*ಐರಾವನ್ ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್*
ಎಂಜಿಪಿ ಕ್ರಿಯೇಷನ್ಸ್ ಅರ್ಪಿಸುವ ನಿರಂತರ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾದ ಐರಾವನ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಹಾರೈಸಿದರು.
ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ನಟ ಜೆಕೆ ಸಿನಿಮಾರಂಗದ ಆರಂಭದ ದಿನಗಳನ್ನು ನೆನಪಿಸಿಕೊಂಡರು. ‘ನನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದ್ದು, ಜಾಕ್ ಮಂಜು ಅವರು ಡೆಡ್ಲಿ 2 ಚಿತ್ರದ ಮೂಲಕ. ಆ ಸಿನಿಮಾದಿಂದ ಸಿನಿಮಾ ಜರ್ನಿ ಶುರುವಾಯಿತು. ಬಳಿಕ ಮತ್ತೆ ದೂರವಾದೆ. ಆಗ ಕೆಂಪೇಗೌಡ ಚಿತ್ರದ ಮೂಲಕ ಮತ್ತೆ ಬಂದೆ. ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ತಂಡದಲ್ಲಿ ಆಡಬೇಕೆಂಬ ಕನಸಿತ್ತು. ಆ ಲೆವೆಲ್ನ ಸಿಸಿಎಲ್ನಲ್ಲಿ ಆ ಕನಸನ್ನು ಈಡೇರಿಸಿದರು. ಕಷ್ಟ ಇರಲಿ, ಸುಖ ಇರಲಿ ಸುದೀಪ್ ನನ್ನ ಜತೆಗಿದ್ದಾರೆ. ಇನ್ನು ಈ ಸಿನಿಮಾ ಬಗ್ಗೆ ಹೇಳುವುದಾದರೆ, ಕೋವಿಡ್ ಸಮಯದಲ್ಲಿ ಸಿನಿಮಾ ಮಾಡಲು ಯೋಚನೆ ಮಾಡಬೇಕು. ನಿರಂತರ್ ಅವರು ಅಷ್ಟೇ ಬೇಗ ಈ ಸಿನಿಮಾ ವನ್ನು ಮುಗಿಸಿದ್ದಾರೆ ಎಂದರು.
ಅದೇ ರೀತಿ ಚಿತ್ರದಲ್ಲಿ ನಾಯಕಿಯಾಗಿ ಅದ್ವಿತಿ ಶೆಟ್ಟಿ ಜೆಕೆಗೆ ಜೋಡಿಯಾಗಿದ್ದಾರೆ. ಅಭಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇಬ್ಬರೂ ತಮ್ಮ ಅನುಭವ ವನ್ನು ಹಂಚಿಕೊಂಡರು. ಅದೇ ರೀತಿ ನಿರ್ದೇಶಕ ರಾಮ್ಸ್ ರಂಗ ಸಿನಿಮಾದ ಎಳೆ ಬಿಚ್ಚಿಟ್ಟರು. ಇದು ನನ್ನ ಮೊದಲ ಸಿನಿಮಾ. ಈ ಹಿಂದೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ಮಾಡಿದ್ದೇನೆ. ಐರಾವನ್ ಎಂದರೆ, ಅರ್ಜುನನ ಮೂರನೇ ಮಗ ಐರಾವನ್. ಅದು ರಾಕ್ಷಸ ರೂಪ. ಆ ರೂಪವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ಆ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಬೇಕೆಂದರು.
ಇನ್ನು ಕಾರ್ಯಕ್ರಮದ ಕೇಂದ್ರ ಬಿಂದು ಕಿಚ್ಚ ಸುದೀಪ್ ಸಹ ಒಂದಿಷ್ಟು ಹೊತ್ತು ಮಾತನಾಡಿದರು. ಸಿನಿಮಾ ಮೊದಲು ಚಿತ್ರಮಂದರಿಕ್ಕೆ ಬರಬೇಕು. ಎಲ್ಲೋ ಕಳೆದು ಹೋಗಬೇಡಿ. ಶ್ರಮಕ್ಕೆ ಬೆಲೆ ಸಿಗಬೇಕೆಂದರೆ, ಚಿತ್ರಮಂದಿರ ಅನ್ನೋ ದೇವಸ್ಥಾನ ಪ್ರವೇಶಿಸಲೇಬೇಕು. ಅದೇ ರೀತಿ ಇಷ್ಟು ದಿನ ಒಳ್ಳೇ ಚಿತ್ರಮಂದಿರ ಸಿಗಲಿ ಎಂದು ಕಾಯುತ್ತಿದ್ದೇವು. ಇದೀಗ ಚಿತ್ರಮಂದಿರ ಸಿಕ್ಕರೆ ಸಾಕಪ್ಪ ಎಂಬಂತಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಬಳಿಕ ಚಿತ್ರದ ನಿರ್ಮಾಪಕ ನಿರಂತರ, ಹುಚ್ಚ ಸಿನಿಮಾದಿಂದ ಸುದೀಪ್ ಅವರನ್ನು ನೋಡಿಕೊಂಡು ಬಂದಿದ್ದೇವೆ. ಜೆಕೆ ಅವರ ಮೂಲಕ ಅವರನ್ನು ಭೇಟಿ ಮಾಡಿಬಂದೆವು. ಈ ಕಾರ್ಯಕ್ರಮಕ್ಕೆ ಬಂದು ಟೀಸರ್ ಲಾಂಚ್ ಮಾಡಿದ್ದಕ್ಕೆ ಅವರಿಗೆ ಧನ್ಯವಾದ. ಇಡೀ ತಂಡದಲ್ಲಿ ಎಲ್ಲರೂ ಯುವಕರೇ. ಯುವಕರನ್ನು ಗುರುತಿಸಬೇಕೆಂಬ ಉದ್ದೇಶದಿಂದ ಸಿನಿಮಾರಂಗಕ್ಕೆ ಬಂದಿದ್ದೇನೆ ಎಂದರು.
ಅದೇ ರೀತಿ ನಿರ್ದೇಶಕರಾದ ಹರಿ ಸಂತೋಷ್, ಭರ್ಜರಿ ಚೇತನ್, ರಜತ್ ರವಿ ಶಂಕರ್, ನಟ ರಾಜವರ್ಧನ್, ವಿಕ್ಕಿ ವರುಣ್, ರಾಕ್ಲೈನ್ ವಂಕಟೇಶ್ ಪುತ್ರ ಯತೀಶ್ ವೆಂಕಟೇಶ್ ಸೇರಿ ಹಲವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಇನ್ನು ತಾಂತ್ರಿಕ ವರ್ಗದಲ್ಲಿ ಎಸ್ ಪ್ರದೀಪ್ ವರ್ಮಾ ಅವರ ಸಂಗೀತ, ದೇವೇಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಹರಿ ಸಂತೋಶ್ ಸಾಹಿತ್ಯ, ಕಾಂತರಾಜು ಕಡ್ಡಿಪುಡಿ ಸಂಭಾಷಣೆ ಬರೆದಿದ್ದಾರೆ. ಸಾಯಿ ಚರಣ್ ಮತ್ತು ಆರ್ ಲೋಹಿತ್ ನಾಯ್ಕ್ ಸಹ ನಿರ್ದೇಶನ ಮಾಡಿದ್ದಾರೆ. ಕುಂಗ್ ಫು ಚಂದ್ರು ಸಾಹಸ ನಿರ್ದೇಶನವಿದೆ.