Dilpasand.Film Title Launch.

Monday, September 27, 2021

319

 

*"ದಿಲ್ ಪಸಂದ್" ಗೆ ಚಾಲನೆ ನೀಡಿದ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್.‌*

 

ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ. ನಿಶ್ವಿಕ ನಾಯ್ಡು - ಮೇಘ ಶೆಟ್ಟಿ ನಾಯಕಿಯರು.

 

ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆಯಿತು.

 

ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು. ಚಿತ್ರಕ್ಕೆ "ದಿಲ್ ಪಸಂದ್" ಎಂದು ಹೆಸರಿಡಲಾಗಿದೆ.

 

ಡಾರ್ಲಿಂಗ್ ಕೃಷ್ಣ ಅವರು‌ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರಾಗಿ ನಿಶ್ವಿಕನಾಯ್ಡು‌ ಹಾಗೂ ಮೇಘ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ,‌‌ ರಂಗಾಯಣ ರಘು, ತಬಲ‌ ನಾಣಿ ಮುಂತಾದವರು ‌ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ನನ್ನ ಹದಿಮೂರು ವರ್ಷದ ವೃತ್ತಜೀವನದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಭಾಗವಹಿಸಿರುವ ಮೊದಲ ಚಲನಚಿತ್ರ ಸಮಾರಂಭವಿದು. ಅದಕ್ಕೆ ಕಾರಣ ನನ್ನ‌ ಸುಮಂತ್ ಕ್ರಾಂತಿ ಅವರ ಗೆಳೆತನ.

ನಾನು ಅಪ್ಟಟ್ಟ ಕನ್ನಡಾಭಿಮಾನಿ.‌ ಕನ್ನಡ ಚಲನಚಿತ್ರಗಳು ನನಗೆ ಪ್ರಾಣ. ಡಾ||ರಾಜ್ ಅಭಿನಯದ ಮಯೂರ ನನ್ನ ಮೇಲೆ ಪ್ರಭಾವ ಬೀರಿದ ಚಿತ್ರ.  ನಾಟಕದಲ್ಲಿ ಅಭಿನಯಿಸಿದ್ದ ಅನುಭವವೂ ಇದೆ.‌‌ ವಿ ಆರ್ ಜೋಕರ್ಸ್ ಎಂಬ ನಾಟಕವನ್ನು ಬರೆದು, ನಿರ್ದೇಶನ ಮಾಡಿ, ಅಭಿನಯಿಸಿದ್ದೆ. ಅದು ಈಗಲೂ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಅದಕ್ಕೆ ಕೆಲವು ಪ್ರಶಸ್ತಿಗಳು ಬಂದಿವೆ. ನನಗೆ ಬರವಣಿಗೆ ಇಷ್ಟ.  ಪಿಯುಸಿಯಲ್ಲಿದ್ದಾಗ ಗದಗ್ ನಲ್ಲಿ ಬ್ಲಾಕ್ ಟಿಕೆಟ್ ‌ಮಾರಿದ್ದನ್ನು, ಹೀಗೆ ಹಲವು ವಿಷಯಗಳನ್ನು  ರವಿ ಡಿ ಚನ್ನಣ್ಣನವರ್ ಈ ಸಮಾರಂಭದಲ್ಲಿ ನೆನಪಿಸಿಕೊಂಡರು.‌ ತುಂಬು ಹೃದಯದಿಂದ ಚಿತ್ರತಂಡಕ್ಕೆ ಒಳಿತನ್ನು ಹಾರೈಸಿದರು.

ನನ್ನಂತಹ ಯವಪೀಳಿಗೆಗೆ ನಿಮ್ಮ ಮಾತುಗಳೇ ಸ್ಪೂರ್ತಿ. ನಿಮ್ಮಂತಹ ಸಹೃದಯಿಗಳಿಂದ ನನ್ನ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಸಂತಸ ತಂದಿದೆ ಎಂದು ರವಿ ಡಿ ಚನ್ನಣ್ಣನವರ್ ಅವರಿಗೆ ಧನ್ಯವಾದ ತಿಳಿಸಿದ ನಿರ್ದೇಶಕ ಶಿವತೇಜಸ್, "ದಿಲ್ ಪಸಂದ್" ಬಗ್ಗೆ ಮಾಹಿತಿ ನೀಡಿದರು.

