Film 1980.Film Teaser Launch.

Monday, February 22, 2021

630

 

*ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯ 1980 ಟೀಸರ್​ ಬಿಡುಗಡೆ*

*-ರಾಜ್​ಕಿರಣ್​ ಚೊಚ್ಚಲ ನಿರ್ದೇಶನ*

*- ಪೂಜಶ್ರೀ ಪ್ರೊಡಕ್ಷನ್​ ಮತ್ತು ನೇಸರ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ನಿರ್ಮಾಣ*

 

ಪೂಜಶ್ರೀ ಪ್ರೊಡಕ್ಷನ್​ ಮತ್ತು ನೇಸರ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಮೂಡಿಬಂದಿರುವ 1980 ಸಿನಿಮಾ ಸೋಮವಾರ ನಗರದ ಮಂತ್ರಿಮಾಲ್​ನಲ್ಲಿ ಟೀಸರ್​ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿದ್ದು, ಇನ್ನೇನು ಚಿತ್ರಮಂದಿರಕ್ಕೂ ಆಗಮಿಸಿಲಿದೆ. ಟೀಸರ್​ ಲಾಂಚ್​ ನೆಪದಲ್ಲಿ ಮಾಧ್ಯಮದ ಮುಂದೆ ಬಂದಿದ್ದ ತಂಡ, ಸಿನಿಮಾದ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು.

ಮೊದಲಿಗೆ ಮಾತನಾಡಿದ ಚಿತ್ರದ ನಾಯಕಿ ಪ್ರಿಯಾಂಕಾ ಉಪೇಂದ್ರ, ಲಾಕ್​ಡೌನ್​ ಬಳಿಕ ಸಿಕ್ಕ ಸಿನಿಮಾ ಇದು. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ. ಅಷ್ಟೇ ಅದ್ಬುತವಾಗಿದೆ. ಆರಂಭದಲ್ಲಿ ಶೂಟಿಂಗ್ ಹೇಗಿರುತ್ತದೆ ಎಂದು ಟೆನ್ಷನ್ ಇತ್ತು. ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಶನಿವಾರಸಂತೆಯಲ್ಲಿ ಅಷ್ಟೇ ನೀಟಾಗಿ ಶೂಟಿಂಗ್ ಮುಗಿಸಿದ್ದಾರೆ ನಿರ್ದೇಶಕರು. ಹೊಸ ಟೀಮ್​ನಲ್ಲಿ ಕೆಲಸ ಮಾಡಿ ಖುಷಿಯಾಯ್ತು. ಇತ್ತೀಚಿನ ದಿನಗಳಲ್ಲಿ ಮೇಕಿಂಗ್​ ವಿಚಾರದಲ್ಲಿ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬರವಣಿಗೆ ತುಂಬ ಮಹತ್ವದ್ದು. ಇಲ್ಲಿ ಬರವಣಿಗೆಯೂ ಚೆನ್ನಾಗಿದೆ ಎಂದರು.

ನಿರ್ದೇಶಕ ರಾಜ್​ಕಿರಣ್​ಗಿದು ಮೊದಲ ಸಿನಿಮಾ. ಹಾಗಾಗಿ ಸಿನಿಮಾ ಬಗ್ಗೆ ಹೆಚ್ಚೇನು ಹೇಳದೇ, ತೆರೆಮೇಲೆಯೇ ನೋಡಿ ಎಂದರು. ಇದು ನನ್ನ ಮೊದಲ ಸಿನಿಮಾ. ಶೀರ್ಷಿಕೆಗೆ ತಕ್ಕಂತೆ ಇದು 1980 ಕಾಲಘಟ್ಟದಲ್ಲಿ ನಡೆಯುವ ಕಥೆ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿ ಎನ್ನಬಹುದು. ಈ ಸಿನಿಮಾ ಸಿದ್ಧವಾಗಲು ನನ್ನ ಇಡೀ ಟೀಮ್​ ಶ್ರಮಿಸಿದೆ. ಅವರಿಗೆಲ್ಲ ನನ್ನ ಕಡೆಯಿಂದ ಧನ್ಯವಾದ ಎಂದರು.

ಚಿತ್ರದಲ್ಲಿ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವ ಮಾಡೆಲ್ ಕಂ ನಟಿ ಶರಣ್ಯ ಶೆಟ್ಟಿ, ಉತ್ಸಾಹದಲ್ಲಿಯೇ ಮಾತನಾಡಿದರು. ಇದು ನನ್ನ ಮೊದಲ ಸಿನಿಮಾ. ಚಿತ್ರದ ಕಥೆ ಕೇಳಿಯೇ ಸಿನಿಮಾವನ್ನು ಆಯ್ದುಕೊಂಡೆ. ಈ ಚಿತ್ರದಲ್ಲಿ ಜಾಸ್ತಿ ಮಾತನಾಡುವ ಹುಡುಗಿಯ ಪಾತ್ರ ನನ್ನದು. ಹೊಸ ತಂಡ ಎಂಬುದಕ್ಕಿಂತ ನಾನೂ ಚಿತ್ರರಂಗಕ್ಕೆ ಹೊಸಬಳೇ. ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದರು.

ಇನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಆರ್​ಕೆ ಪ್ರೊಡಕ್ಷನ್ಸ್ ಮತ್ತು ಪೂಜಶ್ರೀ ಬಂಡವಾಳ ಹೂಡಿದ್ದಾರೆ. ಪಾತ್ರವರ್ಗದಲ್ಲಿ ಪ್ರಿಯಾಂಕಾ ಉಪೇಂದ್ರ, ಶ್ರೀಧರ್, ಅರವಿಂದ್ ರಾವ್, ರಮೇಶ್​ ಪಂಡಿತ್, ಶಂಕರ್ ಅಶ್ವತ್ಥ್, ಕಿಶೋರ್ ಕುಮಾರ್,  ವಿಶಾಲ್​ ಧೀರಜ್, ಧನುಷ್ ಗೌಡ, ಮಾಸ್ಟರ್ ಕೃತಿಕಾ, ಭಾನು ಪ್ರಿಯಾ ತಾರಾಗಣದಲ್ಲಿದ್ದಾರೆ. ಜೀವ ಆಂಟೋನಿ ಛಾಯಾಗ್ರಹಣ, ಚಿಂತನ್ ವಿಕಾಸ್ ಅವರ ಸಂಗೀತ, ಸಂಕಲನ ಲೋಕೇಶ್ ಪುಟ್ಟೇಗೌಡ, ನರೇಂದ್ರ ಬಾಬು ಸಂಭಾಷಣೆ ಬರೆದಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,