ತನಿಖೆ ಚಿತ್ರದ ವೀಕ್ಷಕರಿಗೆ ಲಕ್ಕಿ ಡ್ರಾ ಕೂಪನ್
ಇಪ್ಪತ್ತೈದು ವರ್ಷಗಳ ಹಿಂದೆ ತೆರೆಕಂಡ ‘ತನಿಖೆ’ ಚಿತ್ರವು ಶತದಿನ ಆಚರಿಸಿತ್ತು. ಈಗ ಅದೇ ಹೆಸರಿನ ಮೇಲೆ ಹೊಸಬರೇ ಸೇರಿಕೊಂಡು ಸಿನಿಮಾ ಸಿದ್ದಪಡಿಸಿದ್ದಾರೆ. ಜಿ.ಎಸ್.ಕಲಿಗೌಡ ಸಾಹಿತ್ಯ, ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಕತೆಯ ಗುಟ್ಟನ್ನು ಬಿಟ್ಟುಕೊಡದ ತಂಡವು, ನೋಡುಗರಿಗೆ ಗೊಂದಲ ಮೂಡಿಸುವಂತಹ ನಾಲ್ಕು ಕ್ಲೈಮಾಕ್ಸ್‌ಗಳು ಇರಲಿದ್ದು, ಎರಡನೇ ಸಲ ನೋಡಿದಾಗ ಮಾತ್ರ ಅರ್ಥವಾಗುತ್ತದಂತೆ. ‘ಎಣ್ಣೆ ಹೊಡಿಯೋದ ಹೆಂಡ್ತಿ ಬಿಡೋದ’ ಗೀತೆಗೆ ನವೀನ್‌ಸಜ್ಜು ಕಂಠದಾನ ಮಾಡಿದ್ದು,
ಹಾಡುಗಳನ್ನು ಜೀ ಮ್ಯೂಸಿಕ್ ಸಂಸ್ಥೆಯು ಬಿಡುಗಡೆ ಮಾಡಿದೆ.
ಕೋವಿಡ್ ಇರುವ ಕಾರಣ ಜನರು ಚಿತ್ರಮಂದಿರಕ್ಕೆ ಬರುವುದಿಲ್ಲವೆಂದು ಮನಗಂಡು ಸಿನಿಮಾವನ್ನು ‘ನಮ್ಮ ಫ್ಲಿಕ್ಸ್’ ದಲ್ಲಿ ನೇರವಾಗಿ ಮನೆ ಮನೆಗೆ ತಲುಪಿಸಲು ಯೋಜನೆ ಹಾಕಿಕೊಂಡಿದ್ದಾರೆ. ನೋಡುಗರಿಗೆ ಆಕರ್ಷಕ ಬಹುಮಾನ ನೀಡುವುದು ವಿಶೇಷ. ಹೊಸ ಸ್ಕ್ಯಾನ್ ಕೋಡ್ ಟೆಕ್ನಾಲಜಿಯಲ್ಲಿ ಟಿಕೆಟ್‌ನ್ನು ನೊಂದಾಯಿಸಿಕೊಳ್ಳಬೇಕಾಗಿದೆ. ನೊಂದಾಯಿಸಿದ ಪ್ರೇಕ್ಷಕರಿಗೆ ತಮ್ಮ ಈ ಮೇಲ್ ಹಾಗೂ ಎಸ್‌ಎಂಎಸ್‌ದಲ್ಲಿ ಆಫರ್ ಕೋಡ್, ಟಿಕೆಟ್ ನಂಬರ್ ಮತ್ತು ಚಿತ್ರ ವೀಕ್ಷಿಸಬಹುದಾದ ‘ನಮ್ಮ ಫ್ಲಿಕ್ಸ್’ ಆಪ್ ಲಿಂಕ್‌ಕೋಡ್ ನೀಡಲಾಗುತ್ತದೆ. ಈ ಮೂಲಕ ವಿನೂತನ ಡಿಜಿಟಲ್ ಪ್ರಯತ್ನವನ್ನು ತಂಡವು ಕೈಗೊಂಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ವಿಜೇತರನ್ನು ಲಕ್ಕಿ ಡ್ರಾ ಮುಖಾಂತರ ಆಯ್ಕೆ ಮಾಡಲಾಗುವುದು.