ಇದು ಲಾಕ್ ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ಈ ಕಥೆ ಸಿದ್ದವಾದ ಕೂಡಲೇ ನಾಯಕ ಕೃಷ್ಣ ಅವರಿಗೆ ಹೇಳಿದೆ. ಈ ಸಂದರ್ಭಕ್ಕೆ ಸೂಕ್ತವಾದ ಕಥೆ  ಮುಂದುವರೆಯಿರಿ ಎಂದರು ಕೃಷ್ಣ.

ತಾವೇ ಒಬ್ಬ ನಿರ್ದೇಶಕನಾಗಿದ್ದರೂ, ನನ್ನ ಕಥೆ ಇಷ್ಟಪಟ್ಟು, ನಿರ್ಮಾಣಕ್ಕೆ ಮುಂದಾಗಿರುವ ಸುಮಂತ್ ಕ್ರಾಂತಿ ಅವರ ಬಗ್ಗೆ ಎಷ್ಟು ಹೇಳಿದರು‌ ಕಡಿಮೆ. ಡಾರ್ಲಿಂಗ್ ಕೃಷ್ಣ, ನಿಶ್ವಿಕನಾಯ್ಡು‌, ಮೇಘ ಶೆಟ್ಟಿ, ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ ಮುಂತಾದ  ಕಲಾವಿದರ ಅಭಿನಯ, ಕರ್ನಾಟಕದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ನಮ್ಮ ಚಿತ್ರಕ್ಕಿರಲಿದೆ ಎಂದು ತಮ್ಮ ತಂಡದ ಪರಿಚಯ ನೀಡಿದ ನಿರ್ದೇಶಕರು, ಇದು ಆರರಿಂದ ಅರವತ್ತರ ವರೆಗೂ ಎಲ್ಲರಿಗೂ ಹಿಡಿಸುವ ಚಿತ್ರ.‌"ದಿಲ್ ಪಸಂದ್" ನಷ್ಟೇ ನಮ್ಮ ಚಿತ್ರವೂ‌ ಸಿಹಿಯಾಗಿರಲಿದೆ. ಇನ್ನೊಂದು  ‌ಅರ್ಥದಲ್ಲಿ ಹೇಳುವುದಾದರೆ ಮನಸ್ಸಿಗೆ ಹತ್ತಿರವಾದವರು ಅಂದುಕೊಳ್ಳಬಹುದು ಎಂದು ಶಿವತೇಜಸ್ ಶೀರ್ಷಿಕೆ ಬಗ್ಗೆ ಹೇಳಿದರು.

 

ಈ ಕಾರ್ಯಕ್ರಮಕ್ಕೆ ರವಿ ಸರ್ ಬಂದಿರುವುದು ನನಗೆ ಹೆಚ್ಚು ಖುಷಿ‌. ನನಗೆ ಮೊದಲಿನಿಂದಲೂ ಪೊಲೀಸ್ ಅಧಿಕಾರಿಗಳು ಅಂದರೆ ಇಷ್ಟ. ಏಕೆಂದರೆ ನನ್ನ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು ಎಂದು ಮಾತು ಆರಂಭಿಸಿದ ಡಾರ್ಲಿಂಗ್ ಕೃಷ್ಣ, ನನ್ನ ಅಪ್ಪನಿಗೆ ನಾನು ಪೊಲೀಸ್ ಆಗಲಿ ಎಂಬ ಆಸೆಯಿತ್ತು. ನಾನು ನಟನಾದೆ. "ಲವ್ ಮಾಕ್ಟೇಲ್" ಚಿತ್ರದ ಮೂಲಕ ಬರಹಗಾರನೂ ಆದೆ. ನನ್ನ ಈ ಬೆಳವಣಗೆಯಲ್ಲಿ ನನ್ನ ಹೆಂಡತಿ ಮಿಲನ ಪಾತ್ರ ದೊಡ್ಡದು ಎಂದರು.

ಇನ್ನೂ ಈ ಚಿತ್ರದ ಬಗ್ಗೆ ಹೇಳುವುದಾದರೆ, ನಿರ್ದೇಶಕ ಶಿವತೇಜಸ್ ಕಥೆ ಹೇಳುವಷ್ಟು ಹೊತ್ತು ನನ್ನ ಮುಖದಲ್ಲಿ ನಗುವಿತ್ತು. ಕಾಮಿಡಿ, ಲವ್ ಹೀಗೆ ಎಲ್ಲವೂ ಈ ಚಿತ್ರದಲ್ಲಿದೆ. ಪ್ರೇಕ್ಷಕರಿಗೂ "ದಿಲ್ ಪಸಂದ್" ಹಿಡಿಸುತ್ತದೆ. ನಿಮ್ಮ ಪ್ರೋತ್ಸಾಹ ನಮ್ಮ ತಂಡದ ಮೇಲಿರಲಿ ಎಂದರು ಕೃಷ್ಣ.

