*ಸುಶಾಂತ್ ಸಿಂಗ್ ಗೆ ಟ್ರಿಬ್ಯೂಟ್ ; ಅಲ್ವಿದಾ ಆಲ್ಬಂ ಹಾಡಿನ ಮೂಲಕ ನೆನಪು*
ಬಾಲಿವುಡ್ ನಟ ಸುಶಾಂತ್ ಸಿಂಗ್ ಇಲ್ಲವಾಗಿ ಇನ್ನೇನು ಜೂನ್ ಬಂತೆಂದರೆ ವರ್ಷ ತುಂಬುತ್ತದೆ. ಆ ಸಾವಿನ ಬಗ್ಗೆ ಮಿಡಿಯುವ ಬದಲು, ಆ ಸಾವಿನ ತನಿಖೆಯಲ್ಲಿಯೇ ಸುಶಾಂತ್ ಹೆಚ್ಚು ಸುದ್ದಿಯಾದರು. ಕೊಲೆಯೋ, ಆತ್ಮಹತ್ಯೆಯೋ ಎಂಬಂಥ ಪ್ರಶ್ನೆಯೇ ದೊಡ್ಡ ಮಟ್ಟದಲ್ಲಿ ಸದ್ದುಗದ್ದಲ ಮಾಡಿತು. ಆ ಸಾವನ್ನು ಹೊರತುಪಡಿಸಿ ಬಾಲಿವುಡ್ ನಲ್ಲಿ ಆತನ ಸಾಧನೆ ಕುರಿತು ಅಲ್ವಿದಾ ಆಲ್ಬಂ ಹಾಡು ಇದೀಗ ಸಿದ್ಧವಾಗಿದೆ. ಆತನ ಸ್ಟ್ರಗಲ್ ಅನ್ನು ಪ್ಲೇ ಟು ಮಿ ಅರ್ಪಿಸುತ್ತಿರುವ ಅಲ್ವಿದಾ ಹಾಡಿನಲ್ಲಿ ತೋರಿಸಿದ್ದಾರೆ ಗಾಯಕ ವಿನಯ್ ಚಂದ್ರ.
ಇತ್ತೀಚೆಗೆ ಆ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಹಿಂದಿಯಲ್ಲಿಯೇ ಹಾಡು ಸಿದ್ಧವಾಗಿದ್ದು, ಹಾಡಿಗೆ ದನಿಯಾಗುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ ವಿನಯ್ ಚಂದ್ರ. ಅಷ್ಟೇ ಅಲ್ಲ ಈ ಹಾಡಿನಲ್ಲಿ ವಿನಯ್ ನಟನೆ ಸಹ ಮಾಡಿದ್ದಾರೆ. ಅದು ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ನಲ್ಲಿಯೂ ನೋಡಬಹುದು.
ಬಾಲಿವುಡ್ ನಲ್ಲಿ ನೆಲೆ ನಿಲ್ಲಲು ಸುಶಾಂತ್ ಅವರ ಶ್ರಮ ಹೇಗಿತ್ತು ಎಂಬುದನ್ನು ಈ ಹಾಡಿನಲ್ಲಿ ತೋರಿಸಿದ್ದೇವೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಸೆರೆ ಹಿಡಿದಿದ್ದೇವೆ. ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈಹಿಡಿದವರಿಗೆ, ಆಸರೆಯಾದವರಿಗೆ ಥ್ಯಾಂಕ್ಸ್ ಹೇಳಿ ಹೊರಡುವ ಪರಿಕಲ್ಪನೆಯಲ್ಲಿ ಹಾಂದರು.
ಎರಡೂವರೆ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ಸೆಟ್ ಹಾಕಿ ಅಲ್ವಿದಾ ಹಾಡಿನ ಶೂಟಿಂಗ್ ಮಾಡಲಾಗಿದೆ. ಸದ್ಯ ಟೀಸರ್ ಲಾಂಚ್ ಆಗಿದ್ದು, ಇನ್ನೊಂದು ವಾರದಲ್ಲಿ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆ ಆಗಲಿದೆ.
ಪ್ಲೇ ಟು ಮಿ ಇಂಡಿಯಾದ ಬಿಗೆಸ್ಟ್ ಫರ್ಫಾಮಿಂಗ್ ವೇದಿಕೆಯಾಗಿದೆ. ಇದೀಗ ಪ್ಲೇ ಟು ಮಿ ಒರಿಜಿನಲ್ಸ್ ಶುರುಮಾಡಿದ್ದಾರೆ. ಅದರ ನಿಟ್ಟಿನಲ್ಲಿ ವಿನಯ್ ಚಂದ್ರ ಅವರ ಮೊದಲ ಹಾಡಾಗಿ ಅಲ್ವಿದಾ ಮೂಡಿಬಂದಿದೆ. ಕೀರ್ತಿ ವಾಸನ್ ಸುಬ್ರಮಣ್ಯಂ ಪ್ಲೇ ಟು ಮಿಯ ಸಿಇಒ ಆಗಿದ್ದಾರೆ. 104 ಎಫ್‌ಎಂನ ಸಿಇಒ ಮತ್ತು ವಲ್ಫೂಲ್ ಬ್ರಾಂಡ್ ನ ಬಿಸಿನೆಸ್ ಹೆಡ್ ಸಹ ಆಗಿದ್ದಾರೆ.
ಶ್ರೀಧರ್ ಮತ್ತು ಶೀತಲ್ ಈ ಹಾಡಿಗೆ ಹಣ ಹೂಡಿದ್ದಾರೆ. ಹಾಡಿನ ನಿರ್ದೇಶನವನ್ನೂ ಶ್ರೀಧರ್ ಮಾಡಿದ್ದಾರೆ. ಹಾಡಿನ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಗಳ ದಂಡೇ ಬಂದಿತ್ತು. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ಅವರ ತಂದೆ ಮತ್ತು ಹಿರಿಯ ಪತ್ರಕರ್ತರು ಆಗಿರುವ ಸುರೇಶ್ ಚಂದ್ರ, ರವಿಚೇತನ್, ನಟಿ ರೂಪಿಕಾ, ಅಭಯ್ ಚಂದ್ರ, ಕೀರ್ತಿ ವಾಸನ್ ಸೇರಿ ಹಲವರು ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಈಗಾಗಲೇ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡುತ್ತಿರುವ ಅನಿಲ್ ಕುಮಾರ್ , ಆಲ್ವಿದಾ ಹಾಡಿಗೂ ಕ್ಯಾಮರಾ ಹಿಡಿದಿದ್ದಾರೆ. ಜತೆಗೆ ಸಂಕಲನವನ್ನೂ ಮಾಡಿದ್ದಾರೆ. ಹಾಡಿಗೆ ಸಂಗೀತ, ಗಾಯನ ಒದಗಿಸಿದ್ದಾರೆ ವಿನಯ್ ಚಂದ್ರ. ಹಿಂದಿಯಲ್ಲಿ ಅಭಿಲಾಷ್ ಗುಪ್ತಾ ಸಾಹಿತ್ಯವನ್ನು ಬರೆದಿದ್ದಾರೆ.