ನಿರ್ಮಾಪಕ ಸ್ನೇಹಿ ಆರ್ಗಸ್ ಎಂಟರ್ ಟೈನ್ ಮೆಂಟ್ ಉದ್ಘಾಟನೆ
ಕಪ್ಪು ಬಿಳುಪು ಕಾಲದಲ್ಲಿ ಬಹುತೇಕ ಸ್ಟುಡಿಯೋ ಆವರಣದಲ್ಲೇ ಇಡೀ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು, ಆಗ ಅತ್ಯಾಧುನಿಕ ಸಲಕರಣೆ ಸೌಲಭ್ಯಗಳು, ವಿದೇಶೀ ನೆಲದಲ್ಲಿ ಚಿತ್ರೀಕರಣ ಮಾಡಲೇಬೇಕೆಂಬ ಇರಾದೆ ಇದ್ದಿಲ್ಲ, ಆದರೀಗ ಕಾಲ ಬದಲಾಗಿದೆ, ಪ್ರೇಕ್ಷಕ ಹೊಸದನ್ನು ಬಯಸುತ್ತಿದ್ದಾನೆ. ನಿರ‍್ಮಾಪಕರೂ ಪ್ರೇಕ್ಷಕರ ಕಣ್‌ಮನ ತಣಿಸಲು ನಾನಾ ರೀತಿಯ ಸರ್ಕಸ್ ಮಾಡಬೇಕಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಫಾರಿನ್ ಶೂಟಿಂಗ್ ಅಂತ ಹೋದವರಿಗೆ ಒಂದಲ್ಲ ಒಂದು ರೀತಿ ತೊಂದರೆಗಳಾಗುತ್ತಿವೆ. ಸುದೀಪ್ ರಂಥ ಸ್ಟಾರ್ ಇದ್ದ ಕೋಟಿಗೊಬ್ಬ ಚಿತ್ರತಂಡ ಕೂಡ
ರಿಸ್ಕ್ ಎದುರಿಸಿತ್ತು. ಇನ್ನು ಅನಿಮಲ್ ಬೋರ್ಡ್ ಅನುಮತಿ ತೆಗೆದುಕೊಳ್ಳುವಲ್ಲಿ ಪರದಾಡಬೇಕಿದೆ, ಇಂಥಾ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಅರ್ಗಸ್ ಎಂಟರ್‌ಟೈನ್‌ಮೆಂಟ್ ಎನ್ನುವ ಸಂಸ್ಥೆ ಹುಡುಕಿದೆ. ಸಿನಿಮಾ ಮಾಡಲು ಹೊರಡುವ ಯಾವುದೇ ನಿರ‍್ಮಾಪಕರು ಈ ಸಂಸ್ಥೆಯನ್ನು ಸಂಪರ್ಕಿಸಿದರೆ ಸಾಕು, ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಆರ್ಗಸ್ ಎಂಟರ್ ಟೈನ್ಮೆಂಟ್ ಸಂಸ್ಥೆಯು ಜೈಪುರದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಇದರ ಬೆಂಗಳೂರು ವಿಭಾಗದ ಉದ್ಘಾಟನಾ ಕಾರ್ಯಕ್ರಮ ತಾಜ್ ವಿವಂತಾ ಹೋಟೆಲಿನಲ್ಲಿ ನೆರವೇರಿತು. ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಸಾರಾ ಗೋವಿಂದು, ನಿರ‍್ಮಾಪಕ ಕೆ. ಮಂಜು, ನಿರ‍್ದೇಶಕ ನಾಗಣ್ಣ ಸೇರದಂತೆ ಚಿತ್ರೋದ್ಯಮದ ಹಲವಾರು ಪ್ರಮುಖರು ಈ ಕರ‍್ಯಕ್ರಮದಲ್ಲಿ ಪಾಲ್ಗೊಂಡು ಈ ಸಂಸ್ಥೆ ಕನ್ನಡ ಚಿತ್ರೋದ್ಯಮಕ್ಕೆ ಯಾವ ರೀತಿ ಸಹಕಾರಿಯಾಗಿ ನಿಲ್ಲಬಲ್ಲದು ಎಂಬ ಬಗ್ಗೆ ಮಾತನಾಡಿದರು.
ಸಾ. ರಾ. ಗೋವಿಂದು ಮಾತನಾಡುತ್ತ ನಮ್ಮ ಚಿತ್ರರಂಗ ಈಗಾಗಲೇ ತುಂಬಾ ಕಷ್ಟದಲ್ಲಿದೆ. ವಿದೇಶದಲ್ಲಿ ಶೂಟ್ ಮಾಡುವಾಗ ಅವರು ಹೇಳಿದ್ದೇ ರೇಟ್ ಆಗಿರುತ್ತದೆ, ಈಗ ನೀವು ಇದೆಲ್ಲ ವ್ಯವಸ್ಥೆಗಳನ್ನು ಮಾಡಿಕೊಡುತ್ತೇವೆ ಎಂದು ಮುಂದೆ ಬಂದಿದ್ದೀರಿ, ನಮ್ಮ ನಿರ‍್ಮಾಪಕರಿಗೆ ಅನುಕೂಲಕರವಾಗುವ ಹಾಗೆ ವ್ಯವಸ್ಥೆ ಮಾಡಿಕೊಡಿ. ಈ ಬಗ್ಗೆ ನಾವೆಲ್ಲ ಕೂತು ಚರ್ಚೆ ಮಾಡೋಣ. ಈ ಹಿಂದೆ ನಾವು ಸರ‍್ಕಾರಗಳಿಗೂ ಎಲ್ಲಾ ವ್ಯವಸ್ಥೆ ಒಂದೇ ಸೂರಿನಡಿ ಆಗುವಂತೆ ಮಾಡಿಕೊಡಿ ಎಂದು ಮನವಿ ಸಲ್ಲಿಸಿದ್ದೆವು, ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ, ನಿಮ್ಮಿಂದ ಚಿತ್ರರಂಗಕ್ಕೆ ಉಪಯೋಗವಾಗಲಿ ಎಂದು ಹೇಳಿದರು. ಡಿ.ಆರ್. ಜೈರಾಜ್ ಮಾತನಾಡುತ್ತ ನಮ್ಮ ಇಂಡಸ್ಟಿçಗೆ ಸಪೋರ್ಟ್ ಮಾಡಲು ಬಂದಿದ್ದೀರಿ, ಯಾವ ಯಾವ ವ್ಯವಸ್ಥೆಗೆ ಏನೇನು ದರ ನಿಗದಿ ಮಾಡಿದ್ದೀರಿ ಅಂತ ನಮಗೆ ಮೊದಲೇ ತಿಳಿಸಿ, ನಾವು ನಮ್ಮ ನರ‍್ಮಾಪಕರ ಜೊತೆ ಚರ್ಚೆ ಮಾಡಿ ನಿಮಗೆ ತಿಳಿಸುತ್ತೇವೆ. ನಿಮ್ಮಂಥವರು ನಮ್ಮ ಚಿತ್ರರಂಗಕ್ಕೆ ಬರಬೇಕು ಎಂದು ಹೇಳಿದರು.
ಎನ್. ಎಂ. ಸುರೇಶ್. ಕೆ.ಮಂಜು ಹಾಗೂ ನಾಗಣ್ಣ ಅವರುಗಳು ಮಾತನಾಡಿ ಆರ‍್ಗಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕನ್ನಡ ಚಿತ್ರರಂಗಕ್ಕೆ ಸಹಕಾರಿಯಾಗಿ ಬೆಳೆಯಲಿ ಎಂದು ಹೇಳಿದರು. ಈ ಸಂಸ್ಥೆ ಎಂಡ್ ಟು ಎಂಟ್ ಎಂಬ ಧ್ಯೇಯದೊಂದಿಗೆ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದು, ಸಂಸ್ಥಾಪಕರಾದ ಸುದಿಪೋ ಚಟರ್ಜಿ, ಸಹ ಸ್ಥಾಪಕರಾದ ಜೈರಾಜ ಸಿಂಗ್ ಶೇಖಾವತ್ ಹಾಗೂ ವ್ಯವಸ್ಥಾಪಕರಾದ ಖುಷಿರಾಜ ಸಿಂಗ್ ಶೇಖಾವತ್ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದು ತಮ್ಮ ಸಂಸ್ಥೆಯ ಕುರಿತಂತೆ ಮಾತನಾಡಿದರು.