*ಎರಡು ಘಟನೆಗಳ ಸುತ್ತ ನಡೆವ ತನಿಖೆಯ ಕಥೆ ಮುಂದುವರೆದ ಅಧ್ಯಾಯ*
ಕಣಜ ಎಂಟರ್‌ಪ್ರೈಸಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ, ಯುವ ನಿರ್ದೇಶಕ ಬಾಲು
ಚಂದ್ರಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ
ಚಿತ್ರ ಮುಂದುವರಿದ ಅಧ್ಯಾಯ. ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯ
ಬಹಳ ದಿನಗಳ ನಂತರ ಪೋಲೀಸ್ ಅಧಿಕಾರಿಯಾಗಿ ತೆರೆಮೇಲೆ
ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ನಾಯಕಿ ಪಾತ್ರವಿಲ್ಲ.
ನಿರ್ದೇಶಕ ಬಾಲು ಚಂದ್ರಶೇಖರ್ ಅವರ ಒಂದಷ್ಟು ಜನ ಆತ್ಮೀಯ
ಸ್ನೇಹಿತರ ಬಳಗವೇ ಸೇರಿ ಕಣಜ ಎಂಟರ್ ಪ್ರೈಸಸ್ ಮೂಲಕ ಈ
ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೇ ತಿಂಗಳ ೧೮ರಂದು
ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿರುವ ಮುಂದುವರೆದ ಅಧ್ಯಾಯ
ಒಂದು ಆ್ಯಕ್ಷನ್, ಥ್ರಿಲ್ಲರ್ ಜಾನರ್ ಸಿನಿಮಾ. ಸಮಾಜದಲ್ಲಿ ಭೂಗತ
ಚಟುವಟಿಕೆ, ರೌಡಿಸಂನಂಥ ಯಾವುದೇ ಚಟುವಟಿಕೆಗಳಿಗೆ
ಕೊನೆಯೆಂಬುದೇ ಇಲ್ಲ, ಆದರೆ ಜನ ಬದಲಾಗಬೇಕಿದೆ, ನಾವೆಲ್ಲ
ಬದಲಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ತರಲು ಸಾಧ್ಯ ಎಂಬ
ವಿಷಯವನ್ನು ನಿರ್ದೇಶಕ ಬಾಲು ಚಂದ್ರಶೇಖರ ಅವರು ಈ ಚಿತ್ರದ
ಮೂಲಕ ಹೇಳಹೊರಟಿದ್ದಾರೆ. ನಾವು ಹೇಗಿರುತ್ತವೋ ಹಾಗೇ
ಸಮಾಜವೂ ಇರುತ್ತದೆ ಎನ್ನುವುದೂ ಈ ಚಿತ್ರದಲ್ಲಿ ಕಂಡುಬರುವ
ಮತ್ತೊಂದು ಪ್ರಮುಖ ಅಂಶವಾಗಿದೆ.
