ಈಗ ಬರ್ತಿದಾರೆ ಮನೆಗೊಬ್ಬ ಮಂಜುನಾಥ
ಹಿಂದೆ ನವರಸ ನಾಯಕ ಜಗ್ಗೇಶ್ ಅವರು ಎದ್ದೇಳು ಮಂಜುನಾಥ ಚಿತ್ರದಲ್ಲಿ ಸೋಂಬೇರಿಯಾಗಿ ಕಾಣಿಸಿಕೊಂಡಿದ್ದರು, ಈಗ ಮನೆಗೊಬ್ಬ ಮಂಜುನಾಥನನ್ನು ಹುಟ್ಟಿಸಹೊರಟಿದ್ದಾರೆ ನಿರ್ದೇಶಕ ರವಿರಾಮ್. ಈ ಹಿಂದೆ ರಾಜಾಸಿಂಹ ಎಂಬ ಚಿತ್ರ ನಿರ್ದೇಶಿಸಿದ್ದ ರವಿರಾಮ್ ಈಗ ಮನೆಗೊಬ್ಬ ಮಂಜುನಾಥ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ವಿಷಯಾಧಾರಿತ ಚಿತ್ರವಾಗಿದ್ದು, ಕಮರ್ಷಿಯಲ್ ಅಂಶಗಳನ್ನು ಬಿಟ್ಟು ಕೌಟುಂಬಿಕ ಕಥೆಗೆ ಚಿತ್ರದಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ. ವಂಶಿ, ನಾಣಿ, ಸೀನ ಎಂಬ ಜೀವನದಲ್ಲಿ ಗೊತ್ತುಗುರಿ ಇಲ್ಲದ ಮೂರು ಸೋಂಬೇರಿ ಪಾತ್ರಗಳ ಮೇಲೆ ಸಾಗುವ ಈ ಕಥೆಯಲ್ಲಿ ಕೇಶವ್, ಪವನ್ ಹಾಗೂ ಕಾರ್ತೀಕ್ ನಾಯಕರಾಗಿ ನಟಿಸಿದ್ದು, ಉಗ್ರಂ ರೆಡ್ಡಿ ಅವರು ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೊನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಪುನೀತ್ ನೆನದು ಭಾವುಕರಾದ ಉಗ್ರಂ ರೆಡ್ಡಿ ನನ್ನ ಅಪ್ಪುದು 15 ವರ್ಷಗಳ ಒಡನಾಟ, 10 ಸಿನಿಮಾದಲ್ಲಿ ಅವರ ಜೊತೆ ಆಕ್ಟ್ ಮಾಡಿದ್ದೇನೆ. ನನ್ನ ತಮ್ಮ ಕೇಶವ ಈ ಸಿನಿಮಾ ಮಾಡುತ್ತಿದ್ದಾನೆ. ನಾನು ನಿರ್ದೇಶಕ ರವಿರಾಮ್ ಜೊತೆ ದೇವತೆ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಒಮ್ಮೆ ಅವರು ಸಿಕ್ಕಾಗ ಹೀರೋಯಿಸಂ ಇಲ್ಲದ ಕಂಟೆಂಟ್ ಇರುವ ಕಥೆ ಮಾಡಿದ್ದು, ಪ್ರೊಡ್ಯೂಸರ್ ಹುಡುಕಾಟದಲ್ಲಿದ್ದೇನೆ ಎಂದರು. ನನ್ನ ತಮ್ಮನಿಗೆ ಈ ವಿಷಯ ತಿಳಿಸಿದೆ. ಆತನೂ ಒಪ್ಪಿದ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದೇವೆ. ಚಿತ್ರದಲ್ಲಿ ನನ್ನದು ಈ ಹುಡುಗರನ್ನು ದಾರಿ ತಪಪಿಸುವಂಥ ಸೋಮಣ್ಣ ಎಂಬ ವ್ಯಕ್ತಿಯ ಪಾತ್ರ ಎಂದರು. ನಂತರ ಚಿತ್ರದ ನಿರ್ದೇಶಕ ರವಿರಾಮ್ ಮಾತನಾಡಿ ಒಂದು ಸಣ್ಣ ಎಳೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ವಸ್ತುನಿಷ್ಠ ಕಥೆ, ಜೀವನದಲ್ಲಿ ಸೀರಿಯಸ್‍ನೆಸ್ ಇಲ್ಲದ 3 ಪಾತ್ರಗಳು, ಏನೂ ಕಷ್ಟಪಡದೆ ಒಮ್ಮೆಗೇ ಶ್ರೀಮಂತರಾಗಬೇಕು ಎಂದುಕೊಂಡಿರುತ್ತಾರೆ, ಅವರಂದುಕೊಂಡಿದ್ದು ಆಗುತ್ತಾ ಇಲ್ವಾ ಅನ್ನೋದೇ ಚಿತ್ರದ ಕಥೆ ಎಂದು ಹೇಳಿದರು. ನಂತರ ಚಿತ್ರದ ನಾಯಕ ಹಾಗೂ ನಿರ್ಮಾಪಕ ಕೇಶವ್ ಮಾಡನಾಡುತ್ತ ನನ್ನದು ನಾಣಿ ಎನ್ನುವ ಪಾತ್ರ, ಹೆಂಡ್ತಿ ಮಗು ಇದ್ರೂ ಸೋಬೇರಿ ಥರ ಬದುಕುತಿರುತ್ತಾನೆ. ಒಂದೇ ದಿನದಲ್ಲಿ ಕೋಟಿ ಕೋಟಿ ದುಡ್ಡು ತರುತ್ತೇನೆ ಅಂತ ತನ್ನ ಮಾವನಿಗೆ ಭಾಷೆ ಕೊಟ್ಟು 5 ವರ್ಷಗಳಾದರೂ ಹಣ ತಂದಿರುವುದಿಲ್ಲ. ನಮ್ಮ ಬ್ಯಾನರ‍್ನಿಂದ ವರ್ಷಕ್ಕೊಂದು ಚಿತ್ರ ಮಾಡುವ ಯೋಚನೆಯಿದೆ ಎಂದು ಹೇಳಿದರು. ಬಿಎಲ್, ಬಾಬು ಚಿತ್ರದ ಛಾಯಾಗ್ರಾಹಕರು, ದತ್ತಣ್ಣ, ಕೃಷ್ಣೋಜಿರಾವ್, ಅಲ್ಲದೆ ನಿರ್ಮಾಪಕ ಮಹೇಂದ್ರ ಮಣೋತ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.