ಜಗ್ಗೇಶ್ ನಾಲ್ಕು ದಶಕದ ಸಿನಿಪಯಣದ ನೆನಪುಗಳು
ನವೆಂಬರ್ ೧೭,೧೯೮೦ ನವರಸ ನಾಯಕ ಜಗ್ಗೇಶ್ ‘ಕಪ್ಪು ಕೊಳ’ ಚಿತ್ರದ ಮೂಲಕ ಬಣ್ಣ ಹಚ್ಚಿದ ದಿನ. ಇಂದಿಗೆ ಸಿನಿಮಾರಂಗದಲ್ಲಿ ನಲವತ್ತು ಹೆಜ್ಜೆಗಳನ್ನು ಇಡುತ್ತಾ ರಾಜಕೀಯ, ಚಿತ್ರರಂಗ, ರಿಯಾಲಿಟಿ ಶೋದಲ್ಲಿ ಬ್ಯುಸಿ ಇದ್ದಾರೆ. ಈ ಶುಭ ಸಂದರ್ಭದಲ್ಲಿ ಮಾದ್ಯಮದವರನ್ನು ಆಹ್ವಾನಿಸಿ ಖುಷಿ, ದುಖ:, ಅವಮಾನ, ಸನ್ಮಾನ ಎಲ್ಲವನ್ನು ಹೇಳುತ್ತಾ ಹೋದರು. ನನ್ನ ಬದುಕಿನಲ್ಲಿ ಎರಡು ಪಾತ್ರಗಳು ಮಹತ್ವದ ತಿರುವು ಕೊಟ್ಟಿತು. ನನ್ನ ನಾಯಕ ಮಾಡಿಸಿದ್ದು ಅಂಬರೀಷ್, ರಾಜಕೀಯಕ್ಕೆ ಬರಲು ಪ್ರೇರಣೆ ಮಾಡಿದ್ದು ಡಿ.ಕೆ.ಶಿವಕುಮಾರ್. ನಾಲ್ಕು ದಶಕಗಳ ಕಾಲ ಸಿನಿಬದುಕಿನಲ್ಲಿ ಇದ್ದೇನೆ. ಅದಕ್ಕೆ ಜಮಾನ ಮತ್ತು ಇಂದಿನ ಮಾಧ್ಯಮವು ಕಾರಣವಾಗಿದೆ. ನಿರ್ಮಾಪಕರು, ನಿರ್ದೇಶಕರುಗಳು ಒಳ್ಳೆಯ ಪಾತ್ರಗಳನ್ನು ನೀಡುತ್ತಿರುವುದರಿಂದಲೇ ಬೆಳೆಯಲು ಸಾಧ್ಯವಾಯಿತು. ವೀರಸ್ವಾಮಿ ಅವರು ನೀನು ರಜನಿಕಾಂತ್‌ರಂತೆ ಕಾಣ್ತೀಯಾ ಎಂದು ಮುಂಗಡ ಹಣ ನೀಡಿ ಬಟ್ಟೆ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದರು. ಅಂದು ಚಿತ್ರಾನ್ನ ತಿನ್ನೋ ಪಿರಿಯಡ್. ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಅವಕಾಶ ನೀಡಿರೆಂದು ಕೇಳಿಕೊಂಡೆ. ‘ರಣರಂಗ’ದಲ್ಲಿ ಪಾತ್ರ ನೀಡಲು ಶಿಪಾರಸ್ಸು ಮಾಡಿದರು. ‘ಕೃಷ್ಣ ನೀ ಕುಣಿದಾಗ’ ಸಿನಿಮಾದಲ್ಲಿ ದ್ವಾರಕೀಶ್ ಮೇಕಪ್ ಮಾಡಿಸಿ ಕನ್ನಡಿ ಮುಂದೆ ನಿಂತಾಗ ನಾನಾ ಅಂತ ಬೆರೆಗಾದೆ. ಮುಂದೆ ಒಂದೊಂದೇ ಅವಕಾಶಗಳು ಬರಲು ಆರಂಭಿಸಿ, ದಿನಕ್ಕೆ ಎರಡು ಲಕ್ಷ ಬೇಡಿಕೆ ನಟ ಅನಿಸಿಕೊಂಡೆ.
