ಕೊರೋನಾ ನಂತರ ಬಿಡುಗಡೆಯಾಗ್ತಿರೋ ಮೊದಲಚಿತ್ರ ಕಲಿವೀರ
ಈ ಹಿಂದೆ ಕನ್ನಡ ದೇಶದೊಳ್ ಎಂಬ ಚಿತ್ರ ಮಾಡಿದ್ದ ಅವಿರಾಮ್ ಕನ್ನಡಿಗ ಈಗ ಕಲಿವೀರ ಎಂಬ ಮತ್ತೊಂದು ಚಿತ್ರ ನಿರ್ದೇಶಿಸಿದ್ದಾರೆ. ಸಾಹಸಿ ಯುವಕನೋರ್ವನ ಹೋರಾಟದ ಕಥನ ಹೊಂದಿದ ಆ ಚಿತ್ರದ ಹೆಸರು ಕಲಿವೀರ. ಕೊರೋನಾ ಎರಡನೇ ಲಾಕ್ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಛೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ನಾಯಕ ಏಕಲವ್ಯ. ಆಟೋಡ್ರೈವರ್ ಆಗಿದ್ದ ಏಕಲವ್ಯ ಅವರನ್ನು ಹೀರೋ ಮಾಡಿದ್ದು, ರಾಣೇಬೆನ್ನೂರಿನ ಕೆಎಂಪಿ ಶ್ರೀನಿವಾಸ್. ತಮ್ಮೆದುರೇ ಓಡಾಡಿಕೊಂಡಿದ್ದ ಯುವಕನಲ್ಲಿದ್ದ ಸಾಹಸ ಕಲೆಯನ್ನು ಹೊರಜಗತ್ತಿಗೆ ಪರಿಚಯಿಸಬೇಕೆಂದು, ಆತನಿಗಾಗೇ ಕಲಿವೀರ ಸಿನಿಮಾ ಮಾಡಿದ್ದಾರೆ. ರಾಣೆಬೆನ್ನೂರಿನಲ್ಲಿ ಸ್ಟೀಲ್‌ಷಾಪ್ ಇಟ್ಟುಕೊಂಡಿರುವ ಇವರು ಈ ಚಿತ್ರ ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಅವಿರಾಮ್ ಈ ಚಿತ್ರದಿಂದ ಅವಿ ಆಗಿದ್ದಾರೆ. ಈ ಚಿತ್ರದಲ್ಲಿ ಚಿರಶ್ರೀ ಅಂಚನ್ ಹಾಗೂ ಪಾವನಾಗೌಡ ಇಬ್ಬರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆ, ವಿ.ಮನೋಹರ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ೪ ಹಾಡುಗಳಿವೆ.
ಟ್ರೈಲರ್ ಬಿಡುಗಡೆ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಅವಿ ಎರಡನೇ ಲಾಕ್ಡೌನ್ ನಂತರ ಮೊದಲ ಚಿತ್ರವಾಗಿ ಕಲಿವೀರ ಬಿಡುಗಡೆಯಾಗುತ್ತಿದೆ. ಮುಂದೆ ಸಾಲುಸಾಲು ಸಿನಿಮಾಗಳು ಬಿಡುಗಡೆಗೆ ಕಾದಿರುವ ಕಾರಣ ನಾವು ಮುಂಚೆ ಬಂದರೆ ಸ್ವಲ್ಪ ಕಾಲಾವಕಾಶ ಸಿಗುತ್ತದೆ, ಇನ್ನಷ್ಟು ಜನರನ್ನು ತಲುಪಬಹುದೆಂದು ಬೇಗ ಬರ‍್ತಿದ್ದೇವೆ. ಮೊದಲಿಗೆ ಉತ್ತರ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡೋಣ ಎಂದುಕೊಂಡಿದ್ದೆವು. ಆ ಭಾಗದ ಜನ ಇಲ್ಲಿಗಿಂತ ೪ ಪಟ್ಟು ಜಾಸ್ತಿ ಸಿನಿಮಾ ಬಗ್ಗೆ ಕೇಳ್ತಿದಾರೆ. ಇತ್ತೀಚೆಗೆ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಕಾರಣ ಎಲ್ಲಾಕಡೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ, ಮಲ್ಟಿಪ್ಲೆಕ್ಸ್‌ಗಿಂತ ಹೆಚ್ಚು ಸಿಂಗಲ್‌ಸ್ಕ್ರೀನ್‌ಗಳಿಗೇ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇವೆ. ಸದ್ಯ ಲಿಮಿಟೆಡ್ ಥೇಟರ್‌ಗಳಲ್ಲಿ ಮಾತ್ರ ರಿಲೀಸ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿಸುವ ಪ್ಲಾನ್ ಇದೆ. ಆಕ್ಷನ್, ಹಾರರ್, ಕಾಮಿಡಿ, ಲವ್, ಸಸ್ಪೆನ್ಸ್ ಎಲ್ಲಾ ರೀತಿಯ ಎಂಟರ್‌ಟೈನಿಂಗ್ ಕಂಟೆಂಟ್ ಇರುವ ಚಿತ್ರವಿದು. ಚಿತ್ರಕಥೆಯಲ್ಲಿ ಹೊಸತನವಿದೆ. ದಾಂಡೇಲಿ ಕಾಡಿನಲ್ಲಿ ೨೦ದಿನ, ಶಿವಮೊಗ್ಗ, ಬೆಂಗಳೂರು, ಮುತ್ತತ್ತಿಯಂಥ ಸುಂದರ ತಾಣಗಳಲ್ಲಿ ಈ ಚಿತ್ರದ ಶೂಟಿಂಗ್ ನಡೆಸಿ, ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಾಯಕ, ನಾಯಕಿಯರು ಸೇರಿದಂತೆ ಎಲ್ಲರೂ ಎಫರ್ಟ್ ಹಾಕಿರುವುದರಿಂದ ಚಿತ್ರದ ಮೇಲೆ ಪೂರ್ಣ ಭರವಸೆಯಿದೆ. ಈಗಾಗಲೇ ಹಿಂದಿ ಡಬ್ಬಿಂಗ್ ರೈಟ್ಸ್ ಉತ್ತಮ ಬೆಲೆಗೆ ಮಾರಾಟವಾಗಿದೆ. ಉಳಿದ ಭಾಷೆಯಲ್ಲೂ ಕೇಳ್ತಿದ್ದಾರೆ. ಆದರೆ ನಿರ್ಮಾಪಕರಿನ್ನೂ ಒಪ್ಪಿಲ್ಲ. ಹಿಸ್ಟಾರಿಕಲ್ ಬೇಸ್ ಮಾಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಮೂರು ಶೇಡ್ಸ್ ಬರುತ್ತದೆ ಎಂದು ಹೇಳಿದರು.
ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಾವನಾಗೌಡ ಮಾತನಾಡಿ ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರವೂ ಅಷ್ಟೇ ಉತ್ತಮವಾಗಿದೆ, ಒಳ್ಳೇ ಸಿನಿಮಾ ಬಂದಾಗ ಜನ ಖಂಡಿತ ನೋಡ್ತಾರೆ ಎಂಬ ನಂಬಿಕೆಯಿದೆ, ಈ ಸಿನಿಮಾದ ಶಕ್ತಿಯೇ ನಮ್ಮ ಕೆಲಸ. ಅದನ್ನು ಚೆನ್ನಾಗಿ ನಿಭಾಯಿಸಿದ್ದೇವೆ, ನಿರ್ಮಾಪಕರು ಮೊದಲ ಪ್ರಯತ್ನದಲ್ಲೇ ಒಂದೊಳ್ಳೇ ಸಿನಿಮಾ ಕೊಟ್ಟಿದ್ದಾರೆ ಎಂದು ಹೇಳಿದರು,
ನಿರ್ಮಾಪಕ ಕೆಎಂಪಿ ಶ್ರೀನಿವಾಸ್ ಮಾತನಾಡುತ್ತ ಏಕಲವ್ಯ ಅವರನ್ನು ಹಲವಾರು ವರ್ಷಗಳಿಂದ ನಾನು ನೋಡುತ್ತಿದ್ದೆ, ಆತನಲ್ಲಿ ಒಳ್ಳೆಯ ಕಲೆ, ಪ್ರತಿಭೆಯಿದ್ದರೂ ಪ್ರೋತ್ಸಾಹ ನೀಡುವವರಿದ್ದಿಲ್ಲ. ಆ ಕೆಲಸವನ್ನು ನಾನು ಮಾಡಿದ್ದೇನೆ. ಇಷ್ಟುದಿನವೂ ಸಫರ್ ಆಗಿದ್ದೇವೆ, ಮುಂದೆ ಏನಾಗುತ್ತೋ ನೋಡೋಣ, ಪರಿಸ್ಥಿತಿ ಹೀಗೇ ಎಂದು ಯಾರೂ ಹೇಳಲು ಸಾಧ್ಯವಿಲ್ಲ, ಚಿತ್ರವನ್ನು ಎಷ್ಟುದಿನ ಅಂತ ಬತ್ತಳಿಕೆಯಲ್ಲಿಟ್ಟುಕೊಂಡು ಕೂರುವುದು, ಮಾರ್ಚ್‌ನಲ್ಲೇ ಬರಬೇಕೆಂದು ಡೇಟ್ ಕೂಡ ಅನೌನ್ಸ್ ಮಾಡಿದ್ದೆವು, ಈಗಾಗಲೇ ದಿನಂಪ್ರತಿ ಕಷ್ಟ ಅನುಭವಿಸುತ್ತಲೇ ಬಂದಿದ್ದೇವೆ, ಆದರೂ ಹಿರಿಯರ ಸಲಹೆಯನ್ನು ಮೀರಿ ಚಿತ್ರ ಬಿಡುಗಡೆಗೆ ಧೈರ್ಯ ಮಾಡಿದ್ದೇವೆಂದು ಹೇಳಿದರು. ಸಹ ನಿರ್ಮಾಪಕರಾದ ರಾಜು ಪೂಜಾರ್, ಬಸವಣ್ಣೆಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದು ಮಾತನಾಡಿದರು.