ಡಿಯರ್ ಸತ್ಯ ಟೀಸರ್ ಬಿಡುಗಡೆ ಮಾಡಿದರು ಶಿವರಾಜ್ ಕುಮಾರ್
* * *
ಭಿನ್ನ ಸಿನಿಮಾ ತಂಡದ ಮತ್ತೊಂದು ಪ್ರಯತ್ನ
* * *
ರಗಡ್ ಲುಕ್ ನಲ್ಲಿ ಆರ್ಯನ್ ಸಂತೋಷ್
ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ ’ಡಿಯರ್ ಸತ್ಯ’. ಈಗಾಗಲೇ ಶೇ. 90ರಷ್ಟು ಪೂರ್ಣಗೊಂಡಿರುವ ಈ ಚಿತ್ರದ ಟೀಸರ್ ಆಗಸ್ಟ್ 15ರ ಸ್ವತಂತ್ರ್ಯ ದಿನಾಚರಣೆಯಂದು ಲೋಕಾರ್ಪಣೆಯಾಗಿದೆ. ಡಿಯರ್ ಸತ್ಯ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ಡಾ. ಶಿವರಾಜ್ ಕುಮಾರ್ ʻಟೀಸರ್ ಅದ್ಭುತವಾಗಿ ಬಂದಿದೆ. ಸಂತೋಷ್ ಈ ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣುತ್ತಿದ್ದಾರೆ. ಹೊಸಬರು ಚಿತ್ರರಂಗದಲ್ಲಿ ಗೆಲ್ಲಬೇಕು. ಈಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿʼ ಎಂದು ಹಾರೈಸಿದ್ದಾರೆ.
ಈ ಚಿತ್ರದಲ್ಲಿ ನಾಯಕನಟನಾಗಿ ನಟಿಸಿರುವ ಆರ್ಯನ್ ಸಂತೋಷ್ ಶಿವರಾಜ್ ಕುಮಾರ್ ಅವರ ಓಂ ಚಿತ್ರವನ್ನು ನೋಡಲು ಥಿಯೇಟರಿನ ಮುಂದೆ ಜಗಳ ಆಡಿಕೊಂಡು, ನೂಕುನುಗ್ಗಲಿನಲ್ಲಿ ನಿಂತಿದ್ದನ್ನು ಸ್ಮರಿಸಿಕೊಂಡರು. ಎಂದಾದರೂ ಒಂದು ದಿನ ನನ್ನ ಸಿನಿಮಾಗೆ ಶಿವಣ್ಣನ ಆಶೀರ್ವಾದ ಪಡೆಯಬೇಕು ಎನ್ನುವ ಕನಸಿತ್ತು. ಅದು ಈಗ ಡಿಯರ್ ಸತ್ಯ ಟೀಸರ್ ರಿಲೀಸ್ ಮಾಡಿಸುವ ಮೂಲಕ ನನಸಾಗುತ್ತಿದೆ ಎಂದರು.
ಕನ್ನಡದ ಮೊಟ್ಟಮೊದಲ ಓಟಿಟಿ ಒರಿಜಿನಲ್ ಚಿತ್ರ ಭಿನ್ನ. ಥಿಯೇಟರಿನಲ್ಲಿ ಬಿಡುಗಡೆಯಾಗದೇ ನೇರವಾಗಿ ವಾಹಿನಿಯೊಂದರ ಓಟಿಟಿ ಪ್ಲಾಟ್ ಫಾರ್ಮಿನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ದೊಡ್ಡ ಗೆಲುವು ಕಂಡಿತ್ತು. ನಿರ್ಮಾಪಕರಲ್ಲೊಬ್ಬರಾದ ಗಣೇಶ್ ಪಾಪಣ್ಣ ಅವರ ಪ್ರಕಾರ ಭಿನ್ನ ಚಿತ್ರ 195 ದೇಶಗಳ ಜನರಿಗೆ ನೋಡಲು ಲಭ್ಯವಾಗಿತ್ತಂತೆ. ಆ ಚಿತ್ರ ಬಿಡುಗಡೆಯಾಗಿ ನಾಲ್ಕೇ ದಿನಗಳಲ್ಲಿ ಏಳೂವರೆ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರಂತೆ. ನಲವತ್ತೈದು ದೇಶಗಳ ಜನ ಈ ಚಿತ್ರವನ್ನು ನೋಡಲು ಲಾಗಿನ್ ಮಾಡಿದ್ದರಂತೆ. ಭಿನ್ನ ಚಿತ್ರದ ಗೆಲುವಿನ ನಂತರ ಯತೀಶ್ ವೆಂಕಟೇಶ್, ಬಿ.ಎಸ್. ಶ್ರೀನಿವಾಸ್, ಗಣೇಶ್ ಪಾಪಣ್ಣ ಮತ್ತು ಅಜಯ್ ಅಪ್ಪರೂಪ್ ಪರ್ಪಲ್ ರಾಕ್ ಎಂಟರ್ ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಆಕ್ಷನ್ ರಿವೇಂಜ್, ಥ್ರಿಲ್ಲರ್ ಚಿತ್ರ ’ಡಿಯರ್ ಸತ್ಯ’.
