ಅದ್ದೂರಿಯಾಗಿ ಸೆಟ್ಟೇರಿದ ಧ್ರುವ ಸರ್ಜಾ-ಎ.ಪಿ. ಅರ್ಜುನ್ ಕಾಂಬಿನೇಷನ್ನ ’ಮಾರ್ಟಿನ್’
'ಅಂಬಾರಿ’ ನಂತರ ಎ.ಪಿ. ಅರ್ಜುನ್ ನಿರ್ದೇಸಿದ ಸಿನಿಮಾ ’ಅದ್ಧೂರಿ’. ಅದರಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನಟ ಧ್ರುವ ಸರ್ಜಾ. ಆ ಕಾಲಕ್ಕೆ ’ಅದ್ದೂರಿ’ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇದೀಗ ಆ ಜೋಡಿ ಒಂದಾಗಿದೆ. ’ಮಾರ್ಟಿನ್’ ಹೆಸರಿನ ಹೊಸ ಸಿನಿಮಾ ಶುರುಮಾಡಿರುವ ಅರ್ಜುನ್ ಮತ್ತು ಧ್ರುವ, ಅದರ ಮುಹೂರ್ತವನ್ನು ಭಾನುವಾರ ಮಾಡಿದ್ದಾರೆ. ’ಕ್ರೇಜಿ ಸ್ಟಾರ್’ ರವಿಚಂದ್ರನ್ ಮುಖ್ಯಅತಿಥಿಯಾಗಿ ಆಗಮಿಸಿ, ಚಿತ್ರತಂಡಕ್ಕೆ ಹಾರೈಸಿದ್ದಾರೆ.
ಈ ಹಿಂದೆ ಧ್ರುವ ಮತ್ತು ನಂದಕಿಶೋರ್ ಒಂದಾಗಿ ’ದುಬಾರಿ’ ಅನ್ನೋ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ, ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಅದನ್ನು ಶುರು ಮಾಡುವುದು ಕಷ್ಟವಾಗಿದೆ. ಹಾಗಾಗಿ, ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ಈಗ ಅರ್ಜುನ್-ಧ್ರುವ ಕಾಂಬಿನೇಷನ್ನಲ್ಲಿ ’ಮಾರ್ಟಿನ್’ ಶುರು ಮಾಡಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ಅನ್ನೋದು ವಿಶೇಷ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೆ ಹೊಂದಿಕೊಳ್ಳುತವಂತಹ ಕಲಾವಿದರು ಇದರಲ್ಲಿ ಇರುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
'ಆ್ಯಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಹೊಸ ಮಾದರಿಯ ಮೇಕಿಂಗ್ ಇರಲಿದೆ. ನಾನು ಫೆಬ್ರವರಿಯಲ್ಲಿ ನಿರ್ಮಾಪಕರಿಗೆ ಜೊತೆಯಾದೆ. ಅಂದಿನಿಂದಲೂ ಕಥೆಯ ಮೇಲೆ ವರ್ಕ್ ಮಾಡಿದ್ದೇವೆ. ಕಥೆಯು ಎಲ್ಲ ಕಡೆಗೆ ಸಲ್ಲುವುದರಿಂದ, ಬೇರೆ ಬೇರೆ ಭಾಷೆಗಳಲ್ಲೂ ಮಾಡುವುದಕ್ಕೆ ಮುಂದಾಗಿದ್ದೇವೆ. ಆಗಸ್ಟ್ 18ರಿಂದ ಶೂಟಿಂಗ್ ನಿರಂತರವಾಗಿ ನಡೆಯಲಿದೆ. ಬೆಂಗಳೂರು ಹೊರವಲಯದಲ್ಲಿ 3 ಎಕರೆ ಜಾಗದಲ್ಲಿ ಬೃಹತ್ ಜೈಲಿನ ಸೆಟ್ ಹಾಕಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಎ.ಪಿ. ಅರ್ಜುನ್.
'ಇದು ನನ್ನ ಮೊದಲ ಸಿನಿಮಾ ಎಂದುಕೊಂಡೇ ಕೆಲಸ ಮಾಡುತ್ತಿದ್ದೇನೆ. ಈ ಬಾರಿ ತಡವಾಗುವುದಿಲ್ಲ. ಡಿಸೆಂಬರ್ ವೇಳೆಗೆ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಳಿಸಲಿದ್ದೇವೆ. ಭಾರತ ಮಾತ್ರವಲ್ಲದೆ, ವಿದೇಶದಲ್ಲಿಯೂ ಶೂಟಿಂಗ್ ಮಾಡಲಿದ್ದೇವೆ. ಈ ಬಾರಿ ನನ್ನ ಡೈಲಾಗ್ ಡೆಲಿವರಿ ಕೂಡ ಬದಲಾಗಲಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಸಾಕಷ್ಟು ಬದಲಾವಣೆ ಇರಲಿದೆ’ ಎನ್ನುತ್ತಾರೆ ಧ್ರುವ ಸರ್ಜಾ.
ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿರುವ ಮಣಿಶರ್ಮಾ ಈ ಸಿನಿಮಾಗೆ ಸಂಗೀತ ನಿರ್ದೇಶ ಮಾಡುತ್ತಿದ್ದಾರೆ. ಛಾಯಾಗ್ರಹಣವನ್ನು ಸತ್ಯ ಹೆಗಡೆ ಮಾಡುತ್ತಿದ್ದಾರೆ. ಉದಯ್ ಕೆ. ಮೆಹ್ತಾ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೈಟಲ್ ಟೀಸರ್ ಭಾರಿ ವೈರಲ್ ಆಗಿದ್ದು, ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.