ಮಕ್ಕಳ - ಪೋಷಕರ ನಡುವಿನ ಬಾಂಧವ್ಯ ಎತ್ತಿಹಿಡಿಯುವ ’ಪಂಚಮ’
ಇತ್ತೀಚಿನ ದಿನಗಳಲ್ಲಿ ಮಕ್ಕಳ ಚಿತ್ರಗಳ ನಿರ್ಮಾಣ ಬಹಳ ವಿರಳವಾಗಿದೆ.
ಇಂತಹ ಸಂದರ್ಭದಲ್ಲಿ ’ಪಂಚಮ’ ಎಂಬ ಮಕ್ಕಳ ಚಿತ್ರ ನಿರ್ಮಾಣವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.
ಪವಿತ್ರ ಪರ್ಸ್ಯೂಟ್ ಪಿಕ್ಚರ್ಸ್ ಲಾಂಛನದಲ್ಲಿ ಪವಿತ್ರ ಎಂ ಪಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ವಿಕ್ರಂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಮ್ಮ ಸಂಸ್ಥೆಯಿಂದ ಮೊದಲ ಬಾರಿಗೆ ಮಕ್ಕಳ ಬಗ್ಗೆ ಕಾಳಜಿಯಿರುವ ಚಿತ್ರ ನಿರ್ಮಿಸಿರುವ ಹೆಮ್ಮೆ ಇದೆ. ’ಪಂಚಮ’ ಪ್ರಪಂಚದಾದ್ಯಂತ ಕೀರ್ತಿ ಪತಾಕೆ ಹಾರಿಸಲಿ ಎನ್ನುವ ಹಾರೈಕೆ ನಿರ್ಮಾಪಕರದು.
ಮೂಲತಃ ರಂಗಶಿಕ್ಷಕರಾಗಿರುವ ಶ್ರೀಧರ್ ನಾಯ್ಕ ಈ ಚಿತ್ರದ ನಿರ್ದೇಶಕರು.
ಎ.ಎಸ್.ಮೂರ್ತಿ ಅವರ ಅಭಿನಯ ತರಂಗದಲ್ಲಿ ತರಭೇತಿ ಪಡೆದಿರುವ ಶ್ರೀಧರ್ ನಾಯ್ಕ ಸಾಕಷ್ಟು ಮಕ್ಕಳ ನಾಟಕ ಹಾಗೂ ಸಾವಿರಕ್ಕೂ ಹೆಚ್ಚು ಬೀದಿ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನವಷ್ಟೇ ಅಲ್ಲದೇ ಅನೇಕ ನಾಟಕ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಕಾರ್ಟೂನ್ ಧಾರವಾಹಿಗಳಿಗೆ ಕಂಠದಾನ ಮಾಡಿದ್ದಾರೆ ಶ್ರೀಧರ್ ನಾಯ್ಕ.
ಮಕ್ಕಳ ಮುಗ್ಧ ಮನಸ್ಸುಗಳಲ್ಲಿ ಕನಸುಗಳನ್ನು ಚಿಗುರಿಸಿ, ಅವರ ಕಲ್ಪನೆ ಗಳಿಗೆ ಗರಿ ಮೂಡಿಸಿ, ಬಾನಂಗಳದಲ್ಲಿ ಸ್ವಚಂದವಾಗಿ ಹಾರಾಡಿಸುವ ಜವಾಬ್ದಾರಿ ಯಾರದ್ದು? ಎನ್ನುವುದೇ ಈ ಚಿತ್ರದ ಕಥಾ ಸಾರಾಂಶ.
ಪಂಚಮ ಶ್ರೀಧರ್ ನಾಯ್ಕ ಈ ಚಿತ್ರದ ಪ್ರಮುಖ ಪಾತ್ರಧಾರಿ. ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಪಂಚಮ ಅನೇಕ ನಾಟಕ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯನಾಗಿದ್ದಾನೆ.
ಶ್ರೀಧರ್ ನಾಯ್ಕ, ಶೃತಿ ನಾಯಕ, ವೀಣಾ ಬಾಲಾಜಿ, ರೋಹಿಣಿ, ಜಗದೀಶ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಶ್ರೀಧರ್ ನಾಯ್ಕ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿರುವ ಈ ಚಿತ್ರಕ್ಕೆ ವಿಜಯ ಆದಿತ್ಯ ಸಂಗೀತ ನೀಡಿದ್ದಾರೆ. ರೋಷನ್ ಜಾ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ.
ಆಕಾಶ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಪಂಚಮ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆ ಯಾಗಿ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.