ವೈರಲ್ ಆಯ್ತು ಹಿಟ್ಲರ್ ಟೀಸರ್
ಚಿತ್ರದ ತುಣುಕುಗಳು ಚೆಂದದಲ್ಲಿ ಮೂಡಿಬಂದಿದ್ದರೆ, ಹಳಬರು, ಹೊಸಬರು ಅಂತ ನೋಡದೆ ಜನರು ವೀಕ್ಷಿಸುತ್ತಾರೆ ಎಂಬುದಕ್ಕೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಹಿಟ್ಲರ್’ ಚಿತ್ರವು ಸಾಕ್ಷಿಯಾಗುತ್ತದೆ. ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದ ಹನ್ನೆರಡು ಗಂಟೆಗಳ ಒಳಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿರುವುದು ತಂಡಕ್ಕೆ ಖುಷಿ ತಂದಿದೆ. ಬಿಡುಗಡೆ ದಿನಾಂಕದ ಪೋಸ್ಟರ್ ಅನಾವರಣ ಮಾಡಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಇಡೀ ಜಗತ್ತಿಗೆ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಕೆಜಿಎಫ್’. ೨೦೦೮ರಂದು ಅಂಬಿ ಉತ್ಸವ’ದಲ್ಲಿ ಯಶ್ ಅವರು ಶ್ರೀಕೃಷ್ಣದೇವರಾಯನ ಒಂದು ಪಾತ್ರವನ್ನು ಚೆನ್ನಾಗಿ ಮಾಡಿದ್ದರು. ನಿಮಗೆ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ಹೊಗಳುವಂತೆ ಆಗುವಿರಿ ಎಂದು ಅಂದು ಹೇಳಿದ್ದೆ. ಕಿನ್ನಾಳ್‌ರಾಜ್ ಕೆಜಿಎಫ್ ದಲ್ಲಿ ಅಮ್ಮನ ಬಗ್ಗೆ ಬರೆದ ಹಾಡು ಮನ ಮುಟ್ಟುತ್ತದೆ. ಉತ್ತರ ಕರ್ನಾಟಕದ ಪ್ರತಿಭೆಗಳು ಈ ಮಟ್ಟಕ್ಕೆ ಬಂದಿರುವುದು ಸಂತಸ ತಂದಿದೆ. ಇದು ಕೂಡ ಯಶ್ ಸಿನಿಮಾದಂತೆ ಆಗಲಿ. ಒಂದು ವರ್ಷದಿಂದ ಅವರಿಗಾಗಿ ಕಾಯುತ್ತಿದ್ದೇನೆ. ಅಮ್ಮನ ದಿನದಂದು ಇವರ ಜೊತೆಗೆ ಅನನ್ಯಭಟ್, ರವಿಬಸ್ರೂರು ಸೇರಿಕೊಂಡು ಹಾಡುವ ಗೀತೆಗೆ ನಾನು ಸೇರಿಕೊಳ್ಳಬೇಕೆಂದು ಬಯಸಿದ್ದೆ. ಅದು ಆಗಲಿಲ್ಲ. ಮುಂದಿನ ವರ್ಷ ಆಗುತ್ತದೆಂಬ ನಿರೀಕ್ಷೆಯಲ್ಲಿ ಇದ್ದೇನೆ. ಒಳ್ಳೆಯದಾಗಲಿ ಎಂದರು.
