Devara Kanassu.Film News

Sunday, May 02, 2021

294

 

*ಪ್ರತಿಷ್ಠಿತ ಕಾನ್​​ ಫೆಸ್ಟಿವಲ್​ಗೆ ದೇವರ ಕನಸು*

*-  ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣ*

*-  ಸುರೇಶ್ ಲಕ್ಕೂರ್ ನಿರ್ದೇಶನ*

 

ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ತಯಾರಾದ ದೇವರ ಕನಸು ಸಿನಿಮಾ ಇದೀಗ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್​ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ದೇವರ ಕನಸು ಚಿತ್ರದ ಎಳೆ.

2019ರಲ್ಲಿಯೇ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಇದೀಗ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಕಾಲಿಡುತ್ತಿದೆ. ಮೊದಲ ಹೆಜ್ಜೆಯಾಗಿ ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಅವಕಾಶ ಸಿಕ್ಕಿದ್ದು, ಇನ್ನೇನು ಮೇ ಅಂತ್ಯದಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಇದರ ಜತೆಗೆ ಬೇರೆ ಬೇರೆ ಸಿನಿಮೋತ್ಸವಗಳಿಂದಲೂ ಆಹ್ವಾನ ಬರುತ್ತಿವೆ.

ಇನ್ನು ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ದೇವರ ಕನಸು ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿರುವುದು ಹೆಚ್ಚುಗಾರಿಕೆ. ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್,  ಸಂಕಲನ ಜಿಸ್ನು ಸೇನ್ ಇವರೆಲ್ಲ ಪಶ್ಚಿಮ ಬಂಗಾಳದವರು. ಅದೇ ರೀತಿ ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್ ಅವರ ಸಂಗೀತ ನೀಡಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮತ್ತೋರ್ವ ಮನೋಜ್ ಅಂಗಮಾಲಿ ಮೇಕಪ್ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದರೆ, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ.

ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್​ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಮೊದಲ ಚಿತ್ರವಾಗಿ ದೇವರ ಕನಸು ಅವರ ಬತ್ತಳಿಕೆಯಿಂದ ಹೊರಬಂದಿದ್ದು, ಮಕ್ಕಳ ಸಿನಿಮಾ ಮೂಲಕ ಆಗಮಿಸಿದ್ದಾರೆ. ಚಿಂತಾಮಣಿಯ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರದ ಚಿತ್ರೀಕರಣವಾಗಿದೆ. ಈ ಮೊದಲು ಕನ್ನಡದ ದೃಶ್ಯ ಸಿನಿಮಾದಲ್ಲಿ ಕೆಲಸ ಮಾಡಿದ್ದು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಕಲಾವಿದರ ಬಗ್ಗೆ ನೋಡುವುದಾದರೆ, ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ಪಾತ್ರವರ್ಗದಲ್ಲಿದಲ್ಲಿದ್ದಾರೆ. ಈ ಮಕ್ಕಳ ಚಿತ್ರಕ್ಕೆ ಉದ್ಯಮಿಗಳಾದ ಸಿ. ಜಯಕುಮಾರ್, ಸಿ ಶೇಖರ್ ಬಂಡವಾಳ ಹೂಡಿದ್ದಾರೆ.  ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಸಹ ನಿರ್ಮಾಪಕರಾಗಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,