*ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಏನಾಗುತ್ತದೆ ಎಂಬುದನ್ನು ಕಿಲಾಡಿಗಳು ಹೇಳಲಿದ್ದಾರೆ*
*- ಡಿ. 18ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ*
*- ಕಿಲಾಡಿಗಳು ಚಿತ್ರದ ಟ್ರೇಲರ್ ರಿಲೀಸ್*
*- ಚಿತ್ರದಲ್ಲಿನ ಮೂರು ಹಾಡುಗಳು ಪೊಲೀಸರಿಗೆ ಅರ್ಪಣೆ*
ಆನಂದ್ ಸಿನಿಮಾಸ್ ಅರ್ಪಿಸುವ ಪೂರ್ವಿಕಾಮೃತ ಕ್ರಿಯೇಷನ್ಸ್ ಲಾಂಛನದ ಅಡಿಯಲ್ಲಿ ನಿರ್ಮಾಣವಾಗಿರುವ ಕಿಲಾಡಿಗಳು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡಿ. 18ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು. ಆ ನಿಮಿತ್ತ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಇತ್ತೀಚೆಗಷ್ಟೇ ನಗರದ ಓರಾಯನ್ ಮಾಲ್ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪರಮಾತ್ಮ ಸ್ಡುಡಿಯೋಸ್ ನಲ್ಲಿ ಟ್ರೇಲರ್ ವೀಕ್ಷಣೆಗೆ ಲಭ್ಯವಿದೆ.
ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟರೆ ಏನಾಗುತ್ತದೆ ಎಂಬುದನ್ನೇ ಪ್ರಧಾನವಾಗಿಟ್ಟುಕೊಂಡು ಕಿಲಾಡಿಗಳು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಬಿ.ಪಿ ಹರಿಹರನ್. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಹೇಂದ್ರ ಮಣೋತ್ ನಾಯಕನಾಗಿ ನಟಿಸಿದ್ದು, ಚಿತ್ರದ ನಿರ್ಮಾಣದ ಹೊಣೆಯೂ ಅವರದ್ದೆ. ಚಿತ್ರದ ಬಗ್ಗೆ ಮಾತನಾಡುವ ಅವರು. ‘ಇದೊಂದು ಪ್ರಸ್ತುತ ಸನ್ನಿವೇಷವನ್ನು ಆಧರಿಸಿ ಮಾಡಲಾದ ಸಿನಿಮಾ. ನಾನಿಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಕರ್ನಾಟಕ ಪೊಲೀಸ್ ಶಕ್ತಿ ಎಂಥದ್ದು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಒಂದಷ್ಟು ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಮಾಹಿತಿ ಪಡೆದು ಈ ಸಿನಿಮಾ ಮಾಡಲಾಗಿದೆ ಎಂದು ಮಾಹಿತಿ ನೀಡುತ್ತಾರೆ ನಿರ್ಮಾಪಕ ಮಹೇಂದ್ರ ಮಣೋತ್.
ವಿಶೇಷ ಏನೆಂದರೆ, ಈ ಚಿತ್ರದಲ್ಲಿ ಮೂರು ಹಾಡುಗಳನ್ನು ಪೊಲೀಸ್ ಇಲಾಖೆಗೆ ಅರ್ಪಿಸಲಾಗಿದೆ. ಮಕ್ಕಳ ಅಪಹರಣದ ಹಿನ್ನೆಲೆಯಲ್ಲಿಯೂ ಕಥೆ ತೆರೆದುಕೊಳ್ಳಲಿದ್ದು, ಪೊಲೀಸ್ ಇಲಾಖೆ ಅಪಹರಣಾಕಾರರನ್ನು ಹೇಗೆ ಹಿಡಿಯುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ‘ಸೈನಿಕರು ದೇಶ ಕಾಯ್ದರೆ, ಪೊಲೀಸರು ನಮ್ಮನ್ನು ಕಾಯುತ್ತಾರೆ. ನನ್ನ ಮೇಲೆಯೇ ಹಲ್ಲೆ ನಡೆದಾಗ ಪೊಲೀಸರು ನನ್ನನ್ನು ರಕ್ಷಣೆ ಮಾಡಿದ್ದರು. ಅವರಿಗಾಗಿಯೇ ಈ ಸಿನಿಮಾ ನಿರ್ಮಾಣಮಾಡಿದ್ದೇನೆ. ನಮ್ಮ ಸಿನಿಮಾ ಇದೇ ಡಿ. 18ರಂದು ಬಿಡುಗಡೆ ಆಗಲಿದೆ. ಜತೆಗೆ ಸರ್ಕಾರ ಗೋ ಹತ್ಯೆ ನಿಷೇಧ ಮಾಡಿರುವುದು ಒಳ್ಳೇ ಬೆಳವಣಿಗೆ ಎಂದೂ ಹೇಳಿದರು.
