*ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ನೂತನ ಚಿತ್ರಕ್ಕೆ ನಾಂದಿ.*
*ಪನ್ನಗಾಭರಣ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಮೇಘನಾರಾಜ್* .
*ಹೊಸಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶನ.*
ಅಕ್ಟೋಬರ್ ೧೭. ಕಳೆದವರ್ಷ ನಮ್ಮನೆಲ್ಲಾ ಬಿಟ್ಟು ಹೋದ ಚಿರಂಜೀವಿ ಸರ್ಕಾರ ಹುಟ್ಟುಹಬ್ಬ.
ಅದರ ಸವಿನೆನಪಿಗಾಗಿ ಅವರ ಗೆಳೆಯರು ಹಾಗೂ ಮಡದಿ ಮೇಘನಾರಾಜ್ ಹೊಸ ವಿಷಯ ಹಂಚಿಕೊಂಡಿದ್ದಾರೆ.
ನೂತನ ಚಿತ್ರವೊಂದನ್ನು ಆರಂಭಿಸುತ್ತಿದ್ದು, ವರ್ಷಾಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ.
ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಕೆಲವು ಮಾಹಿತಿ ಹಂಚಿಕೊಂಡರು.
ನಾವೆಲ್ಲಾ ಗೆಳೆಯರು ಒಟ್ಟಾಗಿ ಸೇರಿ ಮಾತನಾಡುವಾಗ ಒಂದು ಸಿನಿಮಾ ನಿರ್ಮಾಣ ಮಾಡಬೇಕೆಂದುಕೊಳ್ಳುತ್ತಿದ್ದೆವು. ಚಿರಂಜೀವಿ ಸರ್ಜಾಗಂತೂ ಹೆಚ್ಚು ಆಸೆಯಿತ್ತು. ಆದರೆ ಈ ವಿಷಯ ಚರ್ಚೆಯಾದ ಒಂದುವಾರಕ್ಕೆ ಚಿರು ನಮ್ಮನೆಲ್ಲಾ ಬಿಟ್ಟುಹೋದ. ಆಮೇಲೆ ಈ ವಿಷಯ ಅಲ್ಲಿಗೆ ನಿಂತುಹೋಯಿತು. ಅವನ ಕನಸು ನನಸ್ಸಾಗುವ ಸಮಯ ಈಗ ಬಂದಿದೆ.
ಪಿ.ಬಿ.ಸ್ಟುಡಿಯೋಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಕೆಲವು ದಿನಗಳ ಹಿಂದೆ ನಟಿ ಶೃತಿ ಹರಿಹರನ್ ಒಳ್ಳೆಯ ಕಥೆಯಿದೆ ಕೇಳು ಎಂದು ಹೇಳಿದರು. ವಿಶಾಲ್ ಆತ್ರೇಯ ಬಂದು ಕಥೆ ಹೇಳಿದರು. ತುಂಬಾ ಇಷ್ಟವಾಯಿತು. ನಂತರ ಯಾರನ್ನು ಪ್ರಧಾನಪಾತ್ರಕ್ಕೆ ಹಾಕಿಕೊಳ್ಳುವುದು ಎಂಬ ಚರ್ಚೆ ನಡೆದಾಗ, ನಾವೆಲ್ಲಾ ಮೇಘನಾ ಅವರನ್ನು ಈ ಪಾತ್ರ ಮಾಡಲು ಕೇಳಿದ್ದೆವು. ಮೇಘನಾ ಒಪ್ಪಿಕೊಂಡರು. ಕಮಲೇಶ್ ಅವರು ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ. ವರ್ಷಾಂತ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಚಾಲನೆ ನೀಡಿದ್ದೀವಿ. ನಮನ್ನು ಆಶೀರ್ವದಿಸಲು ಬಂದಿರುವ ನಮ್ಮ ತಂದೆ ನಾಗಾಭರಣ ಅವರಿಗೆ ಹಾಗೂ ಮೇಘನಾರಾಜ್ ತಂದೆ ಸುಂದರರಾಜ್ ಅವರಿಗೆ ತುಂಬು ಹೃದಯದ ಧನ್ಯವಾದ ಎಂದರು ಪನ್ನಗಾಭರಣ.
ನಾನು ನಟಿಸಲು ಸಿದ್ದವಾಗಿದ್ದೀನಾ? ಎಂದು ಯಾರಾದರೂ ಕೇಳಿದರೆ, ಈಗಲೂ ನನ್ನಲ್ಲಿ ಗೊಂದಲವಿದೆ. ಆದರೆ ಪನ್ನಗಾಭರಣ ನಿರ್ಮಾಣ ಮಾಡುತ್ತಿದ್ದೇನೆ ಅಂದ ಕೂಡಲೇ ತಕ್ಷಣ ಒಪ್ಪಿಕೊಂಡೆ. ನಮ್ಮಪ್ಪ ಹಾಗೂ ಅವರ ಅಪ್ಪ ಬಹಳ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಹಾಗೂ ಪನ್ನಗಾಭರಣನಿಗೂ ಇದೇ ರೀತಿ ನಾವು ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂಬ ಆಸೆ ಇದೆ. ಚಿತ್ರ
ನಿರ್ಮಾಣ ಚಿರು ಕನಸು. ಅದು ಈಗ ನನಸ್ಸಾಗುತ್ತಿದೆ. ಇದು ಅವರ ಹುಟ್ಟುಹಬ್ಬಕ್ಕೆ ಉಡುಗೊರೆ ಎನ್ನಬಹುದು. ಇನ್ನೊಂದು ಕಡೆಯಿಂದ ಎಲ್ಲೋ ಅವರೆ ನಿಂತು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಅನಿಸುತ್ತಿದೆ. ಚಿರುಗೆ ಭಾನುವಾರ ಅಂದರೆ ಪ್ರಿಯ. ಅನಿರೀಕ್ಷಿತ ವಾಗಿ ಅವರ ಹುಟ್ಟುಹಬ್ಬ ಭಾನುವಾರದಂದೇ ಬಂದಿದೆ. ನಿರ್ದೇಶಕರು ಹೇಳಿದ ಕಥೆ ಕೇಳಿ ನಾನು ಎರಡು ದಿನಗಳು ಅದೇ ಗುಂಗಿನಲ್ಲಿದೆ. ತುಂಬಾ ಸುಂದರವಾದ ಕಥೆ. ಹಾಗಾಗಿ ಒಪ್ಪಿಕೊಂಡೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೇಘನಾರಾಜ್.
ನಾನು ಕಥೆ ಹೇಳಿದ ತಕ್ಷಣ ಪನ್ನಗಾಭರಣ ಯಾವಾಗಿನಿಂದ ಆರಂಭ ಮಾಡೋಣ ಎಂದರು. ನಾನು ಸರ್ ಇನ್ನೂ ಸ್ಕ್ರಿಪ್ಟ್ ಸೇರಿ ಕೆಲವು ಕೆಲಸಕ್ಕೆ ಸಮಯ ಬೇಕು. ಹಾಗಾಗಿ ಸ್ವಲ್ಪ ನಿಧನವಾಗಿ ಆರಂಭಿಸೋಣ ಅಂದೆ. ಸದ್ಯಕ್ಕೆ ಮೇಘನಾರಾಜ್ ಅವರು ನಟಿಸುವುದು ಖಾತ್ರಿಯಾಗಿದೆ. ಸಾಕಷ್ಟು ಹೆಸರಾಂತ ಕಲಾವಿದರು ಇದರಲ್ಲಿ ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ತಿಳಿಸಲಾಗುವುದು ಹಾಗೂ ಚಿತ್ರದ ಶೀರ್ಷಿಕೆ ಬಿಡುಗಡೆಗೂ ಮತ್ತೊಂದು ಸಮಾರಂಭ ಆಯೋಜಿಸಲಿದ್ದಾರೆ ನಿರ್ಮಾಪಕರು ಎಂದ ನಿರ್ದೇಶಕ ವಿಶಾಲ್ ಆತ್ರೇಯ, ಈವರೆಗೂ ಸಾಕಷ್ಟು ಕಿರುಚಿತ್ರ ನಿರ್ದೇಶಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನಗೆ ಮೊದಲ ಚಿತ್ರ ಎಂದು ತಿಳಿಸಿದರು.
ನಾನು ಪನ್ನಗಾಭರಣನಿಗೆ ನಾವೆಲ್ಲಾ ಸೇರಿ ಒಂದು ಸಿನಿಮಾ ಮಾಡೋಣ ಎಂದು ಸಾಕಷ್ಟು ಬಾರಿ ಹೇಳುತ್ತಿದೆ. ಈಗ ಸಮಯ ಕೂಡಿ ಬಂದಿದೆ. ಚಿರು ಅವರ ಹುಟ್ಟುಹಬ್ಬದ ದಿನ ಮೇಘನಾರಾಜ್ ಅಭಿನಯಿಸುತ್ತಿರುವ ಈ ಚಿತ್ರದ ಬಗ್ಗೆ ತಿಳಿಸಲು ಸಂತೋಷವಾಗುತ್ತಿದೆ ಎಂದರು ಸಂಗೀತ ನಿರ್ದೇಶಕ ವಾಸುಕಿ ವೈಭವ್.
ನನ್ನದು ನಾಗಾಭರಣ ಅವರದು ಐವತ್ತು ವರ್ಷಗಳ ಸ್ನೇಹ. ಇಂದು ನಮ್ಮ ಮಕ್ಕಳ ಚಿತ್ರಕ್ಕೆ ನಾವು ಹಾರೈಸಲು ಬಂದಿರುವುದು ಸಂತೋಷ. ನಮ್ಮ ಸ್ನೇಹದ ತರಹ ಅವರ ಸ್ನೇಹವೂ ಸಾಕಷ್ಟು ದೀರ್ಘ ಕಾಲವಿರಲಿ. ಚಿರುಗೆ ಸಿನಿಮಾ ಅಂದರೆ ಪ್ರಾಣ. ಅವನ ಹುಟ್ಟುಹಬ್ಬದ ದಿನ ಗೆಳೆಯರೆಲ್ಲಾ ಸೇರಿ ಚಿತ್ರ ಆರಂಭಿಸುತ್ತಿರುವುದು ಖುಷಿಯ ವಿಚಾರ ಎಂದರು ಹಿರಿಯ ನಟ ಸುಂದರರಾಜ್.
ಬೇರೆ ಎಲ್ಲಾ ಭಾಷೆಗಳಲ್ಲಿ ಒಳ್ಳೆಯ ಚಿತ್ರ ಬರುತ್ತದೆ. ಆದರೆ ಕನ್ನಡದಲ್ಲಿ ಬರಲ್ಲ. ಎಂಬ ಮಾತು ಆಗಿನಿಂದ ಕೇಳು ಬರುತ್ತಿತ್ತು. ಎಪ್ಪತ್ತರ ದಶಕದಲ್ಲಿ ನಾವೇಲ್ಲಾ ಪ್ರಯೋಗಶೀಲರೆಲ್ಲಾ ಸೇರಿ ಚಿತ್ರ ನಿರ್ಮಾಣ ಮಾಡಿದ್ದೆವು. ಈಗ ಪಿ.ಬಿ.ಸ್ಟುಡಿಯೋಸ್ ಮೂಲಕ ನನ್ನ ಮಗ ಪನ್ನಗಾಭರಣ ಹಾಗೂ ಸ್ನೇಹಿರು ಸೇರಿ ಹೊಸ ಬದಲಾವಣೆಗೆ ಮುಂದಾಗಿದ್ದಾರೆ. ನಿಮ್ಮ ಪ್ರೋತ್ಸಾಹ ಅವರ ಮೇಲಿರಲಿ. ನನ್ನ ಸ್ನೇಹಿತ ಸುಂದರರಾಜ್ ಪುತ್ರಿ ಮೇಘನಾರಾಜ್ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು ಹಿರಿಯ ನಿರ್ದೇಶಕ ನಾಗಾಭರಣ.
ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕಮಲೇಶ್ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.