Party Freak.Song Rel Press Meet.

Saturday, December 26, 2020

351

 

*ಯೂನೈಟೆಡ್​ ಆಡಿಯೋಸ್​ನಲ್ಲಿ ಧೂಳೆಬ್ಬಿಸುತ್ತಿದೆ ಚಂದನ್​ ಶೆಟ್ಟಿ ಪಾರ್ಟಿ ಫ್ರೀಕ್​  ಹಾಡು*

ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಮೂಡಿಬಂದ ಪಾರ್ಟಿ ಫ್ರೀಕ್ ಹಾಡು ಶನಿವಾರ ಯೂನೈಟೆಡ್​ ಆಡಿಯೋಸ್ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿದೆ. ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು. ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಮೊದಲಾರ್ಥವಾಗಿ ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್​ ಎಂಬ ಹಾಡನ್ನು ನಿರ್ಮಾಣ ಮಾಡಿದ್ದಾರೆ.

ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್​ ಶೆಟ್ಟಿ ಮಾತನಾಡಿ,  ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್‌ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸ‌ಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್​ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂಸ್ಥೆ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಇದರಿಂದ ನಮ್ಮ ಬೆಳವಣಿಗೆ ಜತೆಗೆ ಇಂಡಸ್ಟ್ರಿಯ ಬೆಳವಣಿಗೆಗೂ ಸಹಕಾರಿ. ಈ ಥರದ ನಿರ್ಮಾಪಕರು ಇಂಡಸ್ಟ್ರಿಗೆ ಬೇಕು ಎಂದರು.

ಇನ್ನು ಈ ಹಾಡಿಗೆ ಬಂಡವಾಳ ಹೂಡಿರುವ ಚೈತನ್ಯ ಲಕಂಸಾನಿ ಮಾತನಾಡಿ, ತುಂಬ ಕಿರು ಅವಧಿಯಲ್ಲಿ ಈ ಹಾಡನ್ನು ಸೃಷ್ಟಿ ಮಾಡಿದ್ದೇವೆ. ನಮ್ಮ ತಾಂತ್ರಿಕ ತಂಡಕ್ಕೆ ಧನ್ಯವಾದ. ಈ ಆಡಿಯೋ ಸಂಸ್ಥೆ ತೆರೆಯಲು ಮೂಲ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದರ ಸಲುವಾಗಿ. ಯಾರಿಗೆ ಸಂಗೀತ ಮತ್ತು ಸಿನಿಮಾ ಆಸಕ್ತಿ ಇದೆಯೋ ಅವರಿಗೆ ನಮ್ಮ ಸಂಸ್ಥೆಯಿಂದ ಸ್ವಾಗತ ಎಂದರು.

ಇನ್ನು ಈ ಹಾಡಿನ ನಿರ್ಮಾಣದಲ್ಲಿ ಭಾಗವಾಗಿರುವ ನಟ ಧರ್ಮ ಸಹ ಹಾಡು ಮತ್ತು ಈ ಸಂಸ್ಥೆಯ ಮುಂದಿನ  ಯೋಜನೆಗಳ ಬಗ್ಗೆ ಮಾತನಾಡಿದರು. ‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು.‌ ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.

ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್​ ಡಾನ್ಸರ್​ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,