ಕ್ರಿಷ್ಣರಾಜ-೪ ಐನೂರು ಕೋಟಿ ಬಜೆಟ್ ಸಿನಿಮಾ
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜದಂಥ ಸಿನಿಮಾಗಳಿಂದ ಕನ್ನಡ ಸಿನಿಮಾರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಈ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಇಂಥ ಬಿಗ್ ಪ್ರಾಜೆಕ್ಟ್ ಗೆ ಕೈಹಾಕಿರುವವರು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀಭಗವತಿ ದೇವಿಯ ಆರಾಧಕ ಗಾನಶರವಣ ಸ್ವಾಮೀಜಿ. ೧೯೯೫ರಿಂದ ಕನ್ನಡ ಚಿತ್ರರಂಗದಲ್ಲಿ ಗಾಯಕನಾಗಿ ಗುರುತಿಸಿಕೊಂಡಿರುವ ಇವರು ಸಿನಿಮಾರಂಗದೊಂದಿಗೆ ವಿಶೇಷ ನಂಟನ್ನು ಇಟ್ಟುಕೊಂಡಿದ್ದಾರೆ. ಟ್ರ್ಯಾಕ್ ಸಿಂಗರ್ ಆಗಿ ದೊಡ್ಡ ದೊಡ್ಡ ಮ್ಯೂಸಿಕ್ ಡೈರೆಕ್ಟರ್‌ಗಳ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಆನಂತರ ಗೋಲ್ಡ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡು ಬ್ಯುಸಿಯಾದ ಮೇಲೆ ಚಿತ್ರರಂಗದತ್ತ ಗಮನ ಹರಿಸಲು ಇವರಿಗೆ ಸಾಧ್ಯವಾಗಲಿಲ್ಲವಂತೆ. ಲಂಡನ್, ಹಾಂಕಾಂಗ್, ಮಲೇಶಿಯಾದಂಥ ದೇಶಗಳಲ್ಲೂ ಇವರು ಗೋಲ್ಡ್ ಕಂಪನಿಯನ್ನು ಹೊಂದಿದ್ದು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಆರೇಳು ತಿಂಗಳ ಹಿಂದೆ ಗಾನಶರವಣ ಸ್ವಾಮೀಜಿ ಅವರು ಕೇರಳದ ಭಗವತಿದೇವಿ ದೇವಸ್ಥಾನದ ನವೀಕರಣಕ್ಕೆ ಬರೋಬರಿ ೫೨೬ ಕೋಟಿ ರೂ.ಗಳನ್ನು ಕೊಟ್ಟಿದ್ದು, ಎಲ್ಲಾ ಕಡೆ ದೊಡ್ಡಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಇವರೀಗ ಐನೂರು ಕೋಟಿಯ ಬಿಗ್‌ಬಜೆಟ್ ಚಿತ್ರವೊಂದನ್ನು ಏಳು ಭಾಷೆಗಳಲ್ಲಿ ನಿರ್ಮಿಸಲು ಹೊರಟಿದ್ದಾರೆ. ಈ ಚಿತ್ರದ ಶೀರ್ಷಿಕೆ ಹಾಗೂ ಜಿ.ಎಸ್.ಆರ್.ಫಿಲಂ ಪ್ರೊಡಕ್ಷನ್ಸ್ ಎನ್ನುವ ಬ್ಯಾನರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸದ್ಯ ಚಿತ್ರದ ಕಥೆ ಮಾತ್ರವೇ ರೆಡಿಯಾಗಿದ್ದು, ನಿರ್ದೇಶಕ, ನಾಯಕ, ನಾಯಕಿ ಯಾರು ಅಂತ ಇನ್ನೂ ಫೈನಲ್ ಆಗಿಲ್ಲ,