ಬರವಣಿಗೆ ಇಷ್ಟದ ಕೆಲಸ. ವರ್ಷಕ್ಕೊಮ್ಮೆ ನಿರ್ದೇಶನ ಮಾಡುವ ಬಗ್ಗೆ ಯೋಚನೆ ಇದೆ. ಹಿಟ್ಲರ್‌ಗೆ ಒಂದು ಏಳೆ ಕತೆಯನ್ನು ನಿರ್ಮಾಪಕರಿಗೆ ಹೇಳಿದೆ. ಚೆನ್ನಾಗಿದೆ ನಾನೇ ಮಾಡುತ್ತೇನೆಂಬ ಭರವಸೆಯಂತೆ, ಇಲ್ಲಿಯತನಕ ತಂದು ನಿಲ್ಲಿಸಿದೆ. ಭೂಗತಲೋಕದಲ್ಲಿ ಅನಾಥ ಹುಡುಗನೊಬ್ಬ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತಿರುತ್ತಾನೆ. ಮುಂದೆ ತನ್ನ ದಾರಿ ಸರಿಯಿಲ್ಲವೆಂದು ಅರಿತು, ಅದರಿಂದ ಹೊರ ಬಂದಾಗ ಏನೇನು ಕಷ್ಟಗಳು ಎದುರಾಗುತ್ತವೆ. ಅದನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಸಾರಾಂಶವಾಗಿದೆ ಅಂತ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇನ ಮಾಡಿರುವ ಕಿನ್ನಾಳ್‌ರಾಜ್ ಮಾಹಿತಿ ನೀಡಿದರು.
ನಿರ್ದೇಶಕರೊಂದಿಗೆ ಹನ್ನೆರಡು ವರ್ಷದ ಒಡನಾಟವಿದೆ. ಅಂದೇ ನನ್ನ ಸಂಗೀತದಲ್ಲಿ ಅವರು ನಿರ್ದೇಶನ ಮಾಡಬೇಕಿತ್ತು. ಕಾಲಕೂಡಿ ಬರಲಿಲ್ಲ. ಅವರಿಗೆ ಎಲ್ಲಾ ಶೇಡಿನ ಬರವಣಿಗೆ ಗೊತ್ತಿದೆ. ಅವರುಗಳ ಶ್ರಮ ತೆರೆಯ ಮೇಲೆ ಬಂದಿದೆ. ಇನ್ನೆನಿದ್ದರೂ ಪ್ರೇಕ್ಷಕ ಮಹಾಪ್ರಭುಗಳು ನಮಗೆ ಹರಸಬೇಕೆಂದು ಸಂಗೀತ ಸಂಯೋಜಕ ರವಿಬಸ್ರೂರು ಹೇಳಿದರು.
ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಅಂತಹುದೆ ಕೆಲಸವನ್ನು ಇವರೆಲ್ಲರೂ ಮಾಡಿದ್ದಾರೆ. ಹಿಟ್ ಆಗುವ ಲಕ್ಷಣವಿದೆ ಎಂದು ಕೆಜಿಎಫ್‌ಖ್ಯಾತಿಯ ಗರುಡರಾಮ್ ಭವಿಷ್ಯ ನುಡಿದರು.
ನಿರ್ದೇಶಕರು ಹೇಳಿದ ಒನ್ ಲೈನ್ ಕೇಳಿ ಖುಷಿಯಿಂದ ನಿರ್ಮಾಣ ಹಾಗೂ ನಟಿಸಲು ಮನಸ್ಸು ಮಾಡಲಾಯಿತು ಅಂತ ಮಾತಿಗೆ ಹಾಕಿದರು ನಾಯಕ ಲೋಹಿತ್.
ಗಾರ್ಮೆಂಟ್ಸ್ ಹುಡುಗಿಯಾಗಿ ಸಸ್ಯ ನಾಯಕಿ, ಮಾಜಿ ರೌಡಿಯಾಗಿ ಬಲರಾಜವಾಡಿ, ಖಳನಾಗಿ ವರ್ಧನ್‌ತೀರ್ಥಹಳ್ಳಿ, ಸಂಗೀತ ನಿರ್ದೇಶಕ ಆಕಾಶ್‌ಪರ್ವ, ಎಸ್ಕಾರ್ಟ್ ಶಂಕರ್, ಮನಮೋಹನ್‌ರೈ, ವಿಜಯ್‌ಚೆಂಡೂರು ಎಲ್ಲರೂ ಅವಕಾಶ ಸಿಕ್ಕಬಗೆಯನ್ನು ಹಂಚಿಕೊಂಡರು. ಗಾನಶಿವ ಮೂವೀಸ್ ಮುಖಾಂತರ ಮಮತಾಲೋಹಿತ್ ಬಂಡವಾಳ ಹೂಡಿರುವ ಚಿತ್ರವು ಏಪ್ರಿಲ್ ೯ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.