ಇನ್ನು ಚಿತ್ರದ ನಿರ್ದೇಶಕ ಹರಿಹರನ್ ಮಾತನಾಡಿ, ಕಿಲಾಡಿಗಳು ಸಿನಿಮಾಕ್ಕೆ ಕಥೆ ಬರೆದು, ಚಿತ್ರಕಥೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿದ್ದಾರೆ. ‘ಈ ಚಿತ್ರದಲ್ಲಿ 140ಕ್ಕೂ ಅಧಿಕ ಪಾತ್ರಗಳಿವೆ. ಅವುಗಳಲ್ಲಿ ಮುಕ್ಕಾಲು ಭಾಗ ಮಕ್ಕಳೇ ನಟಿಸಿದ್ದಾರೆ. ಕಮಿಷನರ್ ಪಾತ್ರದಲ್ಲಿ ಗುರುರಾಜ ಹೊಸಕೋಟೆ ನಟಿಸಿದ್ದಾರೆ. ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಬಳಕೆ ಮಾಡಿಕೊಂಡು ಕೆಲ ಸೆಕೆಂಡ್ಗಳ ಕಾಲ ಸಿನಿಮಾದಲ್ಲಿ ನೋಡಬಹುದು ಎಂದರು ನಿರ್ದೇಶಕರು.
ಅಮೆರಿಕಾದಲ್ಲಿ ಚಿತ್ರದ ಡಿಟಿಎಸ್ ಮತ್ತು ಮಿಕ್ಸಿಂಗ್ ಕೆಲಸ ಮಾಡಲಾಗಿದೆ. ಮೂರು ತಿಂಗಳ ಕಾಲ ಹಾಲಿವುಡ್ ತಂತ್ರಜ್ಱ ವಾಲ್ಟರ್ ಅವರೊಂದಿಗೆ ಕೆಲಸ ಮಾಡಿದ್ದಾಗಿಯೂ ನಿರ್ದೇಶಕರು ಹೇಳಿಕೊಂಡರು. ಒಟ್ಟಾರೆ ಬೆಂಗಳೂರು ಸೇರಿ ಸುತ್ತಮುತ್ತ 81 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಡಾ. ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ, ಅಜಯ್ ಆರ್ ವೇದಾಂತಿ, ಲೆಮೊನ್ ಪರಶುರಾಮ್ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ಎ.ಟಿ ರವೀಶ್ ಸಂಗೀತ ನೀಡಿದ್ದು, ನಿರಂಜನ್ ಬೋಪಣ್ಣ, ಜಾನ್ ಅರ್ನಾಲ್ಡ್ ಛಾಯಾಗ್ರಾಹಕರಾಗಿದ್ದಾರೆ.
ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಡೈಮಂಡ್ ರಾಜಣ್ಣ, ನಿರ್ದೇಶಕ ಮಾಚಂದ್ರು, ಶೇಷಗಿರಿ ಬಸವರಾಜು, ಚಿತ್ರದಲ್ಲಿ ಅಭಿನಯಿಸಿದ ಮಕ್ಕಳು ನಿಭಾಯಿಸಿದ ಪಾತ್ರದ ಬಗ್ಗೆ ಕುರಿತು ಹಂಚಿಕೊಂಡರು. ಪಾತ್ರವರ್ಗದಲ್ಲಿ ಮಜಾ ಭಾರತ್ ಸೀತಾರಾಮ್, ಮಹೇಂದ್ರ ಮಣೋತ್, ಗುರುರಾಜ್ ಹೊಸಕೋಟೆ, ಹರಿಹರನ್ ಬಿ.ಪಿ, ಭಾಗ್ಯಶ್ರೀ, ಚಿತ್ರ ಹರಿಹರನ್, ಮಿಲಿಟರಿ ಮಂಜು, ಶೇಷಗಿರಿ ಬಸವರಾಜ್, ಅಮೃತಿ ರಾಜೇಶ್ ಮೈಸೂರು, ಸಿಲ್ಲಿ ಲಲ್ಲಿ ರಂಗನಾಥ್, ಮಾಸ್ಟರ್ ಕಿರಣ್, ಮಾಸ್ಟರ್ ಗುರು ತೇಜಸ್, ಮಾಸ್ಟರ್ ಸಮರ್ಥ್ ನಟಿಸಿದ್ದಾರೆ.