ನಮ್ಮ ಫ್ಲಿಕ್ಸ್ನಲ್ಲಿ ಮತ್ತೋಂದು ಕನ್ನಡ ಚಿತ್ರ
ಜಿ.ಎಸ್.ಕಲಿಗೌಡ ನಿರ್ದೇಶನ, ನಿರ್ಮಾಣದ ಜೊತೆಗೆ ಸಾಹಿತ್ಯ ರಚಸಿರುವ ‘ತನಿಖೆ’ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಕರೋನಾ ಭಯದಿಂದ ಜನ ಇನ್ನೂ ಥಿಯೇಟರ್ ಕಡೆ ಬರುತ್ತಿಲ್ಲ, ಹಾಗಾಗಿ ಜನರ ಮನೆಗೇ ಸಿನಿಮಾ ತಲುಪಿಸುವ ಪ್ರಯತ್ನವಾಗಿ, ನಮ್ಮ ಚಿತ್ರವನ್ನು ಇದೇ ತಿಂಗಳ ೨೦ರಂದು ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿzವೆ. ಬೆಂಗಳೂರು ಸಮೀಪದ ಕನಕಪುರದಲ್ಲಿ ಬಹಳ ವರ್ಷಗಳ ಹಿಂದೆ ನಡೆದಂಥ ಸತ್ಯ ಘಟನೆಯೊಂದರ ಚಿಕ್ಕ ಎಳೆ ಇಟ್ಟುಕೊಂಡು ತನಿಖೆ ಚಿತ್ರಕ್ಕೆ ಕಥಾಹಂದರ ಹೆಣೆಯಲಾಗಿದೆ.
ಹಳ್ಳಿಯೊಂದರ ಆರು ಜನ ಸ್ನೇಹಿತರು ಹಾಗೂ ಒಬ್ಬ ಯುವತಿಯ ನಡುವೆ ನಡೆಯುವ ಕಥೆಯಿದು. ಅವರಲ್ಲೊಬ್ಬ ಸುಂದರ ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಆ ಯುವತಿ, ಉಳಿದ ಐವರಲ್ಲಿ ಒಬ್ಬನನ್ನು ಪ್ರೀತಿಸುತ್ತಿರುತ್ತಾಳೆ. ಪ್ರೀತಿಯ ವಿಚಾರಕ್ಕೆ ಸ್ನೇಹಿತರಲ್ಲೇ ಮನಸ್ತಾಪ ಉಂಟಾಗುತ್ತದೆ. ಅದೇ ಸಮಯಕ್ಕೆ ಆ ಸ್ನೇಹಿತರಲ್ಲಿ ಒಬ್ಬನ ಕೊಲೆ ನಡೆದುಹೋಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಊರನ್ನೇ ಬಿಡುವಂತಾಗುತ್ತದೆ. ಕೊಲೆಗಾರನ ಪಟ್ಟ ಹೊತ್ತು ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಕೇಸನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸ್ ಅಕಾರಿಯೊಬ್ಬ ಆತನ ಮನವೊಲಿಸಿ ವಾಪಸ್ ನಾಡಿಗೆ ಕರೆತರುತ್ತಾರೆ. ಕೇಸಿನ ಸೂಕ್ಷ್ಮತೆ ಅರಿತು ನಿಜವಾದ ಕೊಲೆಗಾರ ಯಾರು ಎಂದು ಕೂಲಂಕುಶವಾಗಿ ತನಿಖೆ ನಡೆಸಿದಾಗ ರಿಯಲ್ ಕೊಲೆಗಾರನ ಪತ್ತೆಯಾಗುತ್ತದೆ. ಆರಂ‘ದಿಂದ ಪ್ರೇಕ್ಷಕರ ಮನದಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಉತ್ತರ ಸಿಗುತ್ತದೆ, ನಮ್ಮ ಚಿತ್ರದಲ್ಲಿನ ಎಣ್ಣೆ ಹೊಡಿಯೋದ, ಹೆಂಡ್ತಿ ಬಿಡೋದ ಎಂಬ ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿದೆ. ಎಂದು ನಿರ್ದೇಶಕರು ಹೇಳಿದರು.
ಆರ್.ಡಿ. ಅನಿಲ್ ನಾಯಕ ಮತ್ತು ಪಾಲುದಾರರು. ನಾಯಕಿಯಗಿ ಚಂದನ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂತೋಷ್ ವಿಜಯಕುಮಾರ್, ಮಚ್ ಮುನಿರಾಜು, ಗುಲ್‌ಷನ್, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈಸೂರು, ಪಾಂಡವಪುರ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕ್ರಿಸ್ಟೋಫರ್ ಲೀ ಅವರ ಸಂಗೀತದ ನಾಲ್ಕು ಹಾಡುಗಳಿಗೆ ಸಂತೋಷ್ ವೆಂಕಿ, ಚಿಂತನ್ ವಿಕಾಸ್, ನವೀನ್ ಸಜ್ಜು, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ಶ್ಯಾಮ್ ಸಿಂಧನೂರು ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಮಚ್ಚು ಮುನಿರಾಜು, ಸಮೀವುಲ್ಲಾ, ಹರ್ಷಿತ ಚೆನ್ನು ಈ ಚಿತ್ರದ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.