*ಟೆಂಪರ್ ಲಿರಿಕಲ್ ಹಾಡು ಬಿಡುಗಡೆ*
ಕನ್ನಡ ಚಿತ್ರರಂಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸಾಹಿತಿಯಾಗಿ, ಸಂಗೀತ ಸಂಯೋಜಕನಾಗಿ ಕಾರ್ಯನಿರ್ವಹಿಸಿರುವ ಮಂಜುಕವಿ ಟೆಂಪರ್ ಚಿತ್ರದ ಮೂಲಕ ನಿರ್ದೇಶಕನಾಗಿರುವುದು ಎಲ್ಲರಿಗೂ ಗೊತ್ತಿರೋ ವಿಷಯ, ಕನ್ನಡ ಹಾಗೂ ತೆಲುಗು ಸೇರಿ 2 ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್‍ಸ್ಟೋರಿ ಹೊಂದಿರುವ ಈ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಫಿಲಂ ಚೇಂಬರ್ ಉಪಾಧ್ಯಕ್ಷ ಉಮೇಶ್‍ಬಣಕಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಚಿತ್ರದ ಮೂಲಕ ಆರ್ಯನ್‍ಸೂರ್ಯ ಹಾಗೂ ಕಾಶಿಮಾ ಮೊದಲಬಾರಿಗೆ ನಾಯಕ-ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಪತ್ರಕರ್ತ ಧನು ಯಲಗಚ್ ನಾಯಕನ ಸ್ನೇಹಿತನಾಗಿಯೂ, ಮಜಾಟಾಕೀಸ್ ಪವನ್‍ಕುಮಾರ್ ಒಬ್ಬ ಮೂಗ ಹಾಗೂ ನಾಯಕನ ಮತ್ತೊಬ್ಬ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಬಾಲಾಜಿ ಎಂಟರ‍್ಪ್ರೈಸಸ್ ಮೂಲಕ ಬಿ.ಮೋಹನಬಾಬು ಹಾಗೂ ವಿ.ವಿನೋದ್‍ಕುಮಾರ್ ಅವರುಗಳು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ನಿರ್ದೇಶಕ ಮಂಜುಕವಿ ಮಾತನಾಡಿ ನಾಯಕನಿಗೆ ಚಿಕ್ಕವನಾದಾಗಿನಿಂದ ಯಾವುದೇ ವಿಷಯಕ್ಕಾದರೂ ಶೀಘ್ರವೇ ಕೋಪಗೊಳ್ಳುವಂತಹ ಗುಣವಿರುತ್ತದೆ. ಕಾರ್ ಗ್ಯಾರೇಜ್ ಇಟ್ಟುಕೊಂಡಿರುವ ಆತನಿಗೆ ತನ್ನ ಗೆಳೆಯರೇ ಪ್ರಪಂಚ, ಆ ಸಮಯದಲ್ಲಿ ದೊಡ್ಡ ಮನೆತನದ ಯುವತಿಯ ಮೇಲೆ ನಾಯಕನಿಗೆ ಪ್ರೀತಿ ಚಿಗುರುತ್ತದೆ, ಈ ಸಮಯದಲ್ಲಿ ತನ್ನ ಕುಟುಂಬ ಹಾಗೂ ಪ್ರೇಯಸಿಯನು ಆತ ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ. ಮಜಾಟಾಕೀಸ್ ಖ್ಯಾತಿಯ ಪವನ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಮಡಿಕೇರಿ, ಮಂಡ್ಯ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಇದೇ ತಿಂಗಳು ಚಿತ್ರದ ಟೀಸರ್ ಕೂಡ ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾಯಕಿ ಕಾಶಿಮಾ ಮಾತನಾಡಿ ಚಿತ್ರದಲ್ಲಿ ನಾನು ಊರಗೌಡನ ಮಗಳು. ಗೀತಾ ಎನ್ನುವ ಮೆಡಿಕಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ತಂದೆ ತಾಯಿಯ ಮುದ್ದಿನ ಮಗಳಾದ ನಾನು ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ನಾಯಕನನ್ನು ಲವ್‍ಮಾಡಿದ ನಂತರ ಏನಾಗುತ್ತೆ, ನನ್ನ ಲೈಫ್‍ನಲ್ಲಿ ನಾಯಕನ ಎಂಟ್ರಿ ಆದಾಗ ಏನೆಲ್ಲ ಬದಲಾವಣೆ ಆಗುತ್ತದೆ ಎನ್ನುವುದೇ ಕಥೆ ಎಂದು ಹೇಳಿದರು. ನಂತರ ಉಮೇಶ್ ಬಣಕಾರ್ ಮಾತನಾಡುತ್ತ ನಾನು ಹೊಸಬರು ಹಾಗೂ ಹಳಬರನ್ನೂ ನೋಡಿದ್ದೇನೆ. ಈಗಿನ ಸಂದರ್ಭದಲ್ಲಿ ಸನಿಮಾ ಪ್ರೊಡ್ಯೂಸ್ ಮಾಡುವುದು ತುಂಬಾ ಕಷ್ಟದ ಕೆಲಸ, ಕೆಲ ಹಂಚಿಕೆದಾರರಿಂದ ನಿರ್ಮಾಪಕರು ತುಂಬಾ ಕಳೆದುಕೊಳ್ತಿದಾರೆ, ಹಾಗಾಗಿ ಬುದ್ದಿವಂತಿಕೆಯಿಂದ ಹೆಜ್ಜೆ ಇಡಿ ಎಂದು ಹೊಸಬರಿಗೆ ಕಿವಿಮಾತು ಹೇಳಿದರು.
ಖಳನಟ ಬಲ ರಾಜವಾಡಿ ಮಾತನಾಡಿ ಹಳ್ಳಿಯ ಪ್ರಮುಖ. ಇಬ್ಬರು ತಮ್ಮಂದಿರೂ ದುಷ್ಟರು. ಆರಂಭದಲ್ಲಿ ಸಾಧ್ವಿಕನಾಗಿ ತೋರಿಸಿಕೊಂಡರೂ ಕೊನೆಯಲ್ಲಿ ತಮ್ಮಂದಿರು ಕೆಟ್ಟವರಾಗಲು ನಾನೇ ಕಾರಣ ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ಈ ಚಿತ್ರದಲ್ಲಿ 5 ಹಾಡುಗಳಿದ್ದು ಆರ್.ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ. ಯತಿರಾಜ್ ಹಾಗೂ ದಿನೇಶ್ ಊರಗೌಡನ ಇಬ್ಬರು ದುಷ್ಟ ಸಹೋದರರಾಗಿ ನಟಿಸುತ್ತಿದ್ದಾರೆ. ಬಿ.ಎಸ್.ಕೆಂಪರಾಜ್ ಈ ಚಿತ್ರದ ಸಂಕಲನಕಾರರು.