ಅಪ್ಪ ಮಗನ ಬಾಂದವ್ಯದ ಕಥನ
ಮದ್ಯಪಾನ ಮಾಡಲು ಹಲವು ಕಾರಣಗಳು ಇರುತ್ತದೆ. ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಮರೆಯಲು ಕುಡಿತದ ದಾಸನಾಗುತ್ತಾರೆ. ಅಂಥದ್ದೇ ಮದ್ಯವ್ಯಸನಿಯ ಕತೆ ಹೊಂದಿರುವ ಚಿತ್ರ ‘ನಾನೊಂಥರ’. ತನ್ನದೆ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದ ಆತನಿಗೆ ನಡೆದ ಒಂದು ಘಟನೆ ಕುಡುಕನಾಗುವಂತೆ ಮಾಡುತ್ತದೆ. ಅಂಥವನ ಬಾಳಿನಲ್ಲಿ ಹುಡುಗಿಯೊಬ್ಬಳು ಪ್ರವೇಶಿಸುತ್ತಾಳೆ. ಅವನ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ನೋಡಿ ಪ್ರೀತಿ ಮಾಡುತ್ತಾಳೆ. ಕುಡಿತಕ್ಕೆ ಕಾರಣವೇನೆಂದು ಪತ್ತೆ ಹಚ್ಚಿ ಅವನನ್ನು ಮತ್ತೆ ಮೊದಲಿನಂತೆ ಮಾಡುತ್ತಾಳೆ. ಅವನ ಬದುಕನ್ನು ಒಳ್ಳೆ ದಾರಿಗೆ ತರುವಾಗ ಎದುರಾಗುವ ಅಡೆತಡೆಗಳು, ಜೊತೆಗೆ ತಂದೆ ಮಗನ ಬಾಂದವ್ಯವನ್ನು ಸಾರಲಿದೆ. ರಮೇಶ್‌ಕಗ್ಗಲ್ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿಕ್ಕವಳಿದ್ದಾಗ ಡಾ.ರಾಜ್‌ಕುಮಾರ್ ಅಭಿನಯದ ‘ಧ್ರುವತಾರೆ’ ಸಿನಿಮಾದಲ್ಲಿ ನಟಿಸಿದ್ದೆ. ಚಿತ್ರ ನಿರ್ಮಾಣ ಮಾಡುವ ಕನಸು ಇದರ ಮೂಲಕ ನನಸಾಗಿದೆ. ಅಲ್ಲದೆ ಮಗ ನಟನಾಗಬೇಕೆಂದು ಆಸೆ ಪಟ್ಟಿದ್ದ. ಅವನ ಇಚ್ಚೆಯಂತೆ ಬಂಡವಾಳ ಹೂಡಿದ್ದೇನೆ ಎಂದು ವೈದ್ಯೆ ಜಾಕ್ಲಿನ್‌ಫ್ರಾನ್ಸಿಸ್ ಹೇಳಿದರು. ತಾರಖ್.ವಿ.ಶೇಖರಪ್ಪ ಅವರಿಗೆ ನಾಯಕನಾಗಿ ಮೂರನೇ ಅವಕಾಶ. ತಂದೆಯ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ಇಡೀ ಸಿನಿಮಾ ಇಬ್ಬರ ನಡುವೆ ಸಾಗಲಿದ್ದು, ಇದರ ಮಧ್ಯೆ ಸುಂದರ ಪ್ರೇಮ ಕತೆ ಇರುವುದು ವಿಶೇಷ. ಸೋದರನಾಗಿ ನಿರ್ಮಾಪಕಿ ಪುತ್ರ ಜೈಸನ್, ನಾಯಕಿಯಾಗಿ ರಕ್ಷಕ, ಮತ್ತೋಂದು ಮುಖ್ಯ ಪಾತ್ರದಲ್ಲಿ ರಾಕ್‌ಲೈನ್‌ವೆಂಕಟೇಶ್, ಖಳನಾಗಿ ಪ್ರಶಾಂತ್ ಅಭಿನಯವಿದೆ. ಬೆಂಗಳೂರು, ದೇವನಹಳ್ಳಿಯಲ್ಲಿ ಚಿತ್ರೀಕರಣ ನಡೆದಿದೆ. ಸುನಿಲ್‌ಸ್ಯಾಮುಯೆಲ್ ಸಂಗೀತ ಸಂಯೋಜಿಸಿದ್ದಾರೆ. ವಿತರಕ ವಿಜಯ್‌ಕುಮಾರ್ ಬನಹಟ್ಟಿ ಮೂಲಕ ಚಿತ್ರವು ಇದೇ ೧೮ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.