*ನೋಡು ಶಿವ ಆಲ್ಬಂ ಹಾಡು ಬಂದೇ ಬಿಡ್ತು ಶಿವ....*
*-ಅದ್ದೂರಿ ಕಾರ್ಯಕ್ರಮದ ಮೂಲಕ ಗೀತೆ ಬಿಡುಗಡೆ*
*-ಅತಿಥಿಗಳಾಗಿ ಆಗಮಿಸಿ ಹಾರೈಸಿದ ನಿರ್ದೇಶಕ ಭಗವಾನ್, ಮತ್ತು ರಾಕ್ಲೈನ್ ವೆಂಕಟೇಶ್*
ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿವೆ. ಅದೇ ರೀತಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಮೇಕಿಂಗ್ ಮೂಲಕವೇ ಈ ಹಾಡು ರಿಚ್ ಆಗಿ ಮೂಡಿಬಂದಿದೆ. ಸುಮಿತ್ ಎಂ.ಕೆ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಎಂ.ಕೆ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲುರಿ ಅವರು ಈ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದು, ಗುರುವಾರ ಹಾಡಿನ ಬಿಡುಗಡೆ ಸಮಾರಂಭ ನಡೆದಿದ್ದು, ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆ ಆಗಿದೆ.
ಚಿತ್ರಕ್ಕೆ ಸಂಗೀತ ನೀಡಿ, ಧ್ವನಿ ನೀಡಿರುವ ಚಂದನ ಶೆಟ್ಟಿ ಮಾತನಾಡಿ, ಲಾಕ್ಡೌನ್ ಶುರುವಾಗಿ ಒಂದು ವಾರ ಆಗಿತ್ತು. ಸುಮಿತ್ ಅವರು ಕರೆ ಮಾಡಿ, ಲಿರಿಕ್ಸ್ ಕಳುಹಿಸಿದ್ದರು. ಲಿರಿಕ್ಸ್ ನೋಡಿ ಚನ್ನಾಗಿ ಅನಿಸಿತು. ಟ್ಯೂನ್ ಮಾಡುವಂತೆಯೂ ಹೇಳಿದರು. ಲಾಕ್ಡೌನ್ ಪೀರಿಯಡ್ನಲ್ಲಿಯೇ ಮಾಡಿದ ಹಾಡು ಇದು. ಚೆನ್ನಾಗಿ ಬಂದಿದೆ. ಅಷ್ಟೇ ಚೆನ್ನಾಗಿ ಆ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿದೆ ಎಂದರು.
ಇನ್ನು ಹಾಡಿಗೆ ಸಾಹಿತ್ಯ ಬರೆದು, ಆಲ್ಬಂನಲ್ಲಿ ಕಾಣಿಸಿಕೊಂಡಿರುವ ಸುಮಿತ್ ಸಹ ಅಷ್ಟೇ ಖುಷಿಯಲ್ಲಿಯೇ ಮಾತನಾಡಿದ್ದಾರೆ. ಜೀವನದಲ್ಲಿ ಏನಾದರೊಂದು ಪ್ರಯತ್ನ ಮಾಡಬೇಕು.. ಹಲವು ಸೋಲಿನ ಬಳಿಕ.. ಒಂದು ಗೆಲುವು ಇದ್ದೇ ಇರುತ್ತದೆ. ಒಟ್ಟಿನಲ್ಲಿ ಏನೋ ಒಂದು ಮಾಡಬೇಕು. ಆ ಪ್ರಯತ್ನವೇ ಇದು. ಮೊದಲಿಗೆ ಸಣ್ಣ ಬಜೆಟ್ನಲ್ಲಿ ಅನಿಮೇಷನ್ ವಿಡಿಯೋ ಮಾಡಬೇಕು ಎಂದು ನಿರ್ಧಾರವಾಯ್ತು. ಆಗ ಶ್ಯಾಮ್ ಅವರು ಬಂದರು, ಒಬ್ಬರಾದ ಮೇಲೋಬ್ಬರು ಸೇರುತ್ತಾ ಹೋದರು. ಮೋನಿಕಾ ಕಲ್ಲೂರಿ ಅವರು ಸೇರಿಕೊಂಡ ನಂತರ ಹಾಡಿನ ರೂಪವೇ ಬದಲಾಯ್ತು. ಇದೀಗ ಹಾಡು ಬಿಡುಗಡೆ ಆಗಿದೆ. ನೋಡಿ ಹರಸಿ ಎಂದರು.
