*ಪ್ರಣಯರಾಜನ ಕನಸಿನ ಕೂಸು "ಆರ್ಟ್ ಎನ್ ಯು" ಗೆ ಅಧಿಕೃತ ಚಾಲನೆ* .
ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ, ಕಳೆದ 54 ವರ್ಷಗಳಿಂದ ಕನ್ನಡ ಕಲಾದೇವಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರಣಯರಾಜ ಶ್ರೀನಾಥ್ ಅವರ ಕನಸಿನ ಕೂಸು "ಆರ್ಟ್ ಎನ್ ಯು".
ಈ ಸಂಸ್ಥೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಖ್ಯಾತ ನಟ ಉಪೇಂದ್ರ ಈ ಸಂಸ್ಥೆಯನ್ನು ಉದ್ಘಾಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ನಾನು ಬರಲಿಕ್ಕೆ ಆಗುತ್ತಿಲ್ಲ. ಶ್ರೀನಾಥ್ ಸರ್ ಅವರ ಈ ಪ್ರಯತ್ನಕ್ಕೆ ಒಳ್ಳೆಯದಾಗಲಿ. ಸದಾ ನಾನು ಅವರೊಂದಿಗಿರುತ್ತೇನೆ ಎಂಬ ಧ್ವನಿ ಸಂದೇಶ ಕಳುಹಿಸಿ ಉಪೇಂದ್ರ ಶುಭ ಕೋರಿದರು.
" ಆರ್ಟ್ ಎನ್ ಯು" ಸಂಸ್ಥೆಯಲ್ಲಿ ನಟನೆ, ನಿರ್ದೇಶನ, ಕಥೆ ಹಾಗೂ ಬರವಣಿಗೆ, ಸಿನಿಮಾ ತಯಾರಿಕೆ, ತಂತ್ರಜ್ಞಾನ, ಧ್ವನಿ ತರಭೇತಿ , ಪ್ರಸಾದನ ಹೀಗೆ ಸಿನಿಮಾಗೆ ಸಂಬಂಧಿಸಿದ ಎಲ್ಲಾ ಶಿಕ್ಷಣವನ್ನು ನುರಿತ ತಂತ್ರಜ್ಞರಿಂದ ನೀಡಲಾಗುತ್ತದೆ.
ಸಾಫ್ಟ್ ವೇರ್ ಉದ್ಯೋಗಿಗಳಿಗೆ ಅವರ ಸಂಸ್ಥೆಯಲ್ಲೇ ರಂಗಮೂಲ ತರಭೇತಿ ನೀಡುವ ಯೋಜನೆಯೂ ಇದೆ.
ಶ್ರೀನಾಥ್ ಅವರ ಈ ಪ್ರಯತ್ನಕ್ಕೆ ಅವರ ಪತ್ನಿ ಗೀತಾ, ಮಗ ರೋಹಿತ್ ಹಾಗೂ ಸೊಸೆ ಮಂಗಳ ಅವರ ಪ್ರೋತ್ಸಾಹವಿದೆ.
ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಯಿತು. ಸುಮಾರು ನಲವತ್ತರಿಂದ, ಐವತ್ತು ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀನಿ. ನಾನು ಬಂದಾಗಿನ ಚಿತ್ರರಂಗವೇ ಬೇರೆ. ಈಗಲೇ ಬೇರೆ. ಆದರೆ ಕಲಿಕೆ ಮಾತ್ರ ನಿರಂತರ. ನನ್ನ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರೇ ಎಂದಿಗೂ ನನ್ನ ಗುರುಗಳು ಅವರಿಂದ ಕಲಿತದ್ದು ಸಾಕಷ್ಟು. ಆಗಿನ ಕಾಲ , ಈಗಿನ ಕಾಲ ಅನ್ನುವುದಕ್ಕಿಂತ ವರ್ತಮಾನಕ್ಕೆ ನಾವು ಹೊಂದಿಕೊಳ್ಳಬೇಕು.