ʻʻಡಿಯರ್ ಸತ್ಯ ಕ್ಲಾಸಿಕ್ ಕಮರ್ಷಿಯಲ್ ಚಿತ್ರವಾಗಲಿದೆ. ಈಗಾಗಲೇ ತೊಂಭತ್ತು ಭಾಗ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರುತ್ತೇವೆ. ಈಗ ಎಲ್ಲರೂ ಓಟಿಟಿ ಬಾಗಿಲಿನಲ್ಲಿ ನಿಂತಿದ್ದಾರೆ. ಆದರೆ ಅವರು ಎಲ್ಲ ಸಿನಿಮಾಗಳನ್ನೂ ಖರೀದಿಸುವುದಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಡಿಯರ್ ಸತ್ಯ ಚಿತ್ರಕ್ಕೆ ಉತ್ತಮ ಬೇಡಿಕೆ ಇದೆ. ಕೊರೋನಾದಿಂದ ಎದುರಾಗಿರುವ ಚಿತ್ರಮಂದಿರಗಳ ಸಮಸ್ಯೆ ಬಗೆಹರಿದರೆ ಥೇಟರಿನಲ್ಲಿ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ನೇರವಾಗಿ ಓಟಿಟಿಯಲ್ಲೇ ರಿಲೀಸ್ ಮಾಡಬೇಕಾಗುತ್ತದೆʼʼ ಎನ್ನುವುದು ಗಣೇಶ್ ಪಾಪಣ್ಣ ಮತ್ತು ಡಿಯರ್ ಸತ್ಯ ತಂಡದ ನಿರ್ಧಾರವಾಗಿದೆ.
ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಲೇ, ನೂರು ಜನ್ಮಕೂ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆಗಿದ್ದವರು ಆರ್ಯನ್ ಸಂತೋಷ್. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಹಳ್ಳಿ ಹೈದ ಪ್ಯಾಟೇಗ್ ಬಂದ ಎಂಬೆರಡು ರಿಯಾಲಿಟಿ ಶೋಗಳ ನಿರೂಪಕರಾಗಿ, ಬಿಗ್ ಬಾಸ್ ಸೀಸನ್-2 ನ ಸ್ಪರ್ಧಿಯಾಗಿದ್ದವರು ಆರ್ಯನ್ ಸಂತೋಷ್. ಈಗ ’ಡಿಯರ್ ಸತ್ಯ’ನಾಗಿ ಹೊಸ ಲುಕ್ ನಲ್ಲಿ ಮತ್ತೆ ಹಾಜರಾಗಿದ್ದಾರೆ. ʻʻನಾನು ಈ ಹಿಂದೆ ನಟಿಸಿದ ಸಿನಿಮಾಗಳಲ್ಲಿ ನನ್ನನ್ನು ನಾನು ನೋಡಿಕೊಳ್ಳುತ್ತಿದ್ದೆ. ಆದರೆ ಈ ಸಿನಿಮಾದ ಡಬ್ಬಿಂಗ್ ಮಾಡಬೇಕಾದರೆ ನನಗೆ ಅನ್ನಿಸಿದ್ದು, ಇಲ್ಲಿ ನಾನು ಸತ್ಯನಾಗಿ ಪೂರ್ತಿ ಬದಲಾಗಿದ್ದೇನೆ ಅನ್ನೋದು. ಈ ಚಿತ್ರದಲ್ಲಿ ಸತ್ಯ ಮತ್ತು ರಿವೇಂಜ್ ಸತ್ಯ ಎಂಬ ಎರಡು ಶೇಡ್ ಗಳಿವೆ. ಒಂದರಲ್ಲಿ ಹ್ಯಾಂಡ್ಸಮ್ಮಾಗಿ ಕಾಣಿಸಿಕೊಂಡಿದ್ದೇನೆ ಮತ್ತೊಂದು ಲುಕ್ ಗಾಗಿ ಉದ್ದುದ್ದ ಗಡ್ಡ ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ದೇನೆ. ನೂರು ಜನ್ಮಕೂ ಮತ್ತು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗಿಯಾದ ನಂತರ ನಂದಕಿಶೋರ್ ಮೂಲಕ ನಿರ್ದೇಶಕ ಶಿವಗಣೇಶ್ ಪರಿಚಯವಾಯಿತು. ಆರಂಭದಲ್ಲಿ ಐವತ್ತು ಲಕ್ಷ ರುಪಾಯಿಗಳಲ್ಲಿ ಸಿನಿಮಾ ಮಾಡಿಕೊಡಿ ಅಂತಾ ಕೇಳಿಕೊಂಡಿದ್ದೆ. ಆ ಮೂಲಕ ಸಿನಿಮಾ ಶುರುವಾಯಿತು. ಸಾಕಷ್ಟು ಅಡೆತಡೆಗಳೂ ಎದುರಾದವು. ಪರ್ಪಲ್ ರಾಕ್ ಸಂಸ್ಥೆ ಕೈ ಜೋಡಿಸಿದಮೇಲೆ ಎಲ್ಲವೂ ಸಲೀಸಾಗಿ ನೆರವೇರಿತು. ಸಿನಿಮಾ ಅಂದುಕೊಂಡದ್ದಕ್ಕಿಂತಾ ಬೇರೆಯದ್ದೇ ಲೆವೆಲ್ಲಿಗೆ ತಯಾರಾಗಿದೆ. ನನ್ನಲ್ಲಿದ್ದ ಇಪ್ಪತ್ತೊಂದು ರುಪಾಯಿಗಳ ಅಡ್ವಾನ್ಸ್ ನೀಡಿ ಛಾಯಾಗ್ರಾಹಕ ವಿನೋದ್ ಭಾರತಿ ಅವರನ್ನು ನಮ್ಮ ಸಿನಿಮಾಗೆ ಕಮಿಟ್ ಮಾಡಿಸಿದ್ದೆ. ಇವತ್ತು ಚಿತ್ರ ಇಷ್ಟು ಗುಣಮಟ್ಟದ ಹೊಂದಲು ವಿನೋದ್ ಕಾರಣರಾಗಿದ್ದಾರೆ. ಪೊಲೀಸ್ ಪಾತ್ರಕ್ಕೆ ಅತುಲ್ ಕುಲಕರ್ಣಿ ಅವರು ಬರಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆ ಪಾತ್ರವನ್ನು ನಮ್ಮ ಕನ್ನಡದವರೇ ಆದ ಅರವಿಂದ್ ರಾವ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಹಾಗೆಯೇ ನಾಯಕಿಯ ಪಾತ್ರಕ್ಕೆ ತಾನ್ಯ ಹೋಪ್ ಅವರನ್ನು ಕೇಳಿದ್ದೆವು. ಆ ಜಾಗಕ್ಕೆ ಹೊಸಬರಾದ ಅರ್ಚನಾ ಕೊಟ್ಟಿಗೆ ಅವರನ್ನು ಆಯ್ಕೆ ಮಾಡಿಕೊಂಡೆವು. ಈ ಸಿನಿಮಾದಲ್ಲಿ ತಾಯಿ ಮತ್ತು ಮಗನ ಬಾಂಧವ್ಯ ಕಾಡುವಂತೆ ಮೂಡಿಬಂದಿದೆ. ಅರುಣಾ ಬಾಲರಾಜ್ ನನ್ನ ತಾಯಿಯಾಗಿ ನಟಿಸಿದ್ದಾರೆ. ನನ್ನ ಮುಂದಿನ ಚಿತ್ರಗಳಲ್ಲೂ ನೀವೇ ನನ್ನ ತಾಯಿಯಾಗಬೇಕು ಅಂತಾ ಕೇಳಿಕೊಂಡಿದ್ದೇನೆ. ನಮ್ಮಿಬ್ಬರ ಕಾಂಬಿನೇಷನ್ ಅಷ್ಟು ಚೆಂದಗೆ ಮೂಡಿಬಂದಿದೆ. ಏನೆಲ್ಲಾ ಬೇಕೋ ಎಲ್ಲವನ್ನೂ ಡಿಯರ್ ಸತ್ಯ ಪಡೆದುಕೊಂಡಿದ್ದಾನೆ. ಈ ಚಿತ್ರ ನನ್ನ ಕೈಹಿಡಿಯಲಿದೆ ಎನ್ನುವ ಸಂಪೂರ್ಣ ಭರವಸೆ ಇದೆ…ʼʼ ಹೀಗೆ ನಾಯಕನಟ ಆರ್ಯನ್ ಸಂತೋಷ್ ಡಿಯರ್ ಸತ್ಯ ಚಿತ್ರ ಆರಂಭಗೊಂಡ ದಿನದಿಂದ ಈತನಕದ ವಿವರಗಳನ್ನು ಬಿಚ್ಚಿಟ್ಟರು.
ಈ ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ ಜಾಹೀರಾತು, ಕಾರ್ಯಕ್ರಮ ನಿರೂಪಣೆಗಳಲ್ಲಿ ಭಾಗಿಯಾಗುತ್ತಲೇ ಸಿನಿಮಾ ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದರಂತೆ. ಹಾಗೆ ಆಡಿಷನ್ ಮೂಲಕ ʻಡಿಯರ್ ಸತ್ಯʼ ಚಿತ್ರಕ್ಕೆ ಆಯ್ಕೆಯಾದರಂತೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಅರವಿಂದ್ ರಾವ್ ʻಪೊಲೀಸ್ ಪಾತ್ರಗಳಿಂದ ದೂರ ಉಳಿಯುವ ಪ್ರಯತ್ನ ಮಾಡಿದರೂ ಅದೇ ಪಾತ್ರ ನನ್ನನ್ನು ಹುಡುಕಿಕೊಂಡು ಬರುತ್ತದೆ. ಆದರೆ ಡಿಯರ್ ಸತ್ಯ ಸಿನಿಮಾದಲ್ಲಿ ಸಿನಿಮಾ ಪೂರ್ತಿ ನನ್ನ ಹವಾ ಇರಲಿದೆʼ ಎಂದರು.
ರಾಕ್ ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ಕೂಡಾ ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದಾರೆ. ʻʻಈ ಸಿನಿಮಾವನ್ನು ಐವತ್ತು ದಿನಗಳ ಕಾಲ್ ಶೂಟ್ ಮಾಡಿದ್ದೇವೆ. ಐದು ಹಾಡುಗಳಿಗೆ ಶ್ರೀಧರ್ ವಿ ಸಂಭ್ರಮ್ ಅದ್ಭುತವಾದ ಟ್ಯೂನ್ ನೀಡಿದ್ದಾರೆ. ನಮ್ಮ ಹೀರೋ ಸಂತೋಷ್ ದಾಡಿ ಬಿಟ್ಟು ಬೇರೆ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ತಂಡದ ಸಪೋರ್ಟ್ನಿಂದ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಕೂಡಾ ಗೆಲುವು ಸಾಧಿಸುತ್ತದೆʼʼ ಎನ್ನುವ ವಿಶ್ವಾಸ ನನಗಿದೆ ಎಂದರು ಯತೀಶ್.
ಬೆಂಗಳೂರೆಂಬ ಮಹಾನಗರದಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ, ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಯತ್ನಿಸುವ ಹುಡುಗನ ಕಥೆ ’ಡಿಯರ್ ಸತ್ಯʼದಲ್ಲಿ ಜೀವ ಪಡೆದಿದೆ. ’ಡಿಯರ್ ಸತ್ಯ’ ಚಿತ್ರದಲ್ಲಿ ಅರುಣಾ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ ಹೊಸಕೋಟೆ, ಆದರ್ಶ್ ಚಂದ್ರಕರ್ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ. ಅಖಾಡ ದಿಂದ ಆರಂಭಿಸಿ, ಹೃದಯದಲಿ ಇದೇನಿದು, ಜಿಗರ್ ಥಂಡ, ಆದೃಶ್ಯ, ತ್ರಾಟಕ ಚಿತ್ರಗಳನ್ನು ನೀಡಿದ್ದ ಶಿವಗಣೇಶ್ ’ಡಿಯರ್ ಸತ್ಯ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿನೋದ್ ಭಾರತಿ ’ಡಿಯರ್ ಸತ್ಯ’ ಚಿತ್ರದ ಛಾಯಾಗ್ರಹರಾಗಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಮನಸೆಳೆಯುವ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ರಾಜ್ಯಪ್ರಶಸ್ತಿ ವಿಜೇತ ಸುರೇಶ್ ಆರ್ಮುಗಂ ಸಂಕಲನ, ಭಜರಂಗಿ ಮೋಹನ್, ಕಲೈ ಮತ್ತು ಗೀತಾ ನೃತ್ಯ ಸಂಯೋಜನೆ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಭಾರ್ಗವಿ ವಿಖ್ಯಾತಿ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಅಕ್ಟೋಬರ್ ತಿಂಗಳ ಹೊತ್ತಿಗೆ ಚಿತ್ರ ಬಿಡುಗಡೆಯಾಗಲಿದೆ.