Groufie.Film Audio Rel

Tuesday, August 03, 2021

386

 

ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯರಿಂದ  "ಗ್ರೂಫಿ" ಹಾಡುಗಳ ಲೋಕಾರ್ಪಣೆ.

 

ಚಿತ್ರದ ಹಾಡುಗಳನ್ನು ಅರ್ಜುನ್ ಜನ್ಯ ಅವರಿಗೆ ಅರ್ಪಿಸಿದ ತಂಡ.

 

ವಿಜೇತ್ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ, ನಾಲ್ಕು ಹಾಡುಗಳಿರುವ "ಗ್ರೂಫಿ" ಚಿತ್ರದ ಹಾಡುಗಳನ್ನು ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಬಿಡುಗಡೆ ಮಾಡಿದರು.

 

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಹಾಡುಗಳ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅರ್ಜುನ್ ಜನ್ಯ ಆಗಮಿಸಿದ್ದರು.

 ಈ ಚಿತ್ರದ ಹಾಡುಗಳು ಕೇಳಲು ಹಾಗೂ ನೋಡಲು ಮಧುರವಾಗಿದೆ. "ಗ್ರೂಫಿ" ಅಂದರೆ ನನಗನಿಸಿದು ಹೆಮ್ಮೆ ಅಂತ.

ಚಿತ್ರದ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಹಾಗೂ ನಿರ್ದೇಶಕ ರವಿ ಅರ್ಜುನ್ ಅವರು ನನಗೆ ಬಹಳ ವರ್ಷಗಳ ಸ್ನೇಹಿತರು. ಇಪ್ಪತ್ತು ವರ್ಷದ ಹಿಂದೆ ಇದೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವಿ.ಮನೋಹರ್ ಅವರ ಬಳಿ ನನ್ನ ಸಂಗೀತ ಪಯಣ ಆರಂಭವಾಗಿತ್ತು. ನನ್ನ ಸ್ನೇಹಿತನ ಮೊದಲ ಸಿನಿಮಾ ಆಡಿಯೋ ರಿಲೀಸ್ ಇಲ್ಲೇ ಆಗುತ್ತಿರುವುದು ಕಾಕತಾಳೀಯ. ಇಡೀ ತಂಡಕ್ಕೆ ಶುಭವಾಗಲಿ. "ಗ್ರೂಫಿ" ನಿರ್ಮಾಪಕರಿಗೆ ನಿರೀಕ್ಷೆಗೂ ಮೀರಿ ಲಾಭ ತರಲಿ ಎಂದು ಅರ್ಜುನ್ ಜನ್ಯ ಹಾರೈಸಿದರು.

"ಗ್ರೂಫಿ" ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಸಿನಿಮಾ. ಒಬ್ಬರೆ ಫೋಟೋ ತೆಗೆದುಕೊಂಡರೆ ಸೆಲ್ಫಿ. ಗುಂಪಾಗಿ ತೆಗೆದುಕೊಳ್ಳುವುದನ್ನು "ಗ್ರೂಫಿ" ಎನ್ನುತ್ತಾರೆ ಈಗಿನ ಯುವಪೀಳಿಗೆ. ಚಿತ್ರದ ಶೀರ್ಷಿಕೆಗೆ ಹಾಗೂ ಕಥೆಗೆ ಸಂಬಂಧವಿದೆ ಹಾಗಾಗಿ ಈ ಹೆಸರಿಟ್ಟಿದ್ದೇವೆ.  ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವನ್ನೂ ಮಾಡಿದ್ದೇವೆ. ಬೆಂಗಳೂರು, ಹೊನ್ನಾವರ, ಮಡಿಕೇರಿ ಹಾಗೂ ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಸುಮಾರು ಐವತ್ತು ದಿನಗಳ ಚಿತ್ರೀಕರಣ ನಡೆದಿದೆ.

 ನಮ್ಮ ಚಿತ್ರವನ್ನು ಪ್ರಕೃತಿ ಸೊಬಗಿನೊಂದಿಗೆ ಸುಂದರ ಪಯಣ ಅನ್ನಬಹುದು ಎಂಬುದು ನಿರ್ದೇಶಕ ರವಿ ಅರ್ಜುನ್ ಅವರ ಮಾತು.

