"ವರದ" ನಾಗಿ ಬರುತ್ತಿದ್ದಾರೆ ವಿನೋದ್ ಪ್ರಭಾಕರ್..
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ ಚಿತ್ರದ ಮೋಷನ್ ಪೋಸ್ಟರ್.
ರಾಬರ್ಟ್ ಚಿತ್ರದ ಯಶಸ್ಸಿನ ನಂತರ ಮರಿ ಟೈಗರ್ ವಿನೋದ್ ಪ್ರಭಾಕರ್ "ವರದ" ನಾಗಿ ಬರುತ್ತಿದ್ದಾರೆ.
ಈ ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿತ್ತು..
ಚಿತ್ರದ ಬಗ್ಗೆ ಮಾತನಾಡಿದ ನಾಯಕ ವಿನೋದ್ ಪ್ರಭಾಕರ್, "ವರದ" ತಂದೆ-ಮಗನ ಭಾಂದವ್ಯದ ಸಿನಿಮಾ.
ಈ ಚಿತ್ರದಲ್ಲಿ ನನ್ನ ತಂದೆಯಾಗಿ ಖ್ಯಾತ ನಟ ಚರಣ್ ರಾಜ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಅಮಿತ ನಟಿಸಿದ್ದಾರೆ. ನೆಗಟಿವ್ ಶೇಡ್ ನಲ್ಲಿ ನಟಿಸಿರುವ ಮಠ ಅವರ ಪಾತ್ರ ತುಂಬಾ ಚೆನ್ನಾಗಿದೆ. ನನ್ನ ತಾಯಿಯ ಪಾತ್ರದಲ್ಲಿ ಅಭಿನಯಿಸಿರುವ ಅಶ್ವಿನಿಗೌಡ ಸೇರಿದಂತೆ ಇದರಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿದೆ. ತಾಂತ್ರಿಕವರ್ಗದವರ ಚಿತ್ರ ಸುಂದರವಾಗಿ ಮೂಡಿಬರಲು ಹೆಚ್ಚು ಸಹಕಾರಿ ಎಂದರು.
ಮುಂದೆ ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆಯಾಗಲಿದೆ ಆಗ ಸಾಕಷ್ಟು ಮಾಹಿತಿ ನೀಡುತ್ತೇನೆ ಎಂದು ವಿನೋದ್ ತಿಳಿಸಿದರು.
ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಹಿರಿಯ ನಟ ಚರಣ್ ರಾಜ್, ಹಿಂದೆ ಪ್ರಭಾಕರ್ ಅವರೊಂದಿಗೆ ನಟಿಸಿದ್ದ ಅನುಭವಗಳನ್ನು ಹಂಚಿಕೊಂಡರು. ತಂದೆಯಂತೆ ಮಗ ವಿನೋದ್ ಕೂಡ ಸ್ನೇಹಜೀವಿ, ಅವರಿಗೆ ಉತ್ತಮ ಭವಿಷ್ಯವಿದೆ ಎಂದರು. ನಿರ್ದೇಶಕ ಉದಯ ಪ್ರಕಾಶ್ ಅವರ ಕಾರ್ಯವೈಖರಿಯನ್ನು ಚರಣ್ ರಾಜ್ ಮುಕ್ತಕಂಠದಿಂದ ಶ್ಲಾಘಿಸಿದರು.
ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕ ಉದಯ ಪ್ರಕಾಶ್, ಈ ಚಿತ್ರ ಎರಡುವರ್ಷಗಳ ಹಿಂದೆ ಆರಂಭವಾಯಿತು. ಆದರೆ ಕೊರೋನ ಎಂಬ ಒಂದು ಪದದಿಂದ ನಮ್ಮ ಚಿತ್ರ ತಡವಾಗಲು ಕಾರಣವಾಯಿತು. ಇಲ್ಲದಿದ್ದರೆ ಕಳೆದವರ್ಷವೇ ತೆರೆಗೆ ಬರುತಿತ್ತು ಎಂದರು. ಈಗಾಗಲೇ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಇಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಅದರಲ್ಲಿ ಬರುವ ಮೂರು ಸಂಭಾಷಣೆಗಳೇ ಚಿತ್ರದ ಕಥಾವಸ್ತು. ನನ್ನ ಚಿತ್ರ ಉತ್ತಮವಾಗಿ ಮೂಡಿಬರುತ್ತಿರುವುದಕ್ಕೆ ನನ್ನ ಚಿತ್ರತಂಡದ ಸಹಕಾರವೇ ಪ್ರಮುಖ ಕಾರಣ. ಅದರಲ್ಲೂ ನಮ್ಮ ನಾಯಕ ವಿನೋದ್ ಪ್ರಭಾಕರ್ ಅವರು ಚಿತ್ರದಲ್ಲಿ ತೊಡಗಿಸಿಕೊಳ್ಳುವ ರೀತಿ ಅದ್ಭುತ.
ಎಲ್ಲದಕ್ಕೂ ಮಿಗಿಲಾಗಿ ಈ ಚಿತ್ರ ಆರಂಭಿಸುವಾಗ ನನ್ನ ಬಳಿ ಕೇವಲ ಒಂದು ಲಕ್ಷ ರೂಪಾಯಿಯಿತ್ತು.. ಆ
ಸಮಯದಲ್ಲಿ ನನಗೆ ಉತ್ತೇಜನ ನೀಡಿ ಚಿತ್ರ ನಿರ್ಮಾಣ ಮಾಡುವಂತೆ ಪ್ರೇರೇಪಿಸಿದ ತಮ್ಮ ಶ್ರೀಮತಿ ಸುನಿತಾ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು ಉದಯ ಪ್ರಕಾಶ್.
ಚಿತ್ರಕ್ಕೆ ಸಂಗೀತ ನೀಡಿರುವ ಪ್ರದೀಪ್ ವರ್ಮ ಹಾಗೂ ಛಾಯಾಗ್ರಾಹಕ ಜೈಆನಂದ್ ತಮ್ಮ ಅನುಭವವನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.