ಈ ಕುರಿತಂತೆ ಟೈಟಲ್‌ಲಾಂಚ್ ನಂತರ ಮಾತನಾಡಿದ ನಿರ್ಮಾಪಕ, ಕಥೆಗಾರ ಹಾಗೂ ಸಂಗೀತ ನಿರ್ದೇಶಕರೂ ಆದ ಗಾನಶರವಣ ಸ್ವಾಮೀಜಿ ಮಾತನಾಡುತ್ತ ಸಂಗೀತಕಲೆ ನನಗೆ ರಕ್ತಗತವಾಗಿ ಬಂದದ್ದು, ಐದಾರು ವರ್ಷದಿಂದ ಸಿನಿಮಾ ಮಾಡುವ ಯೋಜನೆ ಇತ್ತು. ಮೂರು ವರ್ಷಗಳ ಹಿಂದೆ ಒಂದು ಕಥೆಯ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಹೊಂದಿದ ಈ ಚಿತ್ರಕ್ಕೆ ಕೃಷ್ಣರಾಜ-೪ ಎಂಬ ಟೈಟಲ್ ಇಟ್ಟಿದ್ದೇವೆ. ಚಿತ್ರದ ಬಜೆಟ್ ೪೦೦ರಿಂದ ೫೦೦ ಕೋಟಿ ಆಗಲಿದೆ. ಇದರ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಸ್ವಾಮೀಜಿ ಫಿಲಂಸಿಟಿಯನ್ನು ನಿರ್ಮಿಸಲು ಮೈಸೂರಿನಲ್ಲಿ ಈಗಾಗಲೇ ೬೪೦ ಎಕರೆ ಜಾಗವನ್ನೂ ಸಹ ಖರೀದಿಸಿದ್ದೇವೆ. ಅಲ್ಲೊಂದು ಅದ್ದೂರಿ ವೆಚ್ಚದ ಸೆಟ್ ಹಾಕಲಿದ್ದೇವೆ. ಅದು ಅಲ್ಲೇ ಪರ್ಮನೆಂಟಾಗಿ ಉಳಿಯಲಿದೆ, ಇನ್ನು ಲಂಡನ್‌ನಲ್ಲಿ ನಮ್ಮ ಮ್ಯೂಸಿಕ್ ಸ್ಟುಡಿಯೋ ಇದ್ದು, ಅಲ್ಲೇ ಈ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯಲಿದೆ. ಅಲ್ಲದೆ ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ನಮ್ಮ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ, ಅದು ಯಾರಂತ ಸದ್ಯದಲ್ಲೇ ಗೊತ್ತಾಗಲಿದೆ, ನಾಯಕನ ಪಾತ್ರಕ್ಕೂ ತೂಕದ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ, ಎಲ್ಲಾ ಭಾಷೆಯಲ್ಲೂ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳುವ ಪ್ಲಾನ್‌ಇದೆ. ನಮ್ಮ ಲೀಗಲ್ ಅಡ್ವೆಜರ್ ಆದ ಎಂ.ವಿ. ಅದಿತಿ ಅವರು ಚಿತ್ರದ ಸಹ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರನ್ನು ಪರಿಚಯಿಸಿದರು. ನಂತರ ಸಹ ನಿರ್ಮಾಪಕಿ ಅದಿತಿ ಮಾತನಾಡಿ ಚಿತ್ರದ ಟೈಟಲ್‌ನ್ನು ಕೃಷ್ಣರಾಜ-೪ ಎಂದೇಕೆ ಇಟ್ಟಿದ್ದೇವೆ ಎಂಬ ಬಗ್ಗೆ ವಿವರಿಸುತ್ತ ಚಿತ್ರದ ಹೀರೋ ಹೆಸರು ಕೃಷ್ಣ, ಆ ನಾಯಕನಿಗೆ ನಾಲ್ಕು ಶೇಡ್ ಇರುತ್ತದೆ. ಹಾಗಾಗಿ ಈ ಟೈಟಲ್ ಎಂದರಲ್ಲದೆ, ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಮೈಸೂರು ಅರಮನೆಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.