ಒಂದು ರಾತ್ರಿಯಲ್ಲಿ ನಡೆಯುವ ಹಾರರ್ ಕಥನ
ಹೊಸಬರೇ ಸೇರಿಕೊಂಡು ‘ರಾತ್ರೋರಾತ್ರಿ’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾವು ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕತೆಯಾಗಿದೆ. ಟೆಂಪೋ ಚಾಲಕನಾಗಿರುವ ಆತನಿಗೆ ಅಮ್ಮನ ಆರೋಗ್ಯ ಸರಿ ಇಲ್ಲವೆಂದು, ಇದಕ್ಕಾಗಿ ೫೦೦೦೦ ವೆಚ್ಚವಾಗುತ್ತದೆಂದು ಆಸ್ಪತ್ರೆಯಿಂದ ಕರೆ ಬರುತ್ತದೆ. ಯಾರಿಂದಲೂ ಸಹಾಯವಾಗದೆ ದೇವರ ಮೊರೆ ಹೋಗುತ್ತಾನೆ. ನಂತರ ಪರಿಚಯದವನೊಬ್ಬ ಬಂದು ಒಂದು ಹೆಣವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ನೀನು ಕೇಳುವ ಹಣ ನೀಡುವುದಾಗಿ ತಿಳಿಸುತ್ತಾನೆ. ಅದರಂತೆ ಬಾಡಿಯನ್ನು ತೆಗೆದುಕೊಂಡು ಹೋಗುವಾಗ, ಅದು ಊರನ್ನು ಬಿಡದೆ ಗಾಡಿಗೆ ತೊಂದರೆ ಕೊಡುತ್ತದೆ. ಅದು ಏಕೆ, ಆಕೆ ಯಾರು? ಆಕೆಯ ಸಾವಿಗೆ ಕಾರಣವೇನು? ಎಂಬುದು ಸನ್ನಿವೇಶಗಳ ಮೂಲಕ ತೆರೆದುಕೊಳ್ಳುತ್ತದೆ.
ನಾಲ್ಕು ನೂರು ಹೆಚ್ಚು ಸಿನಿಮಾಗಳಿಗೆ ಫೈಟರ್ ಆಗಿರುವ ದಾಸ್ ಪುತ್ರ ಪವನ್‌ಕುಮಾರ್ ನಾಯಕ ಮತ್ತು ಪವನ್ ಚಿತ್ರಾಲಯ ಮೂಲಕ ಬಂಡವಾಳ ಹೂಡಿದ್ದಾರೆ. ಡೀಲ್‌ಮುರಳಿ ರಚನೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಚಿಕಾ ಹಾಗೂ ಡಯನಾ ನಾಯಕಿಯರು. ತಾಯಿ ಪಾತ್ರದಲ್ಲಿ ಗಂಗಮ್ಮ, ಖಳರುಗಳಾಗಿ ರಾಜ್‌ಕಾಂತ್-ವಿನಯ್‌ಕುಮಾರ್.ವಿ.ನಾಯಕ್, ಮಂತ್ರವಾದಿಯಾಗಿ ದಿವಾಕರ್, ನಗಿಸಲು ಹರೀಶ್ ಉಳಿದಂತೆ ಪ್ರಸನ್ನ, ಮುರಳಿ, ಮನೋಜ್, ಸುನಿಲ್ ಮುಂತಾದವರ ನಟನೆ ಇದೆ. ಬಿಡದಿ, ರಾಮನಗರ, ಮಂಡ್ಯಾ, ಮೈಸೂರು ಹೆದ್ದಾರಿ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಟೆಕ್ಕಿ ಶ್ರೀಧರ್‌ನರಸಿಂಹನ್ ಅಮ್ಮನ ಕುರಿತ ಹಾಡಿಗೆ ಸಾಹಿತ್ಯ,ಸಂಗೀತ ಸಂಯೋಜಿಸಿ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಕಿರಣ್‌ಗಜ, ಸಂಕಲನ ಸೋಲೋಮನ್, ಸಾಹಸ ಆಕ್ಷನ್‌ಮೂರ್ತಿ ಅವರದು. ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ವಾಲ್ಮೀಖಿ ಬ್ರಹ್ಮಾನಂದ ಗುರೂಜಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಸಿನಿಮಾವು ಜನವರಿ ೧೪ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.