ನಮ್ಮ ತಂಡದ ಮೇಲೆ ಅಭಿಮಾನವಿಟ್ಟು ಬಂದಿರುವ ಅರ್ಜುನ್ ಜನ್ಯ ಅವರಿಗೆ "ಗ್ರೂಫಿ" ಚಿತ್ರದ ಹಾಡುಗಳನ್ನು ಅರ್ಪಿಸುತ್ತಿದ್ದೇವೆ ಎಂದರು ರವಿ ಅರ್ಜುನ್.

ಅರ್ಜುನ್ ಜನ್ಯ ಅವರೊಂದಿಗೆ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸಿ ಅನುಭವವಿರುವ ರವಿ ಅರ್ಜುನ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

 

ನಾನು ಈ ಚಿತ್ರದಲ್ಲಿ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಸಿಕೊಂಡಿದ್ದೇನೆ. ಉತ್ತಮ ಕಥೆಯುಳ್ಳ ಈ ಚಿತ್ರವನ್ನು ನೋಡಿ ನಮ್ಮನೆಲ್ಲಾ ಹರಸಿ ಅನ್ನುತ್ತಾರೆ ನಾಯಕ ಆರ್ಯನ್ .

 

ನನ್ನದು ಈ ಚಿತ್ರದಲ್ಲಿ ವಿಭಿನ್ನ ಪಾತ್ರ. ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಂಡು,  ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು. ಎಷ್ಟು ಲೈಕ್ ಹಾಗೂ ಕಾಮೆಂಟ್ ಬರುತ್ತದೆ ಎಂದು ಕಾಯುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು ನಾಯಕಿ ಪದ್ಮಶ್ರೀ ಸಿ ಜೈನ್.

 

ಹಾಡುಗಳನ್ನು ಬರೆದಿರುವವರ ಹಾಗೂ ಹಾಡಿರುವವರ ಬಗ್ಗೆ ಮಾಹಿತಿ ನೀಡಿದ್ದ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ, ನನ್ನ ಗುರುಗಳಾದ ಅರ್ಜುನ್ ಜನ್ಯ ಅವರು ನಾನು ಸಂಗೀತ ನೀಡಿರುವ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದು, ಎಲ್ಲಕ್ಕಿಂತ ಸಂತೋಷ ತಂದಿದೆ ಎಂದರು.

 

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ವರಮಹಾಲಕ್ಷ್ಮೀ ಹಬ್ಬದಂದು ಸುಮಾರು ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಉತ್ತಮ ಸಂದೇಶವುಳ್ಳ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ಕೆ.ಜಿ.ಸ್ವಾಮಿ.

 

ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ,   ವಿಜೇತ್ ಚಂದ್ರ ಸಂಕಲನ ಮತ್ತು ಇಮ್ರಾನ್  ಸರ್ದಾರಿಯಾ, ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಗಗನ್ , ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಶ್ರೀಧರ್, ಹನುಮಂತೇ ಗೌಡ, ಸಂಗೀತ, ರಜನಿಕಾಂತ್ ಮುಂತಾದವರಿದ್ದಾರೆ.

 

ನಾಲ್ಕು ಹಾಡುಗಳಿದ್ದು ಜಯಂತ ಕಾಯ್ಕಿಣಿ, ಹೃದಯ ಶಿವ, ಚೇತನ್ ಕುಮಾರ್, ರವಿ ಅರ್ಜುನ್ ಬರೆದಿದ್ದಾರೆ. ಸಂತೋಷ್ ವೆಂಕಿ, ಮಾನಸ ಹೊಳ್ಳ, ಅನಿರುದ್ಧ ಶಾಸ್ತ್ರಿ, ವಿಜೇತ್ ಕೃಷ್ಣ ಹಾಗೂ ರಕ್ಷ ಈ ಚಿತ್ರದ ಹಾಡುಗಳನ್ನು ಇಂಪಾಗಿ ಹಾಡಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,