‘ರೌಡಿ ಎಂಎಲ್‌ಎ’ ಚಿತ್ರೀಕರಣ ನಡೆಯುತ್ತಿರುವಾಗ ಜನರು ಕಿರುಚಾಡುತ್ತಿದ್ದನ್ನು ಕಂಡ ಅಂಬರೀಷ್ ನಿನ್ನ ನೋಡಿ ಜನರು ಖುಷಿ ಪಡುತ್ತಿದ್ದಾರೆ. ಹೀರೋ ಆಗಿಬಿಡು ಎಂದು ಸಣ್ಣದೊಂದು ಆಸೆಯನ್ನು ತಲೆಗೆ ಬಿಟ್ಟರು. ಅವರ ಮಾತಂತೆ ‘ತರ‍್ಲೆ ನನ್ಮಗ’ ಚಿತ್ರಕ್ಕೆ ನಾಯಕ. ದುರಾದೃಷ್ಟ ಎನ್ನುವಂತೆ ನಿಂತುಹೋಯಿತು. ಆಮೇಲೆ ಭಾವನ ಜೊತೆ ಸೇರಿಕೊಂಡು ‘ಭಂಡ ನನ್ನ ಗಂಡ’ ನಿರ್ಮಾಣ ಮಾಡಿ, ಅಂಬರೀಷ್ ಒಂದು ಹಾಡಿನಲ್ಲಿ ಕಾಣಿಸಿಕೊಂಡರು. ಆದರೆ ವಿತರಣೆ ಮಾಡಲು ಯಾರು ಮುಂದೆ ಬರಲಿಲ್ಲ. ಅದಕ್ಕೂ ಅಂಬಿಯಣ್ಣ ಸಹಾಯ ಮಾಡಿದರು. ಆ ಕಾಲಕ್ಕೆ ೬೯ ಲಕ್ಷ ವ್ಯಾಪಾರ ಆಗಿದ್ದು ಅಲ್ಲದೆ ಲಾಭ ತಂದುಕೊಟ್ಟಿತು.
ತಾತ ಅಣ್ಣಾವ್ರ ಕಟ್ಟಾ ಅಭಿಮಾನಿ. ಅದರಿಂದಲೇ ನಾನು ಅವರ ಫ್ಯಾನ್ ಆದೆ. ಎಲ್ಲರೂ ಅವರನ್ನು ನಟರನ್ನಾಗಿ ನೋಡಿದರು. ನಾನು ಅವರನ್ನು ಸಂತರಾಗಿ ಕಂಡಿದ್ದೇನೆ. ನನ್ನ ಬದುಕಿನಲ್ಲಿ ಬಂದಂತ ಸಾಕಷ್ಟು ಸಂದೇಹಗಳಿಗೆ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ಕುಟುಂಬ, ಭಾಷೆ, ಸಿನಿಮಾ ಅಂದರೆ ಏನು, ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. ಅವರ ಮಾತನ್ನು ಈಗಲೂ ಚಾಚು ತಪ್ಪದೆ ನಡೆಸಿಕೊಂಡು ಬರುತ್ತಿದ್ದೇನೆ.
ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋದಾಗ, ಅಲ್ಲಿ ನಾನು ಮಾತನಾಡಿದ್ದನ್ನು ನೋಡಿ ಚೆನ್ನಾಗಿ ಮಾತನಾಡುತ್ತೀರಾ. ಪಾಲಿಟಿಕ್ಸ್‌ಗೆ ಬನ್ನಿರೆಂದು ತಳ್ಳಿದರು. ಈಗ ಒಂದು ಪಕ್ಷದ ಸದಸ್ಯನಷ್ಟೇ. ಇಂದಿಗೂ ಇಷ್ಟಪಡೋದು ಕಲೆಯನ್ನು ಮಾತ್ರ. ಈ ಎಲ್ಲಾ ಬೆಳವಣಿಗೆಯ ಹಿಂದೆ ದೊಡ್ಡದಾದ ಶಕ್ತಿ, ಅದು ರಾಯರ ಆರ್ಶಿವಾದ. ಅವತ್ತು ಸ್ವಂತಕ್ಕೆ ಆಟೋರಿಕ್ಷಾ ತೆಗೆದುಕೊಂಡರೆ ಸಾಕು, ಎನ್ನುತ್ತಿದ್ದವನಿಗೆ, ಇವತ್ತು ನೂರು ಜನರನ್ನು ಸಾಕುವ ಮಟ್ಟಕ್ಕೆ ಬಂದಿದ್ದೇನೆ. ಕನ್ನಡ ಭಾಷೆ, ನೆಲ, ಜಲ ಬಗ್ಗೆ ಹೇಳಬೇಕು ಎಂದರೆ, ಮೊದಲು ಕನ್ನಡಿಗರಿಗೆ ಅವಕಾಶ ಸಿಗಬೇಕು. ಪ್ಯಾನ್ ಇಂಡಿಯಾ ಕಟ್ಟಿಕೊಂಡು ಮಾಡೋದು ಏನಿದೆ. ಅಲ್ಲಿ ನಮ್ಮವರಿಗೆ ಕೆಲಸ ಕೊಡೋಲ್ಲ. ನಮ್ಮ ಕಲಾವಿದರು ಇರೋಲ್ಲ. ಯಾರನ್ನೋ ಮೆಚ್ಚಿಸೋಕೆ ಇಲ್ಲಿ ಏನೇನೋ ನಡೆಯುತ್ತಿದೆ. ನಾವುಗಳು ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ನೋಡುವ ಕಾಲ ಬರುವುದು ಖಚಿತವೆಂದು ಮಾತಿಗೆ ವಿರಾಮ ಹಾಕುತ್ತಾರೆ ಜಗ್ಗೇಶ್. ಪತ್ನಿ ಪರಿಮಳಜಗ್ಗೇಶ್ ಪತಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು.