾಗಿರುವ ಸಂದರ್ಭದಲ್ಲಿ ಜನರಲ್ಲಿ ಕೊರೋನಾ ಭಯ ದೂರ ಮಾಡಲು ನಮಗಾಗಿ ಜೀವ ಕೊಟ್ಟವರು ಹೆಸರಲ್ಲೊಂದು ವಿಡಿಯೋ ಸಾಂಗ್ ನಿರ್ಮಿಸಿ, ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸಿದ್ದಾರೆ. ಹಾಗಂತ ಕೊರೋನಾ‌ ಮೇಲೆ ಹೊರ‌ಬಂದಿರುವುದು ಇದೇ ಮೊದಲ ಹಾಡೇನು ಅಲ್ಲ.‌ ಈಗಾಗಲೇ ಸಾಕಷ್ಟು ಜನ ಈ ಪ್ರಯತ್ನ ಮಾಡಿರುವುದು ನಿಮಗೂ ಗೊತ್ತು. ಅದರೆ ಇದು ಅದೆಲ್ಲಕ್ಕಿಂತ ವಿಶೇಷ ಎನಿಸುವುದು ಅದರ ಸಾಮಾಜಿಕ‌ ಕಾಳಜಿಯ ಕಾರಣಕ್ಕೆ. ರಾಜ್ಯದಲ್ಲಿ ಕೊರೋನಾ ಹೊಡೆದೊಡಿಸಲು ಕೊರೋನಾ ವಾರಿಯರ್ಸ್ ಹೆಸರಲ್ಲಿ  ಸರ್ಕಾರದ ಜತೆಗೆ ವೈದ್ಯರು, ದಾದಿಯರು, ಪೊಲೀಸರು, ಮಾಧ್ಯಮದವರು, ಸಂಘ ಸಂಸ್ಥೆಗಳ ಜನರು, ಸಾಮಾಜಿಕ ಹೋರಾಟ ಗಾರರು ಸೇರಿದಂತೆ ಎಲ್ಲಾ ರೀತಿಯ ಜನರು ನಿರಂತರವಾಗಿ  ಹೋರಾಡುತ್ತಾ ಬಂದಿದ್ದಾರೆ. ಅನೇಕ‌ ಜನ ಅದಕ್ಕಾಗಿ ಹಲವು ದಿನಗಳ ಕಾಲ ಮನೆ ಮಠ ಬಿಟ್ಟು ಶ್ರಮಿಸಿದ್ದಾರೆ. ಕೆಲವರು ಅದೇ ಕೊರೋನಾಕ್ಕೆ ಬಲಿಯಾಗಿದ್ದು ಇದೇ. ಅವರೆಲ್ಲರ ಶ್ರಮವನ್ನು ಸ್ಮರಿಸುವ ಮತ್ತು ಗೌರವಿಸುವ ರೂಪದಲ್ಲಿ ಈ ಹಾಡು ಮೂಡಿ ಬಂದಿದೆ. ಹಾಗೆಯೇ ಕೊರೋನಾ ಅಂದ್ರೆ ಭಯ ಪಡಬೇಡಿ, ಧೈರ್ಯ ದಿಂದ ಎದುರಿಸಿ ಅಂತಲೂ ಮಹೇಂದ್ರ ಮನೂತ್ ಈ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ಐದು ನಿಮಿಷಗಳ ಅವಧಿಯ ಈ ಹಾಡಿನಲ್ಲಿ ಮಹೇಂದ್ರ ಮನೂತ್ ಸೇರಿದಂತೆ ಹಲವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ರೇವಣ್ಣ ನಾಯಕ್ ಗೀತೆ ರಚನೆ ಮಾಡಿದ್ದು, ಎ.ಟಿ.‌ರವೀಶ್ ಸಂಗೀತ ನೀಡಿದ್ದಾರೆ.

ಬಿ.ಪಿ. ಹರಿಹರನ್ ನಿರ್ದೇಶಿಸಿರುವ ಈ ವಿಡಿಯೋ ಸಾಂಗಿಗೆ  ಜಾನ್ ಛಾಯಾಗ್ರಹಣ ಮಾಡಿದ್ದಾರೆ. ಸಚಿನ್ ಹಾಡಿದ್ದಾರೆ. ಕರೋನಾ ಭಯದ ನಡುವೆಯೂ ಮಹೇಂದ್ರ ಮನೂತ್ ಮತ್ತವರ ತಂಡ ಗುರುವಾರ ಬೆಳಗ್ಗೆ ಬೆಂಗಳೂರಿನ ರೇಣುಕಾಂಬ ಮಿನಿ‌ಚಿತ್ರಮಂದಿರದಲ್ಲಿ ಈ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿ ಮಾತನಾಡಿತು.’ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ನೋಡಿಕೊಂಡರೆ ಕೊರೋನಾ‌ ಅಂತ ಭಯ ಪಟ್ಟುಕೊಂಡು ಮನೆಯಲ್ಲಿ‌ಕೂರುವ ಹಾಗಿಲ್ಲ. ದಿನದ ಉದ್ಯೋಗ ನಂಬಿ ಬದುಕುವ ಚಿತ್ರರಂಗದ ಜನ ಕೊರೋನಾದ ಜೊತೆಗೆ ಬದುಕಬೇಕಿದೆ. ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ದತಿ ಬದಲಿಸಿಕೊಳ್ಳಬೇಕಿದೆ. ಆ ಮೂಲಕವೇ ನಿಂತು‌ಹೋಗಿರುವ ಉದ್ಯಮದ ಚಟುವಟಿಕೆಗಳಿಗೆ ಚಾಲನೆ ಕೊಡಬೇಕಿದೆ ’ ಎಂದರು‌ ಮಹೇಂದ್ರ ಮನೂತ್. ಹಾಗೆಯೇ ಜನರಲ್ಲಿ ಧೈರ್ಯ ತುಂಬವುದಕ್ಕಾಗಿ ಈ ವಿಡಿಯೋ ಸಾಂಗ್ ಹೊರ ತಂದಿರುವುದಾಗಿ ಹೇಳಿಕೊಂಡರು. ಈ ವಿಡಿಯೋ ಸಾಂಗ್ ಹೊರಬರಲು ಕೈ ಜೋಡಿಸಿದ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಬಹುದಿನಗಳ‌ನಂತರ ಉದ್ಯಮ‌ ಮತ್ತು ಮಾಧ್ಯಮದ ಗೆಳೆಯರು ಒಂದೆಡೆ ಸೇರಿದ ಖುಷಿಯಲ್ಲಿ ಕಾರ್ಯಕ್ರಮ ವಿಶೇಷ ಎನಿಸಿತು.

Copyright@2018 Chitralahari | All Rights Reserved. Photo Journalist K.S. Mokshendra,