ನಾನು ಈಗಲೂ ಕಲಿಯುತ್ತಿದ್ದೇನೆ. ಈವರೆಗೂ ನಾನು ಕಲಿತಿರುವುದನ್ನು ಮತ್ತೊಬ್ಬರಿಗೆ ಕಲಿಸುವ ಉದ್ದೇಶದಿಂದ ಈ "ಆರ್ಟ್ ಎನ್ ಯ" ಸಂಸ್ಥೆ ಆರಂಭಿಸುತ್ತಿದ್ದೇನೆ. ನಾನು ಕೂಡ ಇಲ್ಲಿ ನಟನಾಸಕ್ತರಿಗೆ ನಟನೆ ಬಗ್ಗೆ ಹೇಳಿ ಕೊಡಲಿದ್ದೇನೆ. ಇದ್ದಲ್ಲದೆ ಸಿನಿಮಾ ನಿರ್ಮಾಣಕ್ಕೆ ಬೇಕಾದ ಬೇರೆ ಬೇರೆ ವಿಷಯಗಳ ಬಗ್ಗೆ ಕೂಡ ತರಭೇತಿ ನೀಡಲಾಗುವುದು. ಈ ಕಾರ್ಯಕ್ಕೆ ನನ್ನ ಕುಟುಂಬ ನೀಡುತ್ತಿರುವ ಬೆಂಬಲ ಅಪಾರ. ನನ್ನ ಮಗ ರೋಹಿತ್ ಹಾಗೂ ಸೊಸೆ ಮಂಗಳ ಈ ಸಂಸ್ಥೆಯ ಉಸ್ತುವಾರಿ ಹೊತ್ತಿಕೊಂಡಿದ್ದಾರೆ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪ್ರಣಯರಾಜ ಶ್ರೀನಾಥ್.
ನಟನೆ, ನಿರ್ದೇಶನ, ಸ್ಕ್ರೀನ್ ಪ್ಲೇ, ಫ್ಯಾಷನ್, ನಿರೂಪಣೆ ಸೇರಿದಂತೆ ಒಟ್ಟು ಏಳು ತರಗತಿಗಳು ಫೆಬ್ರವರಿಯಲ್ಲಿ ಆರಂಭವಾಗಲಿದೆ.ಆಯಾ ವಿಭಾಗದಲ್ಲಿ ಪರಿಣಿತಿ ಹೊಂದಿರುವವರನ್ನು ತರಭೇತಿ ನೀಡಲು ನೇಮಿಸಲಾಗಿದೆ. ನಮ್ಮ ಜೊತೆ ಇನ್ನೂ ಎರಡು ಸಂಸ್ಥೆಗಳು ಜೊತೆಗಿರಲಿದೆ. "ಆರ್ಟ್ ಎನ್ ಯು" ಅಪ್ಪ ಹಾಗೂ ನಾನು ನೋಡಿಕೊಳ್ಳುತ್ತೇವೆ. ಇದ್ದಲದೇ "ಕಾಲ್ ಬ್ಯಾಕ್" ಎಂಬ ಸಂಸ್ಥೆ ಸಹ ನಾನು ಆರಂಭಿಸುತ್ತಿದ್ದು, "ಆರ್ಟ್ ಎನ್ ಯು" ನಲ್ಲಿ ತರಭೇತಿ ಪಡೆದವರು ಇದರಲ್ಲಿ ತಮ್ಮ ಬಗ್ಗೆ ಹಾಕಿಕೊಳ್ಳಬಹುದು. ಇದರ ಉದ್ದೇಶ ಏನೆಂದರೆ, ಹೊಸ ಸಿನಿಮಾ ಆರಂಭಿಸುವವರಿಗೆ ಒಂದೇ ಕಡೆ ಅವರಿಗೆ ಬೇಕಾದ ಕಲಾವಿದರು, ತಂತ್ರಜ್ಞರು ಸಿಗುತ್ತಾರೆ. ಇನ್ನೂ ಆಯಾ ಆಸಕ್ತರನ್ನು ಸಂದರ್ಶಿಸಿ, ಅವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ನಿರ್ಧರಿಸಿ ಶೂಲ್ಕ ನಿಗದಿಪಡಿಸಲಾಗುವುದು ಎಂದು ಶ್ರೀನಾಥ್ ಪುತ್ರ ರೋಹಿತ್ ಮಾಹಿತಿ ನೀಡಿದರು.