ಚಿತ್ರದಲ್ಲಿ ಆ್ಯಕ್ಷನ್, ಕಾಮಿಡಿ,
ಸೆಂಟಿಮೆಂಟ ಜೊತೆಗೆೆ ಮನರಂಜನೆಗೆ ಬೇಕಾದಂಥ
ಎಲ್ಲಾ ರೀತಿಯ ಅಂಶಗಳನ್ನೂ ಹಿತಮಿತವಾಗಿ ನಿರ್ದೇಶಕರು
ತೆರೆಮೇಲೆ ತಂದಿದ್ದಾರೆ. ಈಗಾಗಲೇ ಈ ಚಿತ್ರದ ಸೆನ್ಸಾರ್ ಕೂಡ
ಮುಗಿದಿದೆ. ಈವರೆಗೆ ನಾಯಕನನ್ನು ಬಿಟ್ಟು ಯಾವುದೇ
ಪಾತ್ರಗಳ ಬಗ್ಗೆ ಹೇಳಿಕೊಂಡಿದ್ದಿಲ್ಲ, ಮೊನ್ನೆ ಚಿತ್ರದ ಉಳಿದ
ಪಾತ್ರಗಳನ್ನು ಪರಿಚಯಿಸಲೆಂದೇ ಇಡೀ ಚಿತ್ರತಂಡ
ಮಾಧ್ಯಮಗಳ ಮುಂದೆ ಬಂದಿತ್ತು. ಎಂಎಲ್‌ಏ ಪಾತ್ರ ಮಾಡಿರುವ
ವಿನಯ್ ಕೃಷ್ಣಸ್ವಾಮಿ, ಪೋಲೀಸ್ ಪಾತ್ರ ಮಾಡಿರುವ ವಿನೋದ್,
ಪತ್ರಕರ್ತೆಯ ಪಾತ್ರ ಮಾಡಿರುವ ಆಶಿಕಾ ಸೋಮಶೇಖರ್, ಡಾಕ್ಟರ್
ಪಾತ್ರಧಾರಿ ಚಂದನಾಗೌಡ, ರೆಸ್ಟೋರೆಂಟ್ ಓನರ್ ಆಗಿರುವ ಸಂದೀಪ್‌ಕುಮಾರ್, ಕಲಾವಿದನಾಗಿರುವ ಅಜಯ್‌ರಾಜ್ ಇನ್ನಿತರರು
ಸಂಕ್ಷಿಪ್ತವಾಗಿ ತಂತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ನಟ
ಆದಿತ್ಯ ಮಾತನಾಡುತ್ತ ಈ ಚಿತ್ರ ನನ್ನ ಜೀವನದ ಇನ್ನೊಂದು
ಅಧ್ಯಾಯ. ಶಿವರಾತ್ರಿಯ ದಿನ ಒಬ್ಬರು ಕಾಣೆಯಾಗ್ತಾರೆ, ಒಬ್ಬರ
ಮರ್ಡರ್ ಆಗ್ತಾರೆ, ಆ ಘಟನೆ ಹೇಗಾಗುತ್ತದೆ, ಎನ್ನುವುದೇ ಈ ಚಿತ್ರ.
ಕ್ಲೈಮ್ಯಾಕ್ಸ್ ಯಾರಿಗೂ ಗೊತ್ತಿರಲ್ಲ, ಯಾರೂ ಊಹಿಸದಂಥ ಕ್ಲೆಮ್ಯಾಕ್ಸ್ ಈ ಚಿತ್ರದಲ್ಲಿದೆ. ಬರೀ ಅಂಡರ್ ವರ್ಲ್ಡ್ ಕತೆಗಳೇ
ಬರುತ್ತಿದ್ದಾಗ ಬಾಲು ಅವರು ತಂದ ಈ ಕಥೆ ಹೇಳಿದಾಗಲೇ ತುಂಬಾ
ಇಷ್ಟವಾಯಿತು ಎಂದರು.
ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋ, ಯೂನಿವರ್ಸಿಟಿ ಕ್ಯಾಂಪಸ್,
ರಾಮನಗರ, ದೇವರಾಯನ ದುರ್ಗ, ಮಂಡ್ಯ. ಮಳವಳ್ಳಿ, ತುಮಕೂರು ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಜಾನಿ - ನಿತಿನ್ ಅವರ ಸಂಗೀತ ನಿರ್ದೇಶನವಿದೆ. ಛಾಯಾಗ್ರಾಹಕ ದಿಲೀಪ್ ಚಕ್ರವರ್ತಿ ಅವರು ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಇನ್ನು ಈ
ಚಿತ್ರದ ಸಾಹಸ ದೃಷ್ಯಗಳಿಗೆ ವಿನೋದ್ ಅವರ ಸಾಹಸ ನಿರ್ದೇಶನವಿದೆ. ಜೊತೆಗೆ ಶ್ರೀಕಾಂತ್ ಅವರ ಸಂಕಲನವೂ ಈ ಚಿತ್ರಕ್ಕಿದೆ. ಮುಖ್ಯಮಂತ್ರಿ ಚಂದ್ರು, ಜೈಜಗದೀಶ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
--