 

  "ದಿಲ್ ಪಸಂದ್" ಈ ಹೆಸರೆ ಆಕರ್ಷಣೀಯವಾಗಿದೆ. ನಾನು ಈವರೆಗೂ ನಟಿಸಿರುವ ಚಿತ್ರಗಳಲ್ಲಿ ಒಂದೆಳೆ ಲವ್ ಸ್ಟೋರಿ ಇರುತ್ತಿತ್ತು. 

ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಒಳ್ಳೆಯ ತಂಡದೊಂದಿಗೆ ನಟಿಸಲು ಅವಕಾಶ ನೀಡಿರುವ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ನಿಶ್ವಿಕನಾಯ್ಡು‌.

 

"ದಿಲ್ ಪಸಂದ್" ನನಗೆ ಇಷ್ಟವಾದ ಸಿಹಿತಿಂಡಿ. ನನ್ನ ಮನೆಗೆ ಬಂದು ನಿರ್ದೇಶಕರು ಕಥೆ ಹೇಳಿದಾಗ ನಾನು ಕಥೆ ಕೇಳಿ ತುಂಬಾ ಉತ್ಸುಕಳಾದೆ. ಕೃಷ್ಣ, ನಿಶ್ವಿಕನಾಯ್ಡು‌ ಅವರೊಂದಿಗೆ ಮೊದಲ ಬಾರಿ ನಟಿಸುತ್ತಿದ್ದೇನೆ. ಕಲಾವಿದರಾದ ನಮಗೆ ಈ ಕಥೆ ಇಷ್ಟು ಹಿಡಿಸಿದೆ ಅಂದರೆ, ಅಭಿಮಾನಿಗಳು ಸಹ ನಮ್ಮ ಚಿತ್ರ ಇಷ್ಟ ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು ಚಿತ್ರದ ಮತ್ತೊಬ್ಬ ನಾಯಕಿ ಮೇಘ ಶೆಟ್ಟಿ (ಜೊತೆಜೊತೆಯಲಿ ಖ್ಯಾತಿ).

 

ನಮ್ಮ ಸ್ನೇಹಕ್ಕಾಗಿ ತಮ್ಮ ಕಾರ್ಯದೊತ್ತಡದ ನಡುವೆ ಈ ಸಮಾರಂಭಕ್ಕೆ ಆಗಮಿಸಿರುವ ರವಿ ಡಿ ಚನ್ನಣ್ಣನವರ್ ಅವರಿಗೆ ತುಂಬು ಹೃದಯದ ಧನ್ಯವಾದ.

ಶಿವತೇಜಸ್ ತುಂಬಾ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನನಗೂ ಹಿಡಿಸಿತು. ನನ್ನ ಹೆಂಡತಿ ಹೆಸರು ರಶ್ಮಿ. ಅವರ ಹೆಸರಿನಲ್ಲಿ ರಶ್ಮಿ ಫಿಲಂಸ್ ಮೂಲಕ ನಿರ್ಮಣ ಮಾಡುತ್ತಿರುವ ಮೂರನೇ ಚಿತ್ರವಿದು ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ಸುಮಂತ್ ಕ್ರಾಂತಿ.

 

ನಟ ತಬಲನಾಣಿ, ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ, ಛಾಯಾಗ್ರಾಹಕ ಶೇಖರ್ ಚಂದ್ರ ಚಿತ್ರದ ಬಗ್ಗೆ ಮಾತುಗಳಾಡಿದರು.

 ಕಾರ್ಯಕ್ರಮಕ್ಕೆ ಆಗಮಿಸಿದ್ದ ನಿರ್ಮಾಪಕ ಟಿ.ಆರ್ ಚಂದ್ರಶೇಖರ್, ಯೋಗಾನಂದ್(ಉದಯಟಿವಿ), ಕೆನಡಾ ಕಿರಣ್ ಮುಂತಾದ ಗಣ್ಯರು ತಮ್ಮ ಅದ್ಭುತ ಮಾತುಗಳ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.

Copyright@2018 Chitralahari | All Rights Reserved. Photo Journalist K.S. Mokshendra,