ಹೊಸಬರ ಪಾರಿವಾಳ ವಿಡಿಯೋ ಗೀತೆ
ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುವ ಮೊದಲು ಮುಖ ಮಾಡುವುದು ಕಿರುಚಿತ್ರ, ವಿಡಿಯೋ ಆಲ್ಬಂ. ಅದರಂತೆ ರಾಂಕಿರಣ್ ಇವರು ಹೆಸರಾಂತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್ ಅವರಲ್ಲಿ ಬಹುಕಾಲದಿಂದ ಸಹಾಯಕರಾಗಿ ಕೆಲಸ ಮಾಡಿದ್ದರು. ಇದರ ಅನುಭವದಿಂದ ‘ಪಾರಿವಾಳ’ ವಿಡಿಯೋ ಹಾಡಿಗೆ ಕೋರಿಯೋಗ್ರಾಫ್ ಮಾಡುವುದರ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ತೇಜಸ್ವಿನಿಶರ್ಮ ಹೆಜ್ಜೆ ಹಾಕಿದ್ದಾರೆ. ಮೊನ್ನೆಯಷ್ಟೇ ಮಾದ್ಯಮದವರಿಗೆ ಗೀತೆಯನ್ನು ತೋರಿಸಲಾಯಿತು. ಶಿಷ್ಯನಿಗೆ ಶುಭಹಾರೈಸಲು ಆಗಮಿಸಿದ್ದ ಚಿನ್ನಿಪ್ರಕಾಶ್ ಮಾತನಾಡಿ ‘ಯುವರತ್ನ’ ಸಮಯದಲ್ಲಿ ಇದನ್ನು ಕೇಳಿಸಿದ್ದ. ನಾನೇ ನೃತ್ಯ ಸಂಯೋಜನೆ ಮಾಡುವಷ್ಟು ಚೆನ್ನಾಗಿತ್ತು. ಇವನ ಆಲೋಚನೆ ಕಂಡು ಖುಷಿ ಆಯ್ತು. ನಾನು ಇದ್ದರೂ ಇಷ್ಟು ಚೆನ್ನಾಗಿ ಮಾಡಲಾಗುತ್ತಿರಲಿಲ್ಲ. ಇವ ನನ್ನವ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.
‘ಪಬ್ಲಿಕ್ ಟಾಯ್ಲೆಟ್’ ಕಿರುಚಿತ್ರ ನಿರ್ಮಾಣ ಮಾಡಿದ್ದ ಭಾನವಿ ಕ್ಯಾಪ್ಚರ್ ಸಂಸ್ಥೆಯು ಬಂಡವಾಳ ಹೂಡಿದೆ. ಮೋಹನೆ.ಬಿ.ಕೆರೆ ಸ್ಟುಡಿಯೋದಲ್ಲಿ ಹಾಕಲಾದ ಸೆಟ್‌ದಲ್ಲಿ ಅಭಿಷೇಕ್.ಜಿ.ಕಾಸರಗೂಡು ಒಂದೇ ಟೇಕ್‌ದಲ್ಲಿ ಸೆರೆ ಹಿಡಿದಿರುವುದು ವಿಶೇಷ. ಅಗಸ್ತ್ಯಸಂತೋಷ್ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ. ಎಲ್ಲಾ ಭಾಷೆಗೂ ಶಶಾಂಕ್‌ಶೇಷಗಿರಿ ಗೀತೆಗೆ ಧ್ವನಿಯಾಗಿದ್ದಾರೆ. ಭಗ್ನ ಪ್ರೇಮಿಯೊಬ್ಬನ ಮನದ ವಿರಹ ವೇದನೆಯನ್ನು ಹೇಳುವ ಪ್ರಯತ್ನ ಮಾಡಿದೆ. ಮುಂದಿನ ದಿನಗಳಲ್ಲಿ ಒಂದೊಂದು ಭಾಷೆಯ ಹಾಡನ್ನು ಬಿಡುಗಡೆ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.