ಹಾಡಿಗೆ ಮುಖ್ಯವಾಗಿ ಬಂಡವಾಳ ಹೂಡಿ ನಿರ್ಮಾಣ ಮಾಡಿರುವ ಮೋನಿಕಾ ಕಲ್ಲೂರಿ ಮಾತನಾಡಿ, ಸಿನಿಮಾ ರಂಗದಲ್ಲಿ ಏನಾದರೂ ಮಾಡಬೇಕು ಅಂದುಕೊಂಡಿದ್ದೆ. ಅದು ಇಷ್ಟು ಬೇಗ ಈಡೇರಲಿದೆ ಅಂದುಕೊಂಡಿರಲಿಲ್ಲ. ಕಳೆದ ವರ್ಷವೇ ಸುಮಿತ್ ಅವರನ್ನು ಭೇಟಿಯಾಗಿದ್ದೆ. ಅವರು ಬರೆದ ಲಿರಿಕ್ಸ್ ನೋಡಿಯೇ ಫಿದಾ ಆಗಿದ್ದೆ. ಹಾಡಿಗೆ ಯಾರು ಧ್ವನಿ ಎನ್ನುತ್ತಿದ್ದಾಗ ಚಂದನ್ ಶೆಟ್ಟಿ ಅವರೇ ಬೇಕು ಎಂದು ಫಿಕ್ಸ್ ಮಾಡಿದೆವು. ಅವರೂ ಸಾಥ್ ನೀಡಿದರು. ಅಷ್ಟೇ ಚೆನ್ನಾಗಿ ಹಾಡು ಮೂಡಿಬಂದಿದೆ. ಸ್ಮಾಲ್ ಪ್ರಾಜೆಕ್ಟ್ ಅಂದುಕೊಂಡಿದ್ವಿ. ಅದೀಗ ದೊಡ್ಡ ಬಜೆಟ್ ನಲ್ಲಿಯೇ ಸಿದ್ಧವಾಗಿದೆ ಎಂದರು.
ಹೊಸಬರ ಈ ಸಾಹಸಕ್ಕೆ ಬೆನ್ನು ತಟ್ಟಲು ಹಿರಿಯ ನಿರ್ದೇಶಕ ಭಗವಾನ್ ಆಗಮಿಸಿದ್ದರು. ಯಾವ ಚಿತ್ರಕ್ಕೂ ಕಮ್ಮಿ ಇಲ್ಲದ ರೀತಿಯಲ್ಲಿ ಹಾಡನ್ನು ನೋಡಿದ ತೃಪ್ತಿ ಸಿಕ್ಕಿತು. ಈ ರೀತಿಯ ಹಾಡನ್ನು ಚಿತ್ರಿಸಲಿಲ್ಲ ಎಂಬ ಕೊರಗಿದೆ ನನಗೂ ಇದೀಗ ಕಾಡುತ್ತಿದೆ. ಇಡೀ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ಹೈ ಬಜೆಟ್ನ ಸಿನಿಮಾದ ಟೀಸರ್, ಹಾಡು ಬಿಡುಗಡೆ ಮಾಡಿದ ಅನುಭವ ಆಗುತ್ತಿದೆ ಎಂದರು.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಕಾಯುವುದಕ್ಕೆ ತಾಳ್ಮೆ ಬೇಕು ಆಗ ಒಬ್ಬ ನಿರ್ಮಾಪಕ ಆಗಲು ಸಾಧ್ಯ. ಅದನ್ನು ಮೋನಿಕಾ ಕಲ್ಲೂರಿ ಮಾಡಿದ್ದಾರೆ. ಏನಾದರೂ ಸಾಧಿಸಬೇಕು, ಚಿತ್ರರಂಗಕ್ಕೆ ಏನಾದರೂ ಕಾಣಿಕೆ ನೀಡಬೇಕೆಂಬ ತವಕ ಅವರಲ್ಲಿದೆ. ಅವರ ಈ ಪ್ರಯತ್ನ ಯಶಸ್ವಿಯಾಗಲಿ. ಮುಂದೆ ಸಿನಿಮಾಗಳನ್ನೂ ನಿರ್ಮಾಣ ಮಾಡಲಿ ಎಂದರು. ಕೊನೆಗೆ ಎಎಂಸಿ ಗ್ರೂಪ್ನ ಚೇರ್ಮನ್ ಮತ್ತು ಮೋನಿಕಾ ಕಲ್ಲೂರಿ ಅವರ ತಂದೆ ಪರಮಹಂಸ ವೇದಿಕೆ ಮೇಲಿದ್ದವರಿಗೆ ಅಭಿನಂದಿಸಿದರು, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸೇರಿ ಹಲವರು ವೇದಿಕೆ ಮೇಲಿದ್ದರು.
ಸುಮಾರು 60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಎಂ.ಕೆ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲುರಿ ಅವರು ಈ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದು, ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಹೆಬ್ಬುಲಿ ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣ ಈ ಆಲ್ಬಂ ಸಾಂಗ್ ನ ಅಂದ ಮತ್ತಷ್ಟು ಹೆಚ್ಚಿಸಿದೆ. ಮೂರುವರೆ ನಿಮಿಷಗಳ ಅವಧಿಯ ಈ ಆಲ್ಬಂ ಸಾಂಗ್ ಇದೇ ತಿಂಗಳಲ್ಲಿ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.