ಕಂಠೀರವ ಸ್ಟುಡಿಯೋದಲ್ಲಿ *"ಖಲಾಸ್"* ಚಿತ್ರಕ್ಕೆ ಮುಹೂರ್ತ.
B S R films ಲಾಂಛನದಲ್ಲಿ ತೆಲುಗಿನ ಬೋಯಪತಿ ಸುಬ್ಬರಾವ್ ಅವರು ನಿರ್ಮಿಸುತ್ತಿರುವ, ಶಶಿಕಾಂತ್ ಆನೇಕಲ್ ನಿರ್ದೇಶನದ "ಖಲಾಸ್" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.
ನಾನು ರೈಟರ್ ಆಗಿ ಹಲವು ದಶಕದಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ಹಿಂದೆ "ಜನಗಣಮನ" ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರ ಹಲವು ಭಾಷೆಗಳಲ್ಲಿ ಡಬ್ಬಿಂಗ್ ಸಹ ಆಗಿ ಜನಪ್ರಿಯವಾಗಿದೆ. "ಖಲಾಸ್" ನನ್ನ ಎರಡನೇ ನಿರ್ದೇಶನದ ಚಿತ್ರ. ರಾಜಕಾರಣಿ ಹಾಗೂ ಪೊಲೀಸ್ ಅಧಿಕಾರಿಯ ನಡುವೆ ನಡೆಯುವ ಕಥಾಹಂದರ. ರೌಡಿಗಳನ್ನು ಬೆಳೆಸುವುದು ನನ್ನ ಜೀವನ ಎಂದು ರಾಜಕಾರಣಿ ಹೇಳಿದ್ದರೆ, ಅಂತಹ ರೌಡಿಗಳನ್ನು ಮಟ್ಟ ಹಾಕುವುದೇ ನನ್ನ ಜೀವನ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಇದೇ ಚಿತ್ರದ ಕಥಾವಸ್ತು. ಪೊಲೀಸ್ ಅಧಿಕಾರಿಯಾಗಿ ಆಯೇಷಾ ಅಭಿನಯಿಸುತ್ತಿದ್ದಾರೆ. ಅವರು ನನ್ನ "ಜನಗಣಮನ" ಚಿತ್ರದಲ್ಲೂ ಅಭಿನಯಿಸಿದ್ದರು. ತೆಲುಗಿನ ಖ್ಯಾತ ನಟ ಸುಮನ್, ಉಮೇಶ್ ಬಣಕಾರ್, ಕುರಿ ರಂಗ ಹಾಗೂ ಅತಿಥಿಪಾತ್ರದಲ್ಲಿ ರವಿಕಾಳೆ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶಕ ಶಶಿಕಾಂತ್ ಆನೇಕಲ್.
ನನ್ನದು ಇದರಲ್ಲಿ ಪೊಲೀಸ್ ಅಧಿಕಾರಿ ಪಾತ್ರ. ದುಷ್ಟ ರಾಜಕಾರಣಿಗಳನ್ನು ಸರಿದಾರಿಗೆ ತಂದು ಸಮಾಜಕ್ಕೆ ಒಳಿತು ಮಾಡುವ ದಿಟ್ಟ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ ಎಂದರು ನಾಯಕಿ ಆಯೇಷಾ.
ನಿರ್ದೇಶಕ ಶಶಿಕಾಂತ್ ಅವರು ಬಹಳ ದಿನಗಳ ಪರಿಚಯ. ಅವರು ಹೇಳಿದ ಕಥೆ ನನಗೆ ಇಷ್ಟವಾಯಿತು. "ಖಲಾಸ್" ನನ್ನದು ಕಾರ್ಪೊರೇಟರ್ ಪಾತ್ರ ಎಂದರು ಉಮೇಶ್ ಬಣಕಾರ್.
ಕುರಿ ರಂಗ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಕ್ಲಾರೆನ್ಸ್ ಅಲೇನ್ ಕ್ರಿಸ್ಟ ಸಂಗೀತದ ಬಗ್ಗೆ ಹಾಗೂ ಸಿದ್ದಾರ್ಥ್ ರಾಜ್ ಅವರು ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು. ಈ ಚಿತ್ರಕ್ಕೆ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಲಿದ್ದಾರೆ.
ಸಮಾಜಕ್ಕೆ ಉತ್ತಮ ಸಂದೇಶ ನೀಡಲಿರುವ "ಖಲಾಸ್" ಚಿತ್ರಕ್ಕೆ ದುನಿಯಾ ಬದಲಾದರೂ ಮಗ್ಗಿ ಬದಲಾಗಲ್ಲ ಎಂಬ ಅಡಿಬರಹವಿದೆ.