Aana.Film Title Poster Launch.

Saturday, October 24, 2020

327

 

*ಅದಿತಿ ಪ್ರಭುದೇವ ಮಹಿಳಾ ಸೂಪರ್ ಹೀರೋ ಚಿತ್ರಕ್ಕೆ ಆನ ಶೀರ್ಷಿಕೆ*

 

ಯೂಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪೂಜಾ ವಸಂತ್‌ಕುಮಾರ್ ನಿರ್ಮಾಣ ಮಾಡಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ‘ಆನ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಶನಿವಾರ ನೆರವೇರಿತು.

ಈ ಮೊದಲೇ ಹೇಳಿದಂತೆ ಇದೊಂದು ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾ. ಚಿತ್ರದ ಶೀರ್ಷಿಕೆಯೂ ಅಷ್ಟೇ ವಿಶೇಷವಾಗಿರಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ಅದರಂತೆ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು. ಚಿತ್ರಕ್ಕೆ ‘ಆನ’ ಎಂದು ಟೈಟಲ್ ಇಡಲಾಗಿದೆ.

ಈ ವಿಶೇಷ ಪಾತ್ರ ಮತ್ತು ಚಿತ್ರದ ಬಗ್ಗೆ ಹೇಳಿಕೊಳ್ಳುವ ಅದಿತಿ, ‘ತುಂಬ ಇಷ್ಟಪಟ್ಟು ಮತ್ತು ತುಂಬ ಕಷ್ಟಪಟ್ಟು ಮಾಡಿದ ಸಿನಿಮಾ ಇದು. ಇಂಥ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಕಥೆ ಕೇಳಿ ಒಂದೇ ಸಲಕ್ಕೆ ನಟಿಸಲು ಒಪ್ಪಿಕೊಂಡಿದ್ದೇನೆ. ಚಿತ್ರದ ಬಹುಪಾಲು ಶೂಟಿಂಗ್ ರಾತ್ರಿ ಹೊತ್ತಿನಲ್ಲಿಯೇ ನಡೆದಿದೆ. ಇನ್ನು ಕೆಲ ಭಾಗದ ಚಿತ್ರೀಕರಣ ಬಾಕಿ ಇದೆ. ನನ್ನ ಸಿನಿಮಾ ಕರಿಯರ್‌ನಲ್ಲಿ ಇಲ್ಲಿಯವರೆಗೂ ನಾನು ಮಾಡದ ವಿಶೇಷ ಪಾತ್ರವಿದು. ಇಂತಹ ಅವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ’ ಎಂದರು.

ಅದೇ ರೀತಿ ನಿರ್ದೇಶಕ ಮನೋಜ್‌ಗಿದು ಚೊಚ್ಚಲ ನಿರ್ದೇಶನದ ಸಿನಿಮಾ. ಈ ಹಿಂದೆ ಕಿರುಚಿತ್ರ ಮತ್ತು ಟೆಲಿ ಫಿಲಂಸ್‌ಗಳನ್ನು ನಿರ್ದೇಶನ ಮಾಡಿದ ಅನುಭವದ ಆಧಾರದ ಮೇಲೆಯೇ ಪೂರ್ಣ ಪ್ರಮಾಣದ ಆನ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.

‘ಲಾಕ್‌ಡೌನ್ ಸಮಯದಲ್ಲಿ ಹೊಳೆದ ಕಥೆ ಇದು. ಸದ್ಯ ಇಡೀ ಭಾರತದಲ್ಲಿ ಲೇಡಿ ಸೂಪರ್ ಹೀರೋ ಪರಿಕಲ್ಪನೆಯಲ್ಲಿ ಯಾವುದೇ ಸಿನಿಮಾ ಬಂದಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಕಥೆ ಸಿದ್ಧಪಡಿಸಿಕೊಂಡು, ಆರಂಭಿಸಿದ್ದೆ. ಇನ್ನೆರಡು ದಿನದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದೆ. ಚಿತ್ರದ ಕೊನೆಯ 20 ನಿಮಿಷಗಳು ನಿಮ್ಮನ್ನು ್ಯಾಂಟಸಿ ಲೋಕಕ್ಕೆ ಕರೆದೊಯ್ಯುವುದು ಪಕ್ಕಾ. ಹಾರರ್ ಶೈಲಿಯ ಅಂಶಗಳೂ ಈ ಸಿನಿಮಾದಲ್ಲಿವೆ. ತಾಂತ್ರಿಕವಾಗಿ ಇಡೀ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾ ಮುಂದಿನ ದಿನಗಳಲ್ಲಿ ಚಾಪ್ಟರ್‌ಗಳಾಗಿಯೂ ಸಿದ್ಧವಾಗಲಿದೆ’ ಎಂದು ಮಾಹಿತಿ ನೀಡಿದರು ಮನೋಜ್.

ಇನ್ನು ಈ ಸಿನಿಮಾದಲ್ಲಿ ಅದಿತಿ ಜತೆಗೆ ನಾಲ್ಕು ಪ್ರಮುಖ ಪಾತ್ರಗಳು ಚಿತ್ರದಲ್ಲಿವೆ. ಸಮರ್ಥ, ವಿಕಾಸ್ ಉತ್ತಯ್ಯ, ವರುಣ್ ಅಮರಾವತಿ ಮತ್ತು ಕಾರ್ತಿಕ್ ನಾಗರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಕಥೆಯೇ ವಿಶೇಷವಾಗಿರುವುದಿರಿಂದ ನಿರ್ದೇಶಕರು ನೀಡಿದ ಪಾತ್ರವೂ ಅಷ್ಟೇ ವಿಶೇಷವಾಗಿದೆ ಎಂದು ಅನಿಸಿಕೆ ಹಂಚಿಕೊಂಡರು. ಚೂರಿಕಟ್ಟೆ ಸಿನಿಮಾದಲ್ಲಿ ನಟಿಸಿದ್ದ ಪ್ರೇರಣಾ, ಆನ ಚಿತ್ರದಲ್ಲಿಯೂ ನಟಿಸಿದ್ದಾರೆ.

ಇನ್ನು ತಾಂತ್ರಿಕ ವರ್ಗ ಮತ್ತು ನಿರ್ದೇಶನದ ತಂಡವೇ ಚಿತ್ರದ ಪ್ರಮುಖ ಆಸ್ತಿ ಎಂದೇ ತಾಂತ್ರಿಕ ವರ್ಗವನ್ನು ಪರಿಚಯ ಮಾಡಿಕೊಟ್ಟರು ನಿರ್ದೇಶಕ ಮನೋಜ್. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ, ಸಂಕಲನಕಾರ ವಿಜೇತ ಚಂದ್ರ ತಾಂತ್ರಿಕ ವರ್ಗದ ಹೊಣೆ ಹೊತ್ತಿದ್ದಾರೆ. ಇನ್ನುಳಿದಂತೆ ಶಿವಮಂಜು ತಂಡದ ಬೆನ್ನುಲುಬಾಗಿ ಕೆಲಸ ಮಾಡಿದ್ದಾರೆ. ಸದ್ಯ ಶೀರ್ಷಿಕೆ ಅನಾವರಣ ಮತ್ತು ಶೀರ್ಷಿಕೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಚಾಲನೆ ನೀಡಿದೆ. ಚಿತ್ರಮಂದಿರಗಳು ಮೊದಲಿನಂತೆ ಯಥಾಸ್ಥಿತಿಗೆ ಮರಳಿದ ಬಳಿಕವಷ್ಟೇ ಬಿಡುಗಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆಯಂತೆ ತಂಡ.

Copyright@2018 Chitralahari | All Rights Reserved. Photo Journalist K.S. Mokshendra,