ದ್ವಿಭಾಷೆಯಲ್ಲಿ `ಕಾರ್ಗಲ್ ನೈಟ್ಸ್’
ಕನ್ನಡದ ಮೊಟ್ಟ ಮೊದಲ ಒಟಿಟಿ ವೆಬ್ ಸೀರಿಸ್
ಎಲ್ಲಾ ಚಿತ್ರರಂಗದಲ್ಲೂ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋದು ಒಟಿಟಿ ರಿಲೀಸ್. ಚಿತ್ರಮಂದಿರಗಳು ಲಾಕ್‌ಡೌನ್‌ನಿಂದಾಗಿ ಬಾಗಿಲು ಹಾಕಿರುವುದರಿಂದ ಸಿನಿಮಾಸಕ್ತರಿಗೆ ಹಾಗೂ ಚಿತ್ರರಂಗಕ್ಕೆ ಒಟಿಟಿ ಪ್ಲಾಟ್‌ಫಾರ್ಮ್‌ವೊಂದೇ ಈಗ ದ್ವಾರ ಬಾಗಿಲು.
ಇನ್ನು ಈ ವೇದಿಕೆಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಥಿಯೇಟರ್‌ನತ್ತ ಮುಖ ಮಾಡದೇ ನೇರವಾಗಿ ಬಿಡುಗಡೆಯಾಗಿವೆ. ಆದರೆ, ವೆಬ್ ಸೀರಿಸ್ ವಿಷಯದಲ್ಲಿ ಈ ಮಾತು ಕನ್ನಡ ಭಾಷೆಯ ಮಟ್ಟಿಗೆ ಕೊಂಚ ದೂರವಿತ್ತು. ಅದೂ ಈಗ ತಣ್ಣಗೆ ಬೇರೂರಲು ಶುರು ಮಾಡುತ್ತಿದೆ.
ಹೌದು. ನಿರ್ದೇಶಕ ದೇವರಾಜ್ ಪೂಜಾರಿ ಅಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಕನ್ನಡ ಮತ್ತು ಹಿಂದಿಯಲ್ಲಿ ‘ಕಾರ್ಗಲ್ ನೈಟ್ಸ್’ ಎಂಬ ವೆಬ್ ಸೀರಿಸ್ ಸಿದ್ಧಪಡಿಸಿದ್ದಾರೆ. ಲಾಕ್‌ಡೌನ್‌ಗೂ ಮುನ್ನವೇ ಶೂಟಿಂಗ್ ಮುಗಿಸಿದ್ದ ಈ ವೆಬ್ ಸೀರಿಸ್, ಇತ್ತೀಚೆಗೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನೂ ಮುಗಿಸಿಕೊಂಡಿದೆ ತಂಡ.
ಹರ್ಷಿಲ್ ಕೌಶಿಕ್, ಅಕ್ಷತಾ ಅಶೋಕ್, ಪ್ರಮುಖ ಪಾತ್ರ ನಿರ್ವಹಿಸಿದ್ದು, ಸಂದೀಪ್ ನಾಗರಾಜ್, ನಾಗರಾಜ್ ಬೈಂದೂರ್, ಅರ್ಚನಾ ಮೊಸಳೆ, ಸುಚನ್ ಶೆಟ್ಟಿ ಹಾಗೂ ಚಂದ್ರಕಾಂತ್ ಮೊದಲಾದವರು ಉಳಿದ ಪಾತ್ರವರ್ಗದಲ್ಲಿದ್ದಾರೆ.
ಯಶಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಎನ್.ಮಂಜುನಾಥ್ ಮತ್ತು ಜೆ.ಎನ್.ಪ್ರದೀಪ್ ಜಂಟಿಯಾಗಿ ‘ಕಾರ್ಗಲ್ ನೈಟ್ಸ್’ ನಿರ್ಮಿಸಿದ್ದಾರೆ. ಈ ಹಿಂದೆ ‘ಕಿನಾರೆ’ ಸಿನಿಮಾ ಮಾಡಿ ಅನುಭವವಿರುವ ದೇವರಾಜ್, ‘ಕಾರ್ಗಲ್ ನೈಟ್ಸ್’ನ್ನು ಸಿನಿಮಾ ಮಾದರಿಯಲ್ಲೇ ಮೇಕಿಂಗ್ ಮಾಡಿರುವುದು ಹೆಚ್ಚುಗಾರಿಕೆ. ಕನ್ನಡದ ಮೊದಲ ಒಟಿಟಿ ವೆಬ್ ಸೀರಿಸ್ ಅನ್ನೊದು ಇದರ ಹೆಗ್ಗಳಿಕೆ.
೧೯೯೫ರಲ್ಲಿ ಮಲೆನಾಡು ಸುತ್ತಮುತ್ತ ನಡೆದ ನೈಜ ಘಟನೆಯನ್ನು ಎಳೆಯಾಗಿಟ್ಟುಕೊಂಡು ‘ಕಾರ್ಗಲ್ ನೈಟ್ಸ್’ ಸಿದ್ಧಪಡಿಸಲಾಗಿದೆ. ರೆಟ್ರೋ ಕ್ರೈಂ-ಥ್ರಿಲ್ಲರ್ ಕಥಾಹಂದರವಿರುವ ಈ ವೆಬ್ ಸೀರಿಸ್ ಸಿಂಕ್ ಸೌಂಡ್‌ನಲ್ಲಿ ತಯಾರಾಗಿರುವುದು ವಿಶೇಷ.
ಶಿವಮೊಗ್ಗ, ಸಾಗರ, ಜೋಗ್‌ಫಾಲ್ಸ್ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಎನ್‌ಆರ್ ಅರುಣ್ ಕ್ಯಾಮೆರಾ ಮತ್ತು ಎಡಿಟಿಂಗ್ ಕಾರ್ಯ ನಿರ್ವಹಿಸಿದರೆ, ಬಿ.ಆರ್.ಸುರೇಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ.
ಮೇಕಿಂಗ್ ಹಂತದಲ್ಲಿರುವಾಗಲೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಸಾಕಷ್ಟು ಬೇಡಿಕೆ ಬಂದಿದ್ದರೂ, ಎಲ್ಲವೂ ಒಂದು ಹಂತಕ್ಕೆ ಬಂದ ನಂತರ ಮುಂದುವರೆಯುವ ಬಗ್ಗೆ ತಂಡ ಆಲೋಚಿಸಿತ್ತು. ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗಿರುವ ‘ಕಾರ್ಗಲ್ ನೈಟ್ಸ್’ ಮುಂದಿನ ದಿನಗಳಲ್ಲಿ ತಮಿಳು ಹಾಗೂ ತೆಲುಗಿಗೂ ಡಬ್ ಮಾಡುವ ಆಲೋಚನೆಯಲ್ಲಿದೆ ದೇವರಾಜ್ ಮತ್ತು ತಂಡ. ಅತಿ ಶೀಘ್ರದಲ್ಲೇ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ‘ಕಾರ್ಗಲ್ ನೈಟ್ಸ್’ ರಿಲೀಸ್ ಆಗಲಿದೆ. ಅದಕ್ಕೂ ಮುನ್ನವೇ ಒಟಿಟಿಯಲ್ಲಿ ಸಾಕಷ್ಟು ಬೇಡಿಕೆ ಇದೆ ಎಂಬುದಂತೂ ಅಲ್ಲಗಳೆಯುವಂತಿಲ್ಲ.