25ನೇ ದಿನಕ್ಕೆ *ಗ್ರೂಫಿ*
ಸೆಲ್ಫೀ ಫೋಟೋ ತೆಗೆದುಕೊಳ್ಳುವ ಹವ್ಯಾಸ ಅತಿಯಾದಾಗ ಅದು ಏನೆಲ್ಲ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಉತ್ತಮ ಸಂದೇಶದೊಂದಿಗೆ ಹೇಳುವ ಚಿತ್ರ ಗ್ರೂಫಿ, ವಾರಗಳ ಹಿಂದೆ ಬಿಡುಗಡೆಯಾಗಿತ್ತು, ಡಿ.ರವಿ ಅರ್ಜುನ್ ಅವರ ನಿರ್ದೇಶನದ ಈ ಚಿತ್ರಕ್ಕೆ ಬಿಡುಗಡೆಯಾದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು. ಆ ಚಿತ್ರವೀಗ ೨೫ ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆದಿದೆ. ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡಿತು.
ನಿರ್ದೇಶಕ ರವಿ ಅರ್ಜುನ್ ಮಾತನಾಡುತ್ತ ನಮ್ಮ ಸಿನಿಮಾಗೆ ಎಲ್ಲ ಕಡೆಯಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ, ಚಿತ್ರ ವೀಕ್ಷಿಸಿದ ಎಲ್ಲರೂ ಚೆನ್ನಾಗಿದೆ ಅಂತಲೇ ಹೇಳುತ್ತದ್ದಾರೆ, ಆದರೂ ಜನ ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ, ತಂತ್ರಜ್ಞರು, ಸ್ನೇಹಿತರು ಒಳ್ಳೇ ಪ್ರಯತ್ನ ಮಾಡಿದ್ದೀರಿ ಅಂತ ಕಾಲ್ ಮಾಡಿ ಹೇಳುತ್ತಿದ್ದಾರೆ. ಜನರ ಪ್ರತಿಕ್ರಿಯೆ ಕಂಡು ನಮಗೂ ಖುಷಿಯಾಗಿದೆ. ನಮ್ಮ ಚಿತ್ರ ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಮಲ್ಟಿಪ್ಲೆಕ್ಸ್ ನಲ್ಲಿ ರಿಲೀಸಾಗಿತ್ತು, ಸದ್ಯ ಒರಾಯನ್ ಮಾಲ್‌ನಲ್ಲಿ ೨ ಷೋ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿಂಗಲ್ ಸ್ಕ್ರೀನ್ ಗಳಲ್ಲೂ ರಿಲೀಸ್ ಮಾಡುವ ಯೋಜನೆಯಿದೆ, ಥಿಯೇಟರ್ ಸಮಸ್ಯೆಯನ್ನು ನಾವು ಫಿಲಂ ಚೇಂಬರ್ ಬಳಿ ಹೇಳಿಕೊಂಡಾಗ ಎನ್.ಎಂ.ಸುರೇಶ್ ಅವರು ನಮಗೆ ಸಹಕಾರ ನೀಡುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಕೆಜಿ ಸ್ವಾಮಿ ಮಾತನಾಡುತ್ತ ನಮ್ಮ ಚಿತ್ರಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ, ಮಾಧ್ಯಮದವರು ಚಿತ್ರಕ್ಕೆ ಪ್ರತಿ ಹಂತದಲ್ಲೂ ಉತ್ತಮ ಬರವಣೆಗೆಯ ಮೂಲಕ ಹೆಚ್ಚಿನ ಪ್ರಚಾರ ನೀಡಿದ್ದಾರೆ, ನಾವು ಚಿತ್ರವನ್ನು ರಿಲೀಸ್ ಮಾಡಿದಾಗ ೮ ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧ ಇತ್ತು. ಹಾಗಾಗಿ ಹೆಚ್ಚಿನ ಸೆಂಟರ್‌ಗಳಲ್ಲಿ ರಿಲೀಸ್ ಮಾಡಲು ಆಗಿದ್ದಿಲ್ಲ. ಈಗ ಎಲ್ಲರೂ ಕಾಲ್‌ಮಾಡಿ ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. ಜನ ಧೈರ್ಯದಿಂದ ಥಿಯೇಟರ್‌ಗೆ ಬರಬೇಕಿದೆ ಎಂದು ಹೇಳಿದರು. ಚಿತ್ರತಂಡಕ್ಕೆ ಸಹಕಾರ ನೀಡಲು ಆಗಮಿಸಿದ್ದ ಎನ್‌ಎಂ ಸುರೇಶ್ ಮಾತನಾಡಿ ಈ ಸಿನಿಮಾ ಬಗ್ಗೆ ಒಳ್ಳೇ ರಿಪೋರ್ಟ್ ಇದೆ ಎಂದು ನಾನೂ ಕೇಳಿದ್ದೇನೆ. ಆದರೆ ಜನ ಬರುತ್ತಿಲ್ಲ, ಹಿಂದೆ ೩ ಅಡಿ ಐದು ಅಂಗುಲ ಚಿತ್ರಕ್ಕೂ ಹೀಗೇ ಆಗಿತ್ತು. ಆನಂತರ ಅದು ಮಲ್ಟಿಪ್ಲೆಕ್ಸ್ ನಲ್ಲೇ ನೂರು ದಿನಗಳ ಪ್ರದರ್ಶನ ಕಂಡಿತು, ಈ ಸಿನಿಮಾ ಚೆನ್ನಾಗಿದ್ದರೂ ನಮ್ಮಲ್ಲೇ ತುಳಿಯುವ ಕೆಲಸ ಆಗ್ತಿದೆ, ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಸಿಗ್ತಿಲ್ಲ, ನೀವು ರಿಲೀಸ್‌ಗೂ ಮುನ್ನವೇ ನಮ್ಮಬಳಿ ಬಂದಿದ್ದರೆ, ಇಷ್ಟೊತ್ತಿಗೆ ೨೫ ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿತ್ತು, ನಾನೂ ಕೆಲವು ಚಿತ್ರಮಂದಿರದವರಿಗೆ ಕಾಲ್ ಮಾಡಿ ಹೇಳಿದ್ದೇನೆ ಎಂದು ಎನ್ ಎಂ ಸುರೇಶ್ ತಿಳಿಸಿದ್ದಾರೆ. ಉಳಿದಂತೆ ಚಿತ್ರತಂಡ ಇದೇ ವಿಚಾರದ ಬಗ್ಗೆ ಮಾತನಾಡಿತು.