ಶಿವಪ್ಪ @ ೧೨೩
ಮೇಲಿನ ವಾಕ್ಯ ಚಿತ್ರದ ಶೀರ್ಷಿಕೆಯಲ್ಲ. ಶಿವರಾಜ್‌ಕುಮಾರ್ ಅವರ ೧೨೩ನೇ ಚಿತ್ರದ ಹೆಸರು ‘ಶಿವಪ್ಪ’. ಅಡಿಬರಹದಲ್ಲಿ ‘ಕಾಯೋ ತಂದೆ’ ಎಂದು ಹೇಳಿಕೊಂಡಿದೆ. ಕೊರೊನಾ ನಂತರ ಬಣ್ಣ ಹಚ್ಚುತ್ತಿರುವ ಮೊದಲ ಸಿನಿಮಾದ ಮಹೂರ್ತವು ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಸಮಾಜದಲ್ಲಿ ಪ್ರತಿದಿನ ನೂರಾರು ತಪ್ಪುಗಳಾಗುತ್ತಾ ಇರುತ್ತೆ. ಆದರೆ ಅದನ್ನು ಮಟ್ಟಹಾಕಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೆ. ನಾಯಕ ನೋಡೋಕೆ ತುಂಬಾ ಮುಗ್ದ. ವ್ಯವಸ್ಥೆ ಸರಿ ಇಲ್ಲ ಎಂದಾಗ ಆತ ಮೂರನೇ ಕಣ್ಣು ಬಿಡಬೇಕಾಗುತ್ತದೆ. ಆತನ ಪ್ರಕಾರ ತಪ್ಪು ಮಾಡೋಕೆ ಹೋಗೋದೇ ದೊಡ್ಡ ತಪ್ಪು. ಪ್ರತಿ ಪಾತ್ರಕ್ಕೂ ಅದರದೇ ಆದ ತೂಕವಿದೆ. ಕಾಮಿಡಿ, ಎಮೋಷನ್ ಜೊತೆಗೆ ನವಿರಾದ ರೋಮ್ಯಾನ್ಸ್ ಇರಲಿದೆ. ಮೂರು ವಿಭಿನ್ನ ಶೇಡ್‌ಗಳಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.
ಗೋಲಿಸೋಡ ಮುಂತಾದ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ವಿಜಯ್‌ಮಿಲ್ಟನ್ ನಿರ್ದೇಶನ ಜೊತೆಗೆ ಛಾಯಾಗ್ರಹಣದ ಜವಬ್ದಾರಿಯನ್ನು ಹೊತ್ತುಕೊಂಡಿರುವ ಪ್ರಥಮ ಕನ್ನಡ ಸಿನಿಮಾ. ಕೃಷ್ಣ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣಸಾರ್ಥಕ್ ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿ ಇನ್ನು ಆಯ್ಕೆಯಾಗಬೇಕಿದೆ. ತಾರಗಣದಲ್ಲಿ ಶಶಿಕುಮಾರ್, ಉಮಾಶ್ರೀ, ಡಾಲಿಧನಂಜಯ್, ಪೃಥ್ವಿಅಂಬರ್ ಮುಂತಾದವರ ನಟನೆ ಇದೆ. ರಸ್ತುಂ ನಂತರ ಶಿವಣ್ಣ ಚಿತ್ರಕ್ಕೆ ಅನೂಪ್‌ಸೀಳನ್ ಸಂಗೀತ, ಮಾತುಗಳಿಗೆ ಗುರುಕಶ್ಯಪ್ ಪದಗಳನ್ನು ಪೋಣಿಸುತ್ತಿದ್ದಾರೆ. ಬೆಂಗಳೂರು, ಗೋಕರ್ಣ, ಕರಾವಳಿ ಭಾಗದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಿಟಿ, ವಿಲೇಜ್ ಮತ್ತು ಟೌನ್‌ಷಿಪ್ ಸನ್ನಿವೇಶಗಳು ಇರುವುದು ವಿಶೇಷ.