ಮ್ಯೂಸಿಕಲ್ ಲವ್ ಸ್ಟೋರಿಯ "ಮೈಸೂರು" .
ಇದು ಅನಿವಾಸಿ ಕನ್ನಡಿಗನ ಪ್ರೇಮಕಥೆ.
ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು. ಈಗ ಇದೇ ಹೆಸರಿನ ಚಿತ್ರವೊಂದು ಸಿದ್ದವಾಗುತ್ತಿದ್ದು, ಚಿತ್ರೀಕರಣ ಪೂರ್ಣವಾಗಿದೆ.
"ಮೈಸೂರು" ಇದು ಹೊರ ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನ ಪ್ರೇಮಕಥೆ. ಮ್ಯೂಸಿಕಲ್ ಲವ್ ಸ್ಟೋರಿ ಯೂ ಹೌದು.
ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪೂರಿ, ಕಟಕ್ ಮುಂತಾದ ಕಡೆ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಕಿರುತೆರೆಯ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್ ಆರ್ ಕಂಬೈನ್ಸ್ ಲಾಂಛನದಲ್ಲಿ ವಾಸುದೇವ ರೆಡ್ಡಿ ನಿರ್ಮಾಣವನ್ನು ಮಾಡಿದ್ದಾರೆ.
ಜಗದೀಶ್ (ಜೆ.ಕೆ), ಕೆ.ಆರ್.ಅಪ್ಪಾಜಿ(ಕೊಡವತ್ತಿ) ಈ ಚಿತ್ರದ ಸಹ ನಿರ್ಮಾಪಕರು.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಸಂವಿತ್ ಈ ಚಿತ್ರದ ನಾಯಕ. ತೆಲುಗು, ಬಂಗಾಳಿ, ಭೋಜಪುರಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಕನ್ನಡದಲ್ಲಿ ಮೊದಲ ಚಿತ್ರ. ಪೂಜಾ ಈ ಚಿತ್ರದ ನಾಯಕಿ. ಜ್ಯೂ||ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಮುಂತಾದ ವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.
ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಹಾಗೂ ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
"ಮೈಸೂರು" ಚಿತ್ರದಲ್ಲಿ ಎರಡು ಸಾಹಸ ಸನ್ನಿವೇಶಗಳಿದ್ದು, ಶ್ರೀಕಾಂತ್ ಸಾಹಸ ನಿರ್ದೇಶನ ಮಾಡಿದ್